ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಾಲಿವುಡ್ ಕ್ಯಾಮೆರಾಮೆನ್‌ಗಳು ಕಾಲಿಟ್ಟಿರುವುದು ಹೊಸದೇನಲ್ಲ. ಕಪ್ಪು-ಬಿಳುಪು ಸಿನಿಮಾದಲ್ಲೇ ಹಾಲಿವುಡ್ ಛಾಯಾಗ್ರಾಹಕರನ್ನು ಪರಿಚಯಿಸಿದ್ದು, ಕನ್ನಡ ಚಿತ್ರರಂಗದ ಹೆಮ್ಮೆ. ಈಗ ಮತ್ತೊಬ್ಬ ಹಾಲಿವುಡ್ ಕ್ಯಾಮೆರಾಮೆನ್ ಆಗಮಿಸಿದ್ದಾರೆ. ಹೆಸರು ಸ್ಟೀವ್ ರೇಸ್. ಆಸ್ಟ್ರೇಲಿಯಾದ ಸ್ಟೀವ್‌ರೇಸ್ ಹಿರಿಯ ಛಾಯಾಗ್ರಾಹಕರು. ಇದೇ ಮೊದಲ ಬಾರಿಗೆ ಭಾರತೀಯ ಚಿತ್ರರಂಗ ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಅಂದಹಾಗೆ, ಸ್ಟೀವ್‌ರೇಸ್ ಕ್ಯಾಮೆರಾ ಹಿಡಿಯುತ್ತಿರುವ ಸಿನಿಮಾದ ಹೆಸರು “ಡೇವಿಡ್’. ಇದು ಸಂಪೂರ್ಣ ಹೊಸಬರ ಚಿತ್ರ. ಇದೊಂದು ಮರ್ಡರ್ ಮಿಸ್ಟರಿ ಇರುವ ಸಸ್ಪೆನ್ಸ್ ಸಿನಿಮಾ. ಈ ಸಿನಿಮಾಗೆ ಹಾಲಿವುಡ್ ತಂತ್ರಜ್ಞಾನ ಬಳಸುವ ಯೋಚನೆ ನಿರ್ದೇಶಕ ಭಾರ್ಗವ ಯೋಗಂಬರ್ ಅವರಿಗೆ ಇದೆ. ಹಾಗಾಗಿಯೇ, ಚಿತ್ರಕ್ಕೆ ಆಸ್ಟ್ರೇಲಿಯಾದ ಸ್ಟೀವ್ ರೇಸ್ ಅವರನ್ನು ಕ್ಯಾಮೆರಾ ಹಿಡಿಯುವಂತೆ ಮಾಡಿದ್ದಾರೆ ಭಾರ್ಗವ.
ಕ್ಯಾಮೆರಾಮೆನ್ ಸ್ಟೀವ್ ರೇಸ್, ಈಗಾಗಲೇ ಹಲವು ಹಾಲಿವುಡ್ ಸಿನಿಮಾಗಳಿಗೆ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಶುರುವಾಗಿದ್ದ “ಉದ್ಯಾನ್ ಎಕ್ಸ್‌ಪ್ರೆಸ್’ ಸಿನಿಮಾಗೆ ಸ್ಟೀವ್ ರೇಸ್ ಕ್ಯಾಮೆರಾಮೆನ್ ಆಗಿದ್ದರು. ಆದರೆ, ಆ ಸಿನಿಮಾ ಕೆಲವು ಕಾರಣಗಳಿಂದ ಸೆಟ್ಟೇರಲೇ ಇಲ್ಲ. ಆ ಸಂದರ್ಭದಲ್ಲಿ “ಡೇವಿಡ್’ ಚಿತ್ರದ ನಿರ್ದೇಶಕರಿಗೆ ಸ್ಟೀವ್ ರೇಸ್ ಅವರ ಪರಿಚಯವಾಗಿದೆ.
ಛಾಯಾಗ್ರಹಣದಲ್ಲೂ ಆಸಕ್ತಿ ಇದ್ದ ಭಾರ್ಗವ್ ಯೋಗಂಬರ್‌ಗೆ ಆಗ, ಸ್ಟೀವ್ ರೇಸ್ ಆಸ್ಟ್ರೇಲಿಯಾದಲ್ಲಿ ತಯಾರಾದ “ಟ್ಯಾಕ್ಸಿ ಕ್ಲಬ್’ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದರು. ಆ ಪ್ರೀತಿಯಿಂದ ಈಗ ಭಾರ್ಗವ್ ನಿರ್ದೇಶನದ ಮೊದಲ ಸಿನಿಮಾಗೆ, ಸ್ಟೀವ್ ರೇಸ್ ಮೊದಲ ಬಾರಿಗೆ ಕನ್ನಡದಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಹಾಗೆ ನೋಡಿದರೆ, ಕನ್ನಡಕ್ಕೆ ಹಾಲಿವುಡ್ ಕ್ಯಾಮೆರಾಮೆನ್‌ಗಳು ಹೊಸಬರೇನಲ್ಲ.
ಈಗಾಗಲೇ 1970 ರಲ್ಲಿ ತೆರೆಕಂಡ ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ಅದ್ಭುತ ಚಿತ್ರ “ಸಂಸ್ಕಾರ’ ಚಿತ್ರಕ್ಕೆ ಆಗಲೇ, ಟಾಮ್ ಕೋನ್ ಅವರು ಕ್ಯಾಮೆರಾ ಹಿಡಿದಿದ್ದರು. ಅವರು ಸಹ ಆಸ್ಟ್ರೇಲಿಯಾದವರೇ ಅನ್ನೋದು ವಿಶೇಷ. ಇನ್ನು, 2015 ರಲ್ಲಿ ತೆರೆಕಂಡ ಕನ್ನಡದ ಸೂಪರ್ ಹಿಟ್ ಸಿನಿಮಾ “ರಂಗಿತರಂಗ’ ಚಿತ್ರದಲ್ಲೂ ಲ್ಯಾನ್ಸ್ ಕಾಪ್ಲನ್ ಕ್ಯಾಮೆರಾ ಹಿಡಿದಿದ್ದರು. ಈಗ ಆಸ್ಟ್ರೇಲಿಯಾದ ಸ್ಟೀವ್ ರೇಸ್ ಸರದಿ. ಅವರು “ಡೇವಿಡ್’ ಚಿತ್ರದಲ್ಲಿ ರೆಡ್ ಎಪಿಕ್ ಕ್ಯಾಮೆರಾ ಬಳಸಲಿದ್ದಾರಂತೆ.
“ಇಂಡಿಯನ್ ಸಿನಿಮಾಗಳಲ್ಲಿ ಕೆಲಸ ಮಾಡುವ ಆಸೆ ಇತ್ತು. ಅದು “ಡೇವಿಡ್’ ಮೂಲಕ ಈಡೇರಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಇಲ್ಲಿ ತಾಂತ್ರಿಕತೆ ಕೆಲಸ ಮುಖ್ಯವಾಗಿರಲಿದೆ. ಕನ್ನಡಕ್ಕೆ ಇದೊಂದು ಹೊಸಬಗೆಯ ಚಿತ್ರ ಆಗಲಿದೆ. ಹಾಲಿವುಡ್ ಲೆವೆಲ್‌ಗೆ ಚಿತ್ರ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಉತ್ಸಾಹಿ ಯುವಕರ ಜತೆ ಕೆಲಸ ಮಾಡೋದು ಖುಷಿಕೊಟ್ಟಿದೆ’ ಎಂಬುದು ಸ್ಟೀವ್ ರೇಸ್ ಮಾತು.