ಬೆಳಗಾವಿ: ಪುಣೆಯಿಂದ ಹುಬ್ಬಳ್ಳಿವರೆಗೆ ವಂದೇ ಭಾರತ್ ರೈಲು ಆರಂಭಗೊಂಡಿದ್ದು, ಶೀಘ್ರವೇ ಮತ್ತೊಂದು ರೈಲು ಆರಂಭಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಒಂದೇ ದಿನ ಏಳು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ದೇಶದ ರೈಲ್ವೆ ಇಲಾಖೆ ವಿಶ್ವದ ಭೂಪಟದಲ್ಲಿ ರಾರಾಜಿಸುತ್ತಿದೆ.
ಮೋದಿ ದೂರದೃಷ್ಟಿಯಿಂದ ಜಗತ್ತಿನಲ್ಲಿ ಮೋದಿ ಪ್ರಭಾವ ಹೆಚ್ಚಾಗುತ್ತಿದೆ. ಈ ಹಿಂದಿನ ಸ್ಥಿತಿ ಹೋಲಿಕೆ ಮಾಡಿದರೆ ನೂರು ಪಟ್ಟು ಹೆಚ್ಚು ಕೆಲಸವಾಗಿದೆ. ನಾನು ರೈಲ್ವೆ ಸಚಿವನಾಗಿ ಮೂರು ತಿಂಗಳಾಗಿದೆ.
ಹಳೆಯದನ್ನು ಕೆದಕಿ ಕೆಲಸ ಮಾಡಲು ಆಗುವುದಿಲ್ಲ. ಬೆಳಗಾವಿವರೆಗೆ ಇದ್ದ ವಂದೇ ಭಾರತ್ ರೈಲು ಹುಬ್ಬಳ್ಳಿವರೆಗೆ ವಿಸ್ತರಣೆ ಮಾಡಲಾಗಿದೆ.
ಮತ್ತೊಂದು ರೈಲು ಮುಂದಿನ ದಿನಗಳಲ್ಲಿ ಬರಲಿದೆ. ದಿ. ಸುರೇಶ ಅಂಗಡಿ ಇದ್ದ ವೇಳೆ ಬೆಳಗಾವಿ-ಹುಬ್ಬಳ್ಳಿ ನೇರ ರೈಲು ಮಾರ್ಗದ ಎಲ್ಲ ವ್ಯವಸ್ಥೆ ನಡೆದಿದೆ. ಬೆಳಗಾವಿ-ಮುಂಬೈಗೆ ನೇರ ರೈಲು ಬಗ್ಗೆ ಕುಳಿತು ಮಾತನಾಡೋಣ.
ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಏನು ಬೇಕೋ ಅದನ್ನು ಮಾಡುತ್ತೇವೆ. ಸವದತ್ತಿ-ಬೆಳಗಾವಿ ರೈಲು ವ್ಯವಸ್ಥೆ ಬಗ್ಗೆಯೂ ಸಂಸದ ಜಗದೀಶ ಶೆಟ್ಟರ್ ಚರ್ಚಿಸಿದ್ದಾರೆ. ಸಮೀಕ್ಷೆ ಕಾರ್ಯ ನಡೆಸಲು ಸೂಚನೆ ನೀಡಲಾಗಿದೆ. ಸಮೀಕ್ಷಾ ವರದಿ ಬಂದ ಬಳಿಕ ಸೂಕ್ತ ಕ್ರಮ ವಹಿಸಲಾಗುವುದು ಎಂದರು.