ಹೊನ್ನಾವರ: ಎಪ್ರಿಲ್, ಮೇ ತಿಂಗಳಲ್ಲಿ ಮುಂಬೈ, ಗುಜರಾತ್, ದೆಹಲಿ, ಬೆಂಗಳೂರು ಮೊದಲಾದ ಊರುಗಳಲ್ಲಿ ನೆಲೆಸಿ ಉದ್ಯೋಗಿಗಳಾಗಿರುವವರನ್ನು ಸ್ವಾಗತಿಸಲು ಬಸ್‌ನಿಲ್ದಾಣದಲ್ಲಿ ಬಂಧು-ಬಳಗ ಮಾತ್ರವಲ್ಲ ಊರವರೇ ಸೇರಿರುತ್ತಿದ್ದರು. ಅವರು ತರುವ ನಾಲ್ಕಾರು ಸೂಟ್ ಕೇಸ್ ತುಂಬಿದ ವಸ್ತ್ರ, ತಿಂಡಿ, ಸಾಮಾನುಗಳನ್ನು ಹೊರಲು ಅಗತ್ಯಕ್ಕಿಂತ ಹೆಚ್ಚಿನ ಜನ ಕಾಣಿಸುತ್ತಿದ್ದರು. ಇತ್ತ ಮನೆಯಲ್ಲಿ ಎರಡು ದಿನ ಮೊದಲೇ ತಯಾರಿ ನಡೆಯುತ್ತಿತ್ತು. ಕೇರಿಗೆಲ್ಲಾ ಕೇಳುವ ಹಾಗೆ ಬರುವ ನೆಂಟರೋ, ಮಗನೋ, ಅಳಿಯನೋ ಇವರಿಗೆ ಯಾವ ಊಟ, ತಿಂಡಿ ಇಷ್ಟ, ಊರಿನ ಯಾವ ಹಣ್ಣು ಇಷ್ಟ ಎಂದೆಲ್ಲಾ ದೊಡ್ಡದಾಗಿ ಚರ್ಚಿಸಿ ಕಾದಿಡಲಾಗುತ್ತಿತ್ತು. ಆಗ ಊರೆಲ್ಲಾ ನೆಂಟರಾಗಿದ್ದರು. ಈಗ ಯಾರಿಗೆ ಯಾರಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಊರಿಗೆ ಬರುತ್ತೇನೆ ಎನ್ನುವವರಿಗೆ ಬನ್ನಿ ಎಂದು ಕರೆಯುವವರೇ ಇಲ್ಲ.
ನೆಲದ ಪ್ರೀತಿಗೆ ಬಂದಿಳಿದರೆ ಪೊಲೀಸರು ಸ್ವಾಗತಿಸುತ್ತಾರೆ, ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಗಂಟಲಿಗೆ ಕಡ್ಡಿ ಹಾಕಿ ದ್ರವ ತೆಗೆದು ಕೈಗೆ ಅಳಿಸಲಾಗದ ಶಾಹಿಯಿಂದ ಸೀಲು ಹೊಡೆದು ದುಡ್ಡಿದ್ದರೆ ಹೋಟೆಲ್‌ಗೆ ಇಲ್ಲವಾದರೆ ಸರ್ಕಾರಿ ಕ್ವಾರಂಟೈನ್ ಗೆ ಕಳಿಸುತ್ತಾರೆ. 14 ದಿನ ಅಲ್ಲಿ ಉಳಿಯಬೇಕು. ಅಲ್ಲಿರುವಾಗ ಸೂತಕದ ಮನೆಯಂತೆ ಯಾರೂ ಹತ್ತಿರ ಬರುವುದಿಲ್ಲ. ಊರವರು, ಬಂಧು-ಬಳಗ ಫೋನಿನಲ್ಲಿಯೇ ವಿಚಾರಿಸಿಕೊಳ್ಳುತ್ತಾರೆ. ಇಲ್ಲಿ ಬಂದರೂ ಮನೆಗೆ ಬರುವ ಹಾಗಿಲ್ಲ, ತೊಂದರೆ ಪಡುವ ಬದಲು ಅಲ್ಲಿಯೇ ಉಳಿಯಬಹುದಿತ್ತು ಎಂದು ಪರ್ಯಾಯವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸೂತಕ 12 ದಿನವಾದರೆ ಕ್ವಾರಂಟೈನ್ ಸೂತಕ 14 ದಿನ ಕಳೆದ ಮೇಲೆ ಪುನಃ 14ದಿನ ಮನೆಯಲ್ಲಿ ಇರಬೇಕು. ಅಮ್ಮನ ಪಾದ ಮುಟ್ಟಿ ನಮಸ್ಕರಿಸುವಂತಿಲ್ಲ, ತಮ್ಮನ ಮಕ್ಕಳಿಗೆ ಹತ್ತಿರ ಹೋಗಬೇಡಿ ಎಂದು ಹೇಳಿಕೊಟ್ಟಿರುತ್ತಾರೆ. ಇದು ಕೋವಿಡ್ ಕಾಂಡ. ಕೋವಿಡ್ ಸೋಂಕಿನಿಂದ ಟೂರಿಸಂ ನಿಂತು ಹೋದ ಕಾರಣ ಆದಷ್ಟು ಆಯಿತು ಎಂದು ಹೋಟೆಲ್‌ಅನ್ನು ಕ್ವಾರಂಟೈನ್‌ಗೆ ಕೊಟ್ಟ ಮಾಲಕರಿಗೆ ತಲೆಬಿಸಿಯಾಗಿದೆ. ಆದಷ್ಟು ವ್ಯಾಪಾರ ಆಗಲಿ ಎಂದು ಕೊಟ್ಟಿದ್ದೆವು, ಆಕಸ್ಮಾತ್ ಸೋಂಕಿತ ಕಂಡುಬಂದರೆ ನಮ್ಮ ಹೋಟೆಲ್ ಬಂದ್ ಆಗಲಿದೆ ಎಂದು ಆಲೋಚಿಸಿ ರೂಂ ಫುಲ್ ಆಗಿದೆ, ಕೆಲಸಗಾರರಿಲ್ಲ, ನಮ್ಮಲ್ಲಿ ಕಳಿಸಬೇಡಿ ಅನ್ನುತ್ತಾರೆ.
ಎಲ್ಲರೂ ಮನುಷ್ಯರೇ.. : ಆಗ ಊರೆಲ್ಲಾ ನೆಂಟರು, ಈಗ ಉಣ ಬಡಿಸುವವರ ಕಾಣೆ. “ಯಾರಿಗೆ ಯಾರಿಲ್ಲ ಎರವಿನ ಸಂಸಾರ, ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೆ’ ಎಂಬ ಮಾತುಗಳು ನೆನಪಾಗುತ್ತವೆ. ಕೋವಿಡ್ ಸೋಂಕಿತರೆಲ್ಲಾ ಸಾಯುವುದಿಲ್ಲ. ಕೊರೊನಾ ವಾರಿಯರ್ ಮತ್ತು ತಮ್ಮದಲ್ಲದ ತಪ್ಪಿನಿಂದ ಸೋಂಕಿತರಾದವರು ಎಲ್ಲರೂ ಮನುಷ್ಯರೇ. ಕೊರೊನಾ ತಗುಲಿದವರಲ್ಲಿ ಸಾವಿನ ಪ್ರಮಾಣ ಶೇ. 2 ಇದೆ. ಹೀಗಿರುವಾಗ ಇವರನ್ನೆಲ್ಲಾ ಭೂತದ ಹಾಗೆ ಕಾಣುವುದು ಪ್ರಜ್ಞಾವಂತ ಸಮಾಜಕ್ಕೆ ಸಲ್ಲದು.
ವಿಪರೀತ ಎನ್ನುವಷ್ಟು ಬೆಳವಣಿಗೆ! : ಆಕಸ್ಮಾತ್ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಯಾರಾದರೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡರೆ ಕಥೆ ಮುಗಿದು ಹೋಯಿತು. ತಹಶೀಲ್ದಾರ್ ಕಚೇರಿಗೆ ಗಂಟೆಗೊಬ್ಬರು ಬರುತ್ತಾರೆ, ಸೋಂಕಿತರನ್ನು ಭೇಟಿಯಾದವರ ಯಾದಿ ಕೊಡುತ್ತಾರೆ. ಅವರು ನಮ್ಮೂರವರು, ಕ್ವಾರಂಟೈನ್ ಮುಗಿದ ಮೇಲೂ ಊರಿಗೆ ಕಳಿಸಬೇಡಿ ಅನ್ನುತ್ತಾರೆ. ಮತ್ತೂಬ್ಬ ಬಂದು ನಮ್ಮ ಕೇರಿಯಲ್ಲಿ ಕ್ವಾರಂಟೈನ್ ಬೇಡ, ಸುತ್ತಲೂ ಮನೆಗಳಿವೆ, ವಯಸ್ಸಾದವರು ಮಕ್ಕಳಿದ್ದಾರೆ ಎನ್ನುತ್ತಾರೆ. ಇನ್ನೊಂದಿಷ್ಟು ಜನ ಇದೇ ಹೇಳಿಕೆಯನ್ನು ಬರೆದು ಸಹಿ ಹಾಕಿಸಿಕೊಂಡು ತರುತ್ತಿದ್ದಾರೆ.
–ಜೀಯು ಹೊನ್ನಾವರ