Advertisement

ಅಶುದ್ಧ ನೀರು, ಅಶುಚಿತ್ವದಲ್ಲೇ ಇನ್ನೆಷ್ಟು ದಿನ ಬದುಕಬೇಕು?

08:44 PM Jan 13, 2020 | Lakshmi GovindaRaj |

ಕೆ.ಆರ್‌.ನಗರ: ಶುದ್ಧ ನೀರಿನ ಘಟಕವಿದ್ದರೂ ಅಶುದ್ಧ ನೀರು ಸೇವಿಸುವ ಸ್ಥಿತಿ, ಪಾಳು ಬಿದ್ದಿರುವ ಅಂಗನವಾಡಿ ಕೇಂದ್ರವು ಅಕ್ರಮ ಚಟುವಟಿಕೆಗಳ ತಾಣವಾಗಿರುವುದು, ಸಮರ್ಪಕ ಚರಂಡಿ ವ್ಯವಸ್ಥೆಯಿದ್ದರೂ ಗಬ್ಬು ನಾರುವಂತೆ ತ್ಯಾಜ್ಯ ಕಟ್ಟಿಕೊಂಡಿರುವುದು… ಇದು ತಾಲೂಕಿನ ಗೌಡೇನಹಳ್ಳಿಯಲ್ಲಿ ಕಂಡು ಬರುವ ದೃಶ್ಯಗಳು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಗ್ರಾಮವು ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ.

Advertisement

ಟ್ಯಾಂಕ್‌ ನೀರೇ ಗತಿ: ಗ್ರಾಮದಲ್ಲಿ 550 ಜನಸಂಖ್ಯೆ ಇದೆ. 4 ವರ್ಷ ಹಿಂದೆ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದ್ದು, ಅದು ಆರಂಭದಲ್ಲಿ 2 ತಿಂಗಳು ಮಾತ್ರ ಕಾರ್ಯನಿರ್ವಹಿಸಿ ಕೆಟ್ಟು ನಿಂತಿದ್ದು, ಇದುವರೆಗೂ ದುರಸ್ತಿಯಾಗಿಲ್ಲ. ಇಲ್ಲಿನ ಜನರು ಈಗಲೂ ಕೊಳವೆ ಬಾವಿ ಮತ್ತು ಟ್ಯಾಂಕ್‌ನಿಂದ ಸರಬರಾಜು ಆಗುವ ನೀರನ್ನು ಕುಡಿಯುತ್ತಿದ್ದಾರೆ. ಗ್ರಾಮದ ಶುದ್ಧ ನೀರು ಘಟಕದ ಪಕ್ಕದಲ್ಲಿ ಕೊಳವೆ ಬಾವಿಯೊಂದಿದ್ದು, ಅದಕ್ಕೆ ಕೈಪಂಪು ಅಳವಡಿಸಲಾಗಿದೆ. ಸುಸ್ಥಿತಿಯಲ್ಲಿದ್ದರೂ ಇಲ್ಲಿನ ಜನತೆ ನೈರ್ಮಲ್ಯ ಕಾಪಾಡುವಲ್ಲಿ ವಿಫ‌ಲವಾಗಿರುವುದರಿಂದ ಅದು ಕೂಡ ಉಪಯೋಗಕ್ಕೆ ಬಾರದಂತಾಗಿದೆ.

ರೋಗ ಭೀತಿ: ಗ್ರಾಮದ ಕೆಲವು ಬೀದಿಗಳಲ್ಲಿ ಚರಂಡಿಗಳಲ್ಲಿ ಕಸ ಕಡ್ಡಿ, ಹೂಳು ತುಂಬಿಕೊಂಡಿದ್ದು, ಇದರಿಂದ ಕೊಳಚೆ ನೀರು ನಿಲ್ಲುವುದರಿಂದ ಅಲ್ಲಿನ ನಿವಾಸಿಗಳು ಸೊಳ್ಳೆ ಕಾಟದಿಂದ ನಿತ್ಯ ಹಿಂಸೆ ಅನುಭವಿಸುವಂತಾಗಿದೆ. ಇದರಿಂದ ಕಲುಷಿತ ನೀರು ರಸ್ತೆಗಳಲ್ಲಿ ಹರಿಯುವುದರಿಂದ ಗಬ್ಬು ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಗ್ರಾಮದಲ್ಲಿ ಸ್ವತ್ಛತೆ ಮರೀಚಿಕೆಯಾಗಿದ್ದು, ಕಸ ಕಡ್ಡಿಗಳು ತುಂಬಿ ಗಬ್ಬು ನಾರುವುದರ ಜತೆಗೆ ಗಿಡಗಂಟಿಗಳು ರಸ್ತೆಯ ಇಕ್ಕೆಲಗಳಲ್ಲಿ ಕಾಡಿನಂತೆ ಬೆಳೆದು ನಿಂತಿವೆ. ಮಕ್ಕಳು ಅವುಗಳ ನಡುವೆ ಭಯ ಭೀತಿಯಲ್ಲಿ ಓಡಾಡುವಂತಾಗಿದೆ. ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಅವುಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡದೆ ನಿರ್ಲಕ್ಷ್ಯ ವಹಿಸಿದೆ.

ಗ್ರಾಮದಲ್ಲಿ ಈ ಹಿಂದೆ ಅಂಗನವಾಡಿ ಕೇಂದ್ರ ನಡೆಸಲು ಒಂದು ಕಟ್ಟಡ ನಿರ್ಮಿಸಲಾಗಿದ್ದು, ಅದು ಕುಸಿದು ಬೀಳುವ ಹಂತದಲ್ಲಿದೆ. ಇದನ್ನರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಅಂಗನವಾಡಿ ಕೇಂದ್ರವನ್ನು ಶಾಲೆಯ ಬಳಿಯಿದ್ದ ಹೆಚ್ಚುವರಿ ಕಟ್ಟಡಕ್ಕೆ ವರ್ಗಾಯಿಸಿದ್ದಾರೆ., ಕಟ್ಟಡ ಮಾತ್ರ ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ. ಈ ಸ್ಥಳ ಮದ್ಯಪಾನ ಸೇವನೆ, ಜೂಜಾಟ ಮತ್ತಿತರ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

Advertisement

ಮನವಿಗೆ ಸ್ಪಂದನೆಯಿಲ್ಲ: ಗ್ರಾಮದ ಸಮಸ್ಯೆಗಳ ಬಗ್ಗೆ ಸ್ಥಳೀಯ ಗ್ರಾಪಂ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಶುದ್ಧ ನೀರಿನ ಘಟಕ ದುರಸ್ತಿಪಡಿಸಬೇಕು. ಪಾಳು ಬಿದ್ದಿರುವ ಅಂಗನವಾಡಿ ಕಟ್ಟಡವನ್ನು ದುರಸ್ತಿಗೊಳಿಸಿ ಗ್ರಾಮದ ಉಪಯೋಗಕ್ಕೆ ನೀಡಬೇಕು ಎಂದು ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ.

ತಹಶೀಲ್ದಾರ್‌-ಶಾಸಕರೇ, ಗ್ರಾಮಕ್ಕೆ ಬನ್ನಿ, ದುಸ್ಥಿತಿ ನೋಡಿ: ಸುಮಾರು 550 ಜನಸಂಖ್ಯೆ ಹೊಂದಿರುವ ಗೌಡೇನಹಳ್ಳಿ ಅವ್ಯವಸ್ಥೆಯ ಆಗರವಾಗಿದೆ. ನಾಲ್ಕು ವರ್ಷಗಳ ಹಿಂದೆ ಸ್ಥಾಪಿಸಿದ್ದ ಶುದ್ಧ ನೀರಿನ ಘಟಕ ನಾಲ್ಕು ತಿಂಗಳು ಕೂಡ ಕಾರ್ಯನಿರ್ವಹಿಸಿಲ್ಲ. ಮೂರು ವರ್ಷ ಕಳೆದರೂ ದುರಸ್ತಿ ಆಗಿಲ್ಲ. ಘಟಕವಿದ್ದರೂ ಅಶುದ್ಧ ನೀರನ್ನೇ ಕುಡಿಯಬೇಕಾಗಿದೆ. ಇನ್ನು ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಅಂಗನವಾಡಿ ಕೇಂದ್ರವು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕೂಡಲೇ ಗೌಡೇನಹಳ್ಳಿಗೆ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್‌ ಹಾಗೂ ತಹಶೀಲ್ದಾರ್‌ ಭೇಟಿ ನೀಡಿ ಈ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೈಗೊಳ್ಳಬೇಕು. ಜೊತೆಗೆ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶುದ್ಧ ನೀರಿನ ಘಟಕ ಸ್ಥಗಿತ, ಪಾಳು ಬಿದ್ದಿರುವ ಅಂಗನವಾಡಿ ಕೇಂದ್ರದ ಕಟ್ಟಡ, ಹೂಳು ತುಂಬಿಕೊಂಡಿರುವುದು ಚರಂಡಿಗಳು ಸೇರಿದಂತೆ ಗ್ರಾಮದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಅವುಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಕೇಬಲ್‌ ಮಹದೇವ, ಯುವ ಮುಖಂಡ

ಗ್ರಾಮದ ಚರಂಡಿಗಳ ತುಂಬಾ ಹೂಳು, ಕಸ ಕಡ್ಡಿ ತುಂಬಿಕೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ವಿಚಾರದ ಬಗ್ಗೆ ಗ್ರಾಮ ಪಂಚಾಯ್ತಿಗೆ ತಿಳಿಸಿ ಕಾಮಗಾರಿ ನಡೆಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಇದುವರೆಗೂ ಗಮನ ಹರಿಸಿಲ್ಲ. ಈಗಲಾದರೂ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆ ಸಮಸ್ಯೆಯನ್ನು ಬಗೆಹರಿಸಲಿ.
-ಶಿವಣ್ಣ. ಗ್ರಾಮದ ನಿವಾಸಿ

ಜನಪ್ರತಿನಿಧಿಗಳು ಗ್ರಾಮಗಳ ಸಮಸ್ಯೆಗಳ ಬಗ್ಗೆ ಆಗಾಗ ಗಮನ ಹರಿಸಿ ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸ್ಥಳೀಯ ಗ್ರಾಪಂ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು.
-ಭಾಗ್ಯರಾಜು, ಗ್ರಾಮಸ್ಥರು

ಗ್ರಾಮದಲ್ಲಿ ಶುದ್ಧ ನೀರಿನ ಘಟಕವಿದ್ದರೂ ನಾವು ಅಶುದ್ಧ ನೀರನ್ನೇ ಕುಡಿಯಬೇಕಾಗಿದೆ. ಗ್ರಾಮದಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯತೆಯ ಕೊರತೆ ಎದ್ದು ಕಾಣುತ್ತಿದೆ. ಅವುಗಳ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿಸಬೇಕು. ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು.
-ಮಾದೇಗೌಡ, ರೈತ

ನನ್ನ ಅಧಿಕಾರವಧಿಯಲ್ಲಿ ಗ್ರಾಮದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವುದರ ಜೊತೆಗೆ ಚರಂಡಿ ನಿರ್ಮಾಣ ಮಾಡಲಾಗಿದೆ. ಹಲವಾರು ಬಾರಿ ಚರಂಡಿಗಳ ಹೂಳು ತೆಗೆಸಿ ಸ್ವತ್ಛಗೊಳಿಸುವ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಗ್ರಾಪಂ ಮತ್ತು ಸರ್ಕಾರದ ಅನುದಾನ ತಂದು ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.
-ಮಹದೇವ, ಗ್ರಾಪಂ ಸದಸ್ಯ

ಗೌಡೇನಹಳ್ಳಿ ಸ್ವತ್ಛತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಇದಕ್ಕೆ ಜನತೆ ಸಹಕಾರ ನೀಡಬೇಕು. ಜತೆಗೆ ಅಲ್ಲಿನ ಕುಡಿಯುವ ನೀರಿನ ಘಟಕದ ದುರಸ್ತಿ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನ ಸೆಳೆದು ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು.
-ಸರಸಮ್ಮ, ಸಿದ್ದಾಪುರ ಗ್ರಾಪಂ ಅಧ್ಯಕ್ಷರು

ಕೆಆರ್‌ಐಡಿಲ್‌ ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಜವಾಬ್ದಾರಿಯನ್ನು ನಮಗೆ ವಹಿಸಲಾಗಿದ್ದು, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿಭಾಗೀಯ ಕಚೇರಿಗೆ ವರದಿ ನೀಡಲಾಗಿದ್ದು, ಅವರು ಈಗಾಗಲೇ ಅದರ ನಿರ್ವಹಣೆಗೆ ಟೆಂಡರ್‌ ಕರೆದಿದ್ದು, ಮೂವರು ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿಯೇ ದುರಸ್ತಿಗೊಳಿಸಿ ಘಟಕದ ನಿರ್ವಹಣೆಯನ್ನು ಟೆಂಡರ್‌ ಪಡೆದವರಿಗೆ ವಹಿಸಲಾಗುವುದು.
-ವಿನೀತ್‌, ಸಹಾಯಕ ಕಾರ್ಯಪಾಲಕ ಅಭಿಯಂತರ

* ಗೇರದಡ ನಾಗಣ್ಣ

Advertisement

Udayavani is now on Telegram. Click here to join our channel and stay updated with the latest news.

Next