ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನಗಳು ಬೇಗ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅಜಿತ್ ಪವಾರ್ ಅವರು ತನ್ನ ಹಲವು ಶಾಸಕರೊಂದಿಗೆ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ ಬಳಿಕ ಆರಂಭವಾದ ರಾಜಕೀಯ ಬೆಳವಣಿಗೆಗಳು ಇನ್ನೂ ಮುಂದುವರಿದಿವೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಯ ಎರಡು ಬಣಗಳಾದ ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣದ ನಡುವಿನ ಹಗ್ಗಜಗ್ಗಾಟ ಇನ್ನೂ ನಡೆಯತ್ತಲೇ ಇದೆ.
ಎನ್ ಸಿಪಿ ಪಕ್ಷವು ತನಗೆ ಸೇರಬೇಕು ಎಂದು ಅಜಿತ್ ಪವಾರ್ ಹೇಳಿಕೊಳ್ಳುತ್ತಿರುವಂತೆ ಅವರ ಬಣಕ್ಕೆ ಹಿನ್ನಡೆಯಾಗುವ ಲಕ್ಷಣ ಕಾಣುತ್ತಿದೆ. ಯಾಕೆಂದರೆ ಅಜಿತ್ ಬಣದಲ್ಲಿ ಗುರುತಿಸಿಕೊಂಡಿದ್ದ ಮತ್ತೊಬ್ಬ ಶಾಸಕರು ಶರದ್ ಪವಾರ್ ಬಣಕ್ಕೆ ಬೆಂಬಲ ನೀಡಿದ್ದಾರೆ.
ಈ ಮೊದಲು ಇಬ್ಬರು ಶಾಸಕರು ಅಜಿತ್ ಬಣದಿಂದ ಶರದ್ ಬಣಕ್ಕೆ ಜಂಪ್ ಮಾಡಿದ್ದರು. ಇದೀಗ ಮೂರನೆಯವರಾಗಿ ಮಕ್ರಂದ್ ಜಾಧವ್ ಪಾಟೀಲ್ ಕೂಡಾ ಶರದ್ ಪವಾರ್ ಗೆ ಬೆಂಬಲ ಸೂಚಿಸಿದ್ದಾರೆ. ಈ ಹಿಂದೆ ರಾಮರಾಜ್ ಜಿ ನಾಯ್ಕ್ ಮತ್ತು ದೀಪಕ್ ಚೌಹಾಣ್ ಅವರು ಶರದ್ ಕ್ಯಾಂಪ್ ಗೆ ಮರಳಿದ್ದರು.
ಇದನ್ನೂ ಓದಿ:“RRR-2” ಸಿನಿಮಾಕ್ಕೆ ರಾಜಮೌಳಿ ನಿರ್ದೇಶನ ಇರಲ್ಲ.. ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?
ಮಕರಂದ್ ಜಾಧವ್ ಪಾಟೀಲ್ ಅವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಾಯ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಮಕರಂದ್ ಅವರ ನೂರಾರು ಬೆಂಬಲಿಗರು ಕೂಡ ಅವರ ಹಾದಿಯಲ್ಲೇ ಶರದ್ ಪಾಳಯಕ್ಕೆ ಮರಳಿದ್ದಾರೆ. ಇನ್ನೊಂದೆಡೆ ಶರದ್ ಪವಾರ್ ಬಣದ ಕಿರಣ್ ಲಹಮಟೆ ಅಜಿತ್ ಪಾಳಯಕ್ಕೆ ತೆರಳಿದ್ದಾರೆ. ಲಹಮೇಟ್ ಮೊದಲು ಅಜಿತ್ ಪವಾರ್ ಜೊತೆ ಹೋಗಿ, ನಂತರ ಹಿರಿಯ ಪವಾರ್ ಪಾಳಯಕ್ಕೆ ಹಿಂತಿರುಗಿ ಈಗ ಮತ್ತೆ ಅಜಿತ್ ಪವಾರ್ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಜುಲೈ 2 ರಂದು ಅಜಿತ್ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಅವರು ಸಹ ಅಲ್ಲಿ ಹಾಜರಿದ್ದರು.
ಅಜಿತ್ ಪವಾರ್ ಅವರು ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರಿದ ನಂತರ, ಎನ್‌ಸಿಪಿ ಎರಡು ಬಣಗಳಾಗಿ ಒಡೆದಿದೆ. ಮಾವ ಶರದ್ ಪವಾರ್ ಮತ್ತು ಅವರ ಸೋದರಳಿಯ ಅಜಿತ್ ಪವಾರ್ ನಡುವೆ ಪಕ್ಷದ ನಿಯಂತ್ರಣಕ್ಕಾಗಿ ಹೋರಾಟ ಪ್ರಾರಂಭವಾಗಿದೆ. ಜುಲೈ 5 ರಂದು ಎರಡೂ ಬಣಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಸಭೆ ನಡೆಸಿದ್ದವು. ಅಜಿತ್ ಬಣದ ಸಭೆಯಲ್ಲಿ 35ಕ್ಕೂ ಹೆಚ್ಚು ಶಾಸಕರ ಉಪಸ್ಥಿತಿ ಹೇಳಿಕೊಂಡಿದ್ದು, 15 ಶಾಸಕರು ಶರದ್ ಬಣ ತಲುಪಿದ್ದಾರೆ. ಆದರೆ, ಅಜಿತ್ ತಮ್ಮ ಬಳಿ 40ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಸಂಪುಟದಲ್ಲಿ ಎನ್‌ಸಿಪಿ 53 ಶಾಸಕರನ್ನು ಹೊಂದಿದ್ದು, ಪಕ್ಷವನ್ನು ನಿಯಂತ್ರಿಸಲು ಅಜಿತ್ ಪವಾರ್‌ಗೆ 36 ಶಾಸಕರ ಬೆಂಬಲ ಬೇಕಾಗುತ್ತದೆ.