Advertisement

ಮಂಡ್ಯ ಆಸ್ಪತ್ರೆಯಲ್ಲಿ ಮತ್ತೂಂದು ಮಗು ದುರ್ಮರಣ

08:14 AM Feb 14, 2018 | Harsha Rao |

ಮಂಡ್ಯ: ರೋಗ ನಿರೋಧಕ ಲಸಿಕೆ (ಪೆಂಟಾವಲೆಂಟ್‌) ಹಾಕಿಸಿದ 24 ಗಂಟೆಯೊಳಗೆ ಚಿನ್ನಗಿರಿ ದೊಡ್ಡಿಯ ಎರಡು ಮಕ್ಕಳು ಮೃತಪಟ್ಟ ಕರಾಳ ನೆನಪು ಇನ್ನೂ ಜನರ ಮನಸಿನಲ್ಲಿ ಹಸಿರಾಗಿರುವಾಗಲೇ ಮತ್ತೆ ಅದೇ ಪೆಂಟಾವಲೆಂಟ್‌ ಲಸಿಕೆ ಹಾಕಿಸಿದ ಸಂಬಂಧ ಎರಡು ತಿಂಗಳ ಮಗುವೊಂದು ಸಾವಿಗೀಡಾಗಿರುವ ಪ್ರಕರಣ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.

Advertisement

ಇದರೊಂದಿಗೆ ರೋಗ ನಿರೋಧಕ ಲಸಿಕೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ ನಾಲ್ಕಕ್ಕೇರಿದೆ. ಕಳೆದ ಗುರುವಾರ ಮಳವಳ್ಳಿ
ತಾಲೂಕು ಹಾಡ್ಲಿ ಗ್ರಾಮದ ಸಂತೋಷ್‌ ಹಾಗೂ ಹೇಮಾ ದಂಪತಿ ತಮ್ಮ ಎರಡು ತಿಂಗಳ ಮಗುವಿಗೆ ಪೆಂಟಾವಲೆಂಟ್‌ ಲಸಿಕೆ ಹಾಕಿಸಿದ್ದರು. ಆನಂತರದಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಭಾನುವಾರ ರಾತ್ರಿ ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಈಗಾಗಲೇ ಪೆಂಟಾವಲೆಂಟ್‌ ಲಸಿಕೆ ಹಾಕಿದ 24 ಗಂಟೆಯೊಳಗೆ ಮಂಡ್ಯ ತಾಲೂಕು ಚಿನ್ನಗಿರಿ ದೊಡ್ಡಿಯ ಎರಡು ಹಸುಳೆಗಳು ಸಾವನ್ನಪ್ಪಿ, ಐದು ಹಸುಳೆಗಳು ಅಸ್ವಸ್ಥಗೊಂಡಿದ್ದ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಈಗ ಮಳವಳ್ಳಿಯ ಪ್ರಕರಣವೂ ಸೇರಿಕೊಂಡಿ ದ್ದರಿಂದ ಜನರು ಭಯಭೀತರಾಗಿದ್ದಾರೆ.

ಹಾಡ್ಲಿ ಗ್ರಾಮದ ಸಂತೋಷ್‌ ಮತ್ತು ಹೇಮಾ ದಂಪತಿಯು ಎರಡು ತಿಂಗಳ ಹಸುಳೆಗೆ ಫೆ.8ರಂದು ಅಗಸನಪುರ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೆಂಟಾ  ವಲೆಂಟ್‌ ರೋಗ ನಿರೋಧಕ ಲಸಿಕೆ ಹಾಕಿಸಿದ್ದರು. ಈ ಲಸಿಕೆ ಹಾಕಿದರೆ ಜ್ವರ 
ಬರುತ್ತದೆ, ಗಾಬರಿ ಯಾಗಬೇಡಿ ಎಂದುವೈದ್ಯ ಸಿಬ್ಬಂದಿ  ಪೋಷಕರಿಗೆ ಮೊದಲೇ ತಿಳಿಸಿದ್ದರು. ಮರುದಿನ ಮಗುವಿಗೆ ಜ್ವರ ಬಂದಿದ್ದರಿಂದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ನೀಡಿದ್ದ ಜ್ವರದ ಟಾನಿಕ್‌ ಅನ್ನು ಕುಡಿಸಿದ ಬಳಿಕ ಜ್ವರ ಕಡಿಮೆಯಾಗಿತ್ತು. ಆದರೆ, ಶನಿವಾರ ಬೆಳಗ್ಗೆ ಮಗುವಿಗೆ ಕೆಮ್ಮು ಶುರುವಾಗಿದೆ. ಇದರಿಂದ ಗಾಬರಿಗೊಳಗಾದ ಪೋಷಕರು ಮಗುವನ್ನು ಮಳವಳ್ಳಿಯಲ್ಲಿ ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಸೋಂಕು ಉಂಟಾಗಿದೆ ಎಂದು ಹೇಳಿದ್ದಾರೆ. ಕೂಡಲೇ ಮಗುವನ್ನು ಮಂಡ್ಯದ ಖಾಸಗಿ ನರ್ಸಿಂಗ್‌ ಹೋಂಗೆ ದಾಖಲಿಸಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿನ ವೈದ್ಯರು ಮಿಮ್ಸ್‌ಗೆ ಕರೆದೊ  ಯ್ಯುವಂತೆ ತಿಳಿಸಿದ್ದಾರೆ. ಕೊನೆಗೆ ಸಂತೋಷ್‌ ಮತ್ತು ಹೇಮಾ ಮಗುವನ್ನು ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ನೀಡಿದ ಚಿಕಿತ್ಸೆ ಫ‌ಲಕಾರಿ ಯಾಗದೆ ಭಾನುವಾರ ರಾತ್ರಿ ಮಗು ಮೃತಪಟ್ಟಿದೆ. ಶವ ಪರೀಕ್ಷೆ ನಡೆಸದೆ ವೈದ್ಯರು ಮಗುವನ್ನು
ಪೋಷಕರಿಗೆ ಹಸ್ತಾಂತರಿಸಿರುವುದು ಅನುಮಾನಕ್ಕೆಡೆ ಮಾಡಿದೆ.

ಪೋಷಕರ ನಿರ್ಲಕ್ಷ್ಯ ಕಾರಣ: ಡಾ. ಹನುಮಂತ ಗುರುವಾರ ಹಾಕಿಸಿರುವ ಪೆಂಟಾವಲೆಂಟ್‌ ಲಸಿಕೆಯಿಂದ ಮಗುವಿಗೆ ತೊಂದರೆಯಾಗಿಲ್ಲ. ಶುಕ್ರವಾರ ಜ್ವರ ಬಂದು ನಿಂತಿತ್ತು. ಶನಿವಾರ ಮಗುವಿಗೆ ಕೆಮ್ಮು ಶುರುವಾಗಿದೆ. ಇದನ್ನು ಪೋಷಕರು ನಿರ್ಲಕ್ಷ್ಯ
ಮಾಡಿದ್ದಾರೆ. ಇದು ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಮಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಹನುಮಂತ ಪ್ರಸಾದ್‌ ಪ್ರತಿಕ್ರಿಯೆ ನೀಡಿದ್ದಾರೆ.

ಪಂಚನಾಮೆ ನಡೆಸಲಿಲ್ಲ: ಮಗುವಿನ ಪಂಚನಾಮೆ ನಡೆಸಲು ಪೋಷಕರು ಒಪ್ಪದ ಕಾರಣ ಪಂಚನಾಮೆ ನಡೆಸಲಿಲ್ಲ. ಈ
ಸಂಬಂಧ ಪೋಷಕರು ನಮಗೆ ಲಿಖೀತವಾಗಿ ಪತ್ರ ಬರೆದುಕೊಟ್ಟಿದ್ದಾರೆ. ಇದರಲ್ಲಿ ಮಿಮ್ಸ್‌ ವೈದ್ಯರು, ಸಿಬ್ಬಂದಿ ನಿರ್ಲಕ್ಷವೇನೂ ಇಲ್ಲ. ಪೋಷಕರು ಒಪ್ಪಿದರೆ ಈಗಲೂ ಪಂಚನಾಮೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದರು.

Advertisement

ಮಗುವಿನ ಸಾವಿಗೆ ನ್ಯುಮೋನಿಯಾ ಸಮಸ್ಯೆ ಕಾರಣವೇ ಹೊರತು ಪೆಂಟಾವಲೆಂಟ್‌ ಲಸಿಕೆ ಅಲ್ಲ. ಮಕ್ಕಳಿಗೆ ನೀಡಲಾಗುವ ಪೆಂಟಾವಲೆಂಟ್‌ ಲಸಿಕೆಯಿಂದ ಯಾವ ತೊಂದರೆಯೂ ಆಗುವುದಿಲ್ಲ. ಮಕ್ಕಳ ಪೋಷಕರು ಆತಂಕಪಡಬೇಕಾದ ಅಗತ್ಯವಿಲ್ಲ. ಪೆಂಟಾವಲೆಂಟ್‌ ಲಸಿಕೆ ಹಾಕುವುದನ್ನು ನಿಲ್ಲಿಸುವುದಿಲ್ಲ.
 ●ಡಾ.ಕೆ.ಮೋಹನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ 

ಲಸಿಕೆ ಹಾಕಿಸುವ ಮುನ್ನ ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿತ್ತು. ಆದರೆ, ಪೆಂಟಾವಲೆಂಟ್‌ ರೋಗನಿರೋಧಕ ಲಸಿಕೆ ಹಾಕಿಸಿದ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಲಸಿಕೆ ಪರಿಣಾಮದಿಂದಲೇ ನನ್ನ ಮಗು ಸಾವನ್ನಪ್ಪಿದೆ.
 ●ಸಂತೋಷ್‌, ಮಗುವಿನ ತಂದೆ

Advertisement

Udayavani is now on Telegram. Click here to join our channel and stay updated with the latest news.

Next