Advertisement

ರಾಜ್ಯಕ್ಕೆ ಮತ್ತೂಂದು ಭರ್ಜರಿ ಬಂಡವಾಳ-ಫಾಕ್ಸ್‌ಕಾನ್‌ ಜತೆ ರಾಜ್ಯ ಸರ್ಕಾರದ ಮತ್ತೂಂದು ಒಪ್ಪಂದ

10:19 PM Aug 02, 2023 | Team Udayavani |

ಬೆಂಗಳೂರು: ಹೂಡಿಕೆದಾರರಿಗೆ ಕರ್ನಾಟಕ ಸ್ವರ್ಗ ಎಂಬುದು ಮತ್ತೆ ಸಾಬೀತಾಗಿದೆ. ರಾಜ್ಯದಲ್ಲಿ ಬರೋಬ್ಬರಿ 5 ಸಾವಿರ ಕೋಟಿ ರೂ. ಮೊತ್ತದ ಬಂಡವಾಳ ಹೂಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಫಾಕ್ಸ್‌ಕಾನ್‌ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಈ ಯೋಜನೆಗಳಿಂದ 13 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

Advertisement

ಚೆನ್ನೈನ  ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಫೋನ್‌ ಎನ್‌ಕ್ಲೋಸರ್ಸ್‌ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಸೆಮಿಕಾನ್‌ ಉಪಕರಣಗಳ ಯೋಜನೆ ಜಾರಿ ಸಂಬಂಧ ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಈ ಕುರಿತು ಬುಧವಾರ ಮಾಹಿತಿ ಹಂಚಿಕೊಂಡಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಈ ಎರಡೂ ಒಪ್ಪಂದಗಳು, ಈ ಮೊದಲು ಮಾಡಿಕೊಂಡಿದ್ದ 14 ಸಾವಿರ ಕೋಟಿ ಮೊತ್ತದ ಆ್ಯಪಲ್‌ ಫೋನ್‌ ತಯಾರಿಕಾ ಘಟಕ ಹೊರತಾದವುಗಳಾಗಿವೆ ಎಂದಿದ್ದಾರೆ. ಇದಕ್ಕೂ ದೊಡ್ಡಬಳ್ಳಾಪುರ ಸಮೀಪ ಭೂಮಿ ನೀಡುವ ಕೆಲಸ ನಡೆಯುತ್ತಿದೆ. ತಂತ್ರಜ್ಞಾನ ಮತ್ತು ಆವಿಷ್ಕಾರ ವಲಯದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಫಾಕ್ಸ್‌ಕಾನ್‌ ಮುಂದೆ ಬಂದಿರುವುದು ಸಂತೋಷದ ವಿಷಯ. ಬಂಡವಾಳ ಆಕರ್ಷಣೆ ಮತ್ತು ಕಂಪನಿಗಳಿಗೆ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸಲು ನಮ್ಮ ನೀತಿಗಳು ಪೂರಕವಾಗಿವೆ ಎಂದು ಹೇಳಿದ್ದಾರೆ.

ಒಪ್ಪಂದದಲ್ಲಿರುವ ಅಂಶಗಳು
ಫೋನ್‌ ಎನ್‌ಕ್ಲೋರ್ಸ್‌- ಎಫ್ಐಐ
ಐಫೋನ್‌ಗಳ ಮೆಕ್ಯಾನಿಕಲ್‌ ಎನ್‌ಕ್ಲೋಸರ್ಸ್‌ನಂತಹ ಸ್ಮಾರ್ಟ್‌ಫೋನ್‌ನ ಉಪ ಘಟಕಗಳನ್ನು ತಯಾರಿಸುವ ಸಂಸ್ಥೆಯಾದ ಫಾಕ್ಸ್‌ಕಾನ್‌ ಇಂಡಸ್ಟ್ರಿಯಲ್‌ ಇಂಟರ್‌ ನೆಟ್‌ (ಎಫ್ಐಐ)ನ ಹೂಡಿಕೆ ಮೊತ್ತ 350 ದಶಲಕ್ಷ ಡಾಲರ್‌ (3,000 ಕೋಟಿ ರೂ.) ಯೋಜನೆಯಡಿ 12,000 ಜನರಿಗೆ ಉದ್ಯೋಗ ದೊರೆಯಲಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಎಫ್ಐಐ ಉದ್ದೇಶಿಸಿದೆ.

ಸೆಮಿಕಾನ್‌ ಉಪಕರಣಗಳು
ಅಪ್ಲೈಡ್‌ ಮೆಟೀರಿಯಲ್ಸ್‌ ಸಹಯೋಗದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನಾ ಉಪಕರಣಗಳ ತಯಾರಿಸುವ ಸಂಸ್ಥೆಯ ಯೋಜಿತ ಯೋಜನೆಯ ಹೂಡಿಕೆ ಮೊತ್ತ 250 ದಶಲಕ್ಷ ಡಾಲರ್‌(2,000 ಕೋಟಿ ರೂ.). ಇದರಿಂದ 1000 ಜನರಿಗೆ ಉದ್ಯೋಗ ದೊರೆಯಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಹೈಟೆಕ್‌ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಪಾರ್ಕ್‌ – 2ನೇ ಹಂತದಲ್ಲಿ ಈ ಯೋಜನೆಗಾಗಿ 35 ಎಕರೆ ಭೂಮಿಯನ್ನು ಅಂತಿಮಗೊಳಿಸಲಾಗಿದೆ.

Advertisement

13 ಸಾವಿರ– ಸೃಷ್ಟಿಯಾಗುವ ಉದ್ಯೋಗ
35 ಎಕರೆ– ಯೋಜನೆಗಾಗಿ ಭೂಮಿ

Advertisement

Udayavani is now on Telegram. Click here to join our channel and stay updated with the latest news.

Next