ಬೆಂಗಳೂರು: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಸಂಬಂಧ ಬಂಧಿಸಲ್ಪಟ್ಟಿರುವ “ಹಾಯ್ ಬೆಂಗಳೂರು’ ಪತ್ರಿಕೆ ಸಂಸ್ಥಾಪಕ ಸಂಪಾದಕ ರವಿ ಬೆಳಗೆರೆಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ಭಾನುವಾರ ಇನ್ನೊಂದು ಎಫ್ಐಆರ್ ದಾಖಲಾಗಿದೆ.
ಪರಿಶೀಲನೆ ವೇಳೆ ನಿವಾಸದಲ್ಲಿ 50 ವರ್ಷ ಗಳ ಹಿಂದಿನ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ಪತ್ತೆಯಾದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸಿಸಿಬಿ ಪೊಲೀಸರು ಅರಣ್ಯಾಧಿಕಾರಿಗಳಿಗೆ ಪತ್ರ ಬರೆದು, ಪ್ರಕರಣ ಹಸ್ತಾಂತರಿಸಿ ಚರ್ಮ ಹಾಗೂ ಆಮೆ ಚಿಪ್ಪುಗಳ ಬಗ್ಗೆ ಪರಿಶೀಲಿಸುವಂತೆ ಕೋರಿದ್ದರು. ಅರಣ್ಯಾಧಿಕಾರಿಗಳ ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ವಿಚಾರಣೆ ಮುಂದುವರಿಕೆ
ಸುಪಾರಿ ಪ್ರಕರಣಕ್ಕೆ ಸಂಬಂಧಿಸಿ ಇಂದೂ ಹಲವರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದು, ಬೆಳಗೆರೆ ಅವರ ಮ್ಯಾನೇಜರ್, ಕೊರಿಯರ್ ಬಾಯ್ ಸೇರಿದಂತೆ ಹಲವರನ್ನು ಪ್ರಶ್ನಿಸಿರುವ ಬಗ್ಗೆ ವರದಿಯಾಗಿದೆ.
ಸಾಕ್ಷ್ಯ ಸಂಗ್ರಹಿಸಿಯೆ ಬಂಧಿಸಲಾಗಿದೆ
ರವಿ ಬೆಳಗೆರೆಯವರನ್ನು ಸಾಕ್ಷ್ಯ ಸಂಗ್ರಹಿಸಿಯೇ ಪೊಲೀಸರು ಬಂಧಿಸಿದ್ದು,ಈ ಪ್ರಕರಣ ದಲ್ಲಿ ರಾಜ್ಯ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮಧುಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿಕೆ ನೀಡಿದ್ದಾರೆ.