ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ದಾಳಿ ಮುಂದುವರಿದಿದ್ದು, ಶನಿವಾರ (ಅಕ್ಟೋಬರ್ 15) ಉಗ್ರರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವೈಮಾನಿಕ ಸಮೀಕ್ಷೆ ಕೆಲಸಕ್ಕೆ ಬರುವುದಿಲ್ಲ: ಮತ್ತೆ ಸ್ವಪಕ್ಷದ ವಿರುದ್ಧ ವರುಣ್ ಟೀಕೆ
ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದ ಸಮೀಪದ ನಿವಾಸದ ಸಮೀಪ ಪುರಾನ್ ಕೃಷ್ಣ ಭಟ್ ಎಂಬವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಕೂಡಲೇ ಭಟ್ ಅವರನ್ನು ಶೋಪಿಯಾನ್ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಘಟನೆಯ ಬಳಿಕ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರನ್ನು ಸೆರೆಹಿಡಿಯಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ. ಕೃಷ್ಣ ಭಟ್ ಅವರು ತಮ್ಮ ಮಗಳು (7ವರ್ಷ) ಹಾಗೂ ಮಗ(5ವರ್ಷ)ನನ್ನು ಶಾಲೆಗೆ ಕಳುಹಿಸಲು ಮನೆಯಿಂದ ಹೊರಬರುತ್ತಿದ್ದಾಗ ಗುಂಡಿನ ದಾಳಿ ನಡೆಸಿರುವುದಾಗಿ ಸಂಬಂಧಿಕರು ತಿಳಿಸಿರುವುದಾಗಿ ವರದಿಯಾಗಿದೆ.
ಕೆಲವು ತಿಂಗಳ ಹಿಂದಷ್ಟೇ ಕಾಶ್ಮೀರ ಜಿಲ್ಲೆಯ ಸೇಬು ತೋಟದಲ್ಲಿ ಉಗ್ರರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಘಟನೆಯಲ್ಲಿ ಅವರ ಸಹೋದರ ಕೂಡಾ ಗಾಯಗೊಂಡಿದ್ದರು.
ರಾಜ್ಯದಲ್ಲಿ ಇಂತಹ ಕೊಲೆ, ಹಿಂಸಾಚಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಸಾಧ್ಯತೆ ಇದ್ದಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ಜಮ್ಮು-ಕಾಶ್ಮೀರ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.