ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅಭಿನಯದ “ತ್ರಿವಿಕ್ರಮ’ ಚಿತ್ರಕ್ಕೆ ಮುಂಬೈ ಬೆಡಗಿ ಆಕಾಂಕ್ಷ ನಾಯಕಿ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ಒಬ್ಬ ನಾಯಕಿ ಅಲ್ಲ, ಇನ್ನೂ ಒಬ್ಬ ನಾಯಕಿ ಇದ್ದಾಳೆ ಎಂಬುದು ಈಗ ಗೊತ್ತಾಗಿದೆ. ಹೌದು, “ತ್ರಿವಿಕ್ರಮ’ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಇದ್ದಾರೆ. ಅದು ಬೇರಾರೂ ಅಲ್ಲ, ಅಕ್ಷರಗೌಡ. ಯೋಗರಾಜ್ಭಟ್ ನಿರ್ದೇಶನದ “ಪಂಚತಂತ್ರ’ ಚಿತ್ರಕ್ಕೆ ನಾಯಕಿಯಾಗಿದ್ದ ಅಕ್ಷರಗೌಡ ಈಗ “ತ್ರಿವಿಕ್ರಮ’ ಚಿತ್ರಕ್ಕೂ ನಾಯಕಿಯಾಗಿದ್ದಾರೆ.
ಸದ್ಯಕ್ಕೆ ಅಕ್ಷರಗೌಡ, ತೆಲುಗು ಹೀರೋ ನಾಗಾರ್ಜುನ ಅವರೊಂದಿಗೆ ಒಂದು ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ. ಆ ಚಿತ್ರದಲ್ಲಿ ಸಮಂತಾ, ಕೀರ್ತಿಸುರೇಶ್ ಜೊತೆ ಅಕ್ಷರಗೌಡ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ವಿಕ್ರಮ್ ಅವರ “ತ್ರಿವಿಕ್ರಮ’ ಚಿತ್ರವನ್ನು ಸಹನಾಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲರಿಗೂ ಈ ಚಿತ್ರಕ್ಕೆ ಚಾಲನೆ ಯಾವಾಗ ಎಂಬ ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಈಗ ಸ್ವತಃ ನಿರ್ದೇಶಕರೇ ಉತ್ತರಿಸಿದ್ದಾರೆ. ಹೌದು, ಆಗಸ್ಟ್ 10 ರಂದು “ತ್ರಿವಿಕ್ರಮ’ ಚಿತ್ರಕ್ಕೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ.
ಈ ಕುರಿತು ಹೇಳುವ ನಿರ್ದೇಶಕ ಸಹನಾಮೂರ್ತಿ, “ಆ.10 ರಂದು ಜಿಟಿ ವರ್ಲ್ಡ್ಮಾಲ್ನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಅಂದು ದೊಡ್ಡ ಈವೆಂಟ್ ಮಾಡಲಾಗುತ್ತಿದ್ದು, ಅಲ್ಲೊಂದು ವಿಶೇಷತೆ ಇದೆ. ಆ ಮೂಲಕ ರವಿಚಂದ್ರನ್ ಅವರ ಪುತ್ರ ವಿಕ್ರಮ್ ಅವರ “ತ್ರಿವಿಕ್ರಮ’ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಗಲಿದೆ’ ಎಂದು ವಿವರ ಕೊಡುತ್ತಾರೆ ಸಹನಾಮೂರ್ತಿ. ನಾಯಕರಾಗಿ ಎಂಟ್ರಿಯಾಗುತ್ತಿರುವ ವಿಕ್ರಮ್, ಈ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಇದೊಂದು ಸ್ವಮೇಕ್ ಕಥೆಯಾಗಿದ್ದು, ಪಕ್ಕಾ ಲವ್ಸ್ಟೋರಿ ಹೊಂದಿದೆ.
ಲವ್, ತಾಯಿ ಸೆಂಟಿಮೆಂಟ್, ಎಮೋಷನ್ಸ್ ಹಾಗು ಒಂದಷ್ಟು ಗೆಳೆತನ ಇತ್ಯಾದಿ ವಿಷಯಗಳು ಪ್ರಮುಖ ಆಕರ್ಷಣೆ ಆಗಿರಲಿದೆ. ಚಿತ್ರಕ್ಕೆ ಸೋಮಶೇಖರ್ ಮತ್ತು ಸುರೇಶ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಾಧುಕೋಕಿಲ, ತುಳಸಿ ಶಿವಮಣಿ, ಚಿಕ್ಕಣ್ಣ, ಸುಚೇಂದ್ರಪ್ರಸಾದ್ ಇತರರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಆರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಬೆಂಗಳೂರು, ದಾಂಡೇಲಿ, ರಾಜಸ್ಥಾನ್ ಹಾಗು ಬ್ಯಾಂಕಾಕ್ನಲ್ಲಿ ಚಿತ್ರೀಕರಣ ನಡೆಯಲಿದೆ.