Advertisement

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ

10:08 AM Nov 01, 2024 | Team Udayavani |

ಬೆಂಗಳೂರು: ʼಕರ್ನಾಟಕ’ ನಾಮಕರಣಕ್ಕೆ 50 ವಸಂತ ಪೂರೈಸಿದ ಸಂಭ್ರಮದಲ್ಲಿ ರಾಜ್ಯ­ಕ್ಕೊಂದು ಪ್ರತ್ಯೇಕ ನಾಡಧ್ವಜ ಇದ್ದಿದ್ದರೆ ಈ “ಸುವರ್ಣ ಘಳಿಗೆ’ಯ ಸಂಭ್ರಮ ಇಮ್ಮಡಿಗೊಳ್ಳುತ್ತಿತ್ತು. ಹೆಚ್ಚು- ಕಡಿಮೆ 6 ವರ್ಷಗಳ ಹಿಂದೆ  ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಸಂಬಂಧ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿತ್ತು. ಇದಾದ ಮೇಲೆ  ಪತ್ರ  ಬರೆದಿತ್ತು. ಈಗ ಇನ್ನೊಮ್ಮೆ ಪತ್ರ ಬರೆದು ಬಳಿಕ ಸಿಎಂ  ಜತೆ ದೆಹಲಿಗೆ ತೆರಳಿ ಒತ್ತಡ ಹೇರಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮುಂದಾಗಿದ್ದಾರೆ.

Advertisement

ಈ ವಿಚಾರದಲ್ಲಿ ಪರ-ವಿರೋಧಗಳೂ ಇವೆ. ಒಂದು ವೇಳೆ ಸರಕಾರ ಈ ನಿಟ್ಟಿನಲ್ಲಿ ಯಶಸ್ವಿಯಾದರೆ, ಜಮ್ಮು-ಕಾಶ್ಮೀರ ಬಳಿಕ ಸ್ವಂತ ಧ್ವಜ ಹೊಂದಿದ 2ನೇ ರಾಜ್ಯ ಕರ್ನಾಟಕ ಆಗಲಿದೆ.  ಇಂತಹ ಹಲವು ವಿಚಾರಗಳ ಬಗ್ಗೆ ಸಚಿವರು ಮುಕ್ತವಾಗಿ “ಉದಯವಾಣಿ’ ಯೊಂದಿಗೆ ಮಾತನಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 1.0 ಅವಧಿಯ ಕೊನೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜದ ಪರಿಕಲ್ಪನೆ ಮುನ್ನೆಲೆಗೆ ಬಂದಿತ್ತು. 5 ವರ್ಷ ಕಳೆದರೂ ಹಾಗೇ ಉಳಿದಿದೆ. ಈಗ ಮತ್ತೆ ಅವರೇ ಅಧಿಕಾರದಲ್ಲಿದ್ದಾರೆ. ನೀವು ಕನ್ನಡ ಮತ್ತು ಸಂಸ್ಕೃತಿ ಸಚಿವರಿದ್ದೀರಿ. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಏನು?

ಪ್ರತ್ಯೇಕ ನಾಡಧ್ವಜ ವಿನ್ಯಾಸಗೊಳಿಸಿದ್ದು ನಿಜ. ಆದರೆ  ಅದಕ್ಕೆ ಕಾನೂನಿನ ಮಾನ್ಯತೆ ಕೊಡುವ ಅಧಿಕಾರ ಇರುವುದು ಕೇಂದ್ರ ಸರಕಾರಕ್ಕೆ. ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದು ಅನುಮತಿ ಕೋರಿದ್ದೇವೆ. ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ. ಮುಖ್ಯಮಂತ್ರಿ ಗಮನವನ್ನೂ ಸೆಳೆದಿದ್ದೇನೆ. ಕನ್ನಡಪರ ಹೋರಾಟಗಾರರೊಂದಿಗೂ ಚರ್ಚಿಸಿ­ದ್ದೇನೆ. ಈಗ ಕಾನೂನು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಮತ್ತೂಮ್ಮೆ ಕೇಂದ್ರಕ್ಕೆ ಪತ್ರ ಬರೆಯ ಲಾಗುವುದು. ಸಾಧ್ಯವಾದರೆ ಮುಖ್ಯಮಂತ್ರಿ ಜತೆಗೇ ಕೇಂದ್ರಕ್ಕೆ ಭೇಟಿ ನೀಡಿ, ಮನವರಿಕೆ ಮಾಡಿಕೊಡುತ್ತೇನೆ.

ಬೆಂಗಳೂರು ಸೇರಿ ರಾಜ್ಯಾದ್ಯಂತ ವಹಿವಾಟು ನಡೆಸುವ ಮಳಿಗೆಗಳು, ಸರಕಾರಿ ಸ್ವಾಯತ್ತ ಮತ್ತು ಖಾಸಗಿ ಸಂಸ್ಥೆಗಳು ಶೇ. 60 ಕನ್ನಡ ನಾಮಫ‌ಲಕ ಕಡ್ಡಾಯ ಇನ್ನೂ ಪಾಲನೆ ಆಗುತ್ತಿಲ್ಲ…

Advertisement

ನಾಮಫ‌ಲಕ 60:40 ಆದೇಶ ನೀಡಲಾಗಿದೆ. ಈ ಬಗ್ಗೆ ನ್ಯಾಯಾಲಯ ಕೂಡ ಸರಕಾರದ ನಿಲು ವನ್ನು ಎತ್ತಿಹಿಡಿದಿದೆ. ಇದರಲ್ಲಿ ಯಾವುದೇ ರಾಜೀ ಇಲ್ಲ. ರಾಜ್ಯಾದ್ಯಂತ ಶೀಘ್ರ ಅನುಷ್ಠಾನ­ಗೊಳಿಸ ಲಾಗುವುದು. ಇದು ಸರಕಾರ ಆದ್ಯತೆಯಾಗಿದ್ದು, ಅನುಮಾನವೇ ಬೇಡ.

ಕನ್ನಡಿಗರಿಗೆ ದೊಡ್ಡಮಟ್ಟದಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಶಿಫಾರಸುಗಳ ಅನುಷ್ಠಾನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇನ್ನೂ ಪೂರ್ಣಪ್ರಮಾಣ­ದಲ್ಲಿ ಜಾರಿಯಾಗುತ್ತಿಲ್ಲ. ಏನು ಹೇಳುತ್ತೀರಿ?

ಒಂದಿಷ್ಟು ಮಹಿಷಿ ವರದಿ ಭಾಗಶಃ ಅನುಷ್ಠಾನ­ವಾಗಿದ್ದು, 40-45 ಶಿಫಾರಸುಗಳನ್ನು ಮಾಡಲಾ­ಗಿದೆ. ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಕೆಲವು ತೊಡಕುಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಬೇಕಿದೆ. ಮೂರ್‍ನಾಲ್ಕು  ಸಭೆ­ಗಳನ್ನೂ ಮಾಡಿದ್ದೇನೆ.

ಸರಕಾರದ ಪೂರಕ ಕ್ರಮಗಳ ಮಧ್ಯೆಯೂ ರಾಜ್ಯದಲ್ಲಿ ಪರಭಾಷಿಕರ ಹಾವಳಿ ನಿಂತಿಲ್ಲ ಏಕೆ?

ಪರಭಾಷಿಕರ ಹಾವಳಿ ಬೆಂಗಳೂರಿನಲ್ಲಿ ಮಾತ್ರ ಇದೆ. ಬೇರೆಡೆ ಅಷ್ಟಾಗಿಲ್ಲ. ನಮ್ಮವರು ಉದಾರಿಗಳು. ನಾವು ಕನ್ನಡ ಕಲಿಸುವುದಕ್ಕಿಂತ ಅವರ ಭಾಷೆ ಕಲಿಯುವ ಪ್ರಯತ್ನ ಮಾಡುತ್ತೇವೆ. ಈಗಾಗಲೇ ಕನ್ನಡದಲ್ಲಿ ವಿಶೇಷ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸರಕಾರದ ಜತೆ ಮಾಧ್ಯಮಗಳು ಸೇರಿದಂತೆ ಎಲ್ಲ ಕಡೆಯಿಂದ ಉತ್ತೇಜನ ಸಿಗಬೇಕಿದೆ.

ಇಲಾಖೆ ಅಡಿ ಬರುವ ಪ್ರಾಧಿಕಾರ ಮತ್ತು ಅಕಾಡೆಮಿಗಳಲ್ಲಿ ಪಾರದರ್ಶಕ ತರುವಲ್ಲಿ ಸರಕಾರದ ಕ್ರಮಗಳು ಏನು?

ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಮಾಡಿದ್ದೇವೆ. ಪಾರದರ್ಶಕ ತರಲು ಅವರೊಂದಿಗೆ ಇನ್ನಷ್ಟು ಕುಳಿತು ಚರ್ಚಿ­ಸಬೇಕಿದೆ. ಸುವರ್ಣ ಕರ್ನಾಟಕದ ಕಾರ್ಯ­ಕ್ರಮದಲ್ಲಿ ಅವರನ್ನು ಹೆಚ್ಚು ಪಾಲ್ಗೊಳ್ಳುವಂತೆ ಮಾಡಿದ್ದೇವೆ. ಅದಕ್ಕೆ ಕಾಯಕಲ್ಪ ಕೊಡುವ ಬಗ್ಗೆಯೂ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಇನ್ನಷ್ಟು ಅನುದಾನ ಮತ್ತು ಪ್ರೋತ್ಸಾಹ ಕೊಡುವ ಬಗ್ಗೆ ಸಿಎಂ ಜತೆಗೂ ಚರ್ಚೆ ಮಾಡಿದ್ದೇವೆ. ಏನೇನು ಆಗಬೇಕು ಎನ್ನುವುದರ ಬಗ್ಗೆ ವರದಿ ನೀಡುವಂತೆ ಹೇಳಿದ್ದೇವೆ.

ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರು. ಆಗ ಕರ್ನಾಟಕ ಎಂದು ನಾಮಕರಣಗೊಂಡಿತು. ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?

ಇದು ಕಾಕತಾಳೀಯವಾದರೂ ಸೌಭಾಗ್ಯ. ಜತೆಗೆ ಇದೇ ಕಾಲಘಟ್ಟದಲ್ಲಿ ನಾನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಅಭಿಮಾನ ಮತ್ತು ಖುಷಿ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಒಂದು ವರ್ಷ ನಿರಂತರ ಕೆಲಸ ಮಾಡಿದ್ದೇವೆ. ಶುಕ್ರವಾರ (ನ. 1) ಇದಕ್ಕೆ ತೆರೆಬೀಳಲಿದೆ. ಇಡೀ ವರ್ಷದ ಕನ್ನಡದ ಪಯಣ ಅತ್ಯಂತ ತೃಪ್ತಿ ತಂದಿದೆ. ಸರಕಾರ ಕೂಡ ಇದಕ್ಕೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ನೀಡಿ ಸಹಕರಿಸಿದೆ.

ವಿಜಯ ಕುಮಾರ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next