Advertisement

ಮತ್ತೂಂದು ಕ್ರಿಕೆಟ್‌ ತಂತ್ರಜ್ಞಾನ-ಬಣ್ಣ ಬದಲಿಸುವ ಎಲೆಕ್ಟ್ರಾ ಸ್ಟಂಪ್ಸ್‌ ! …ಹೇಗಿದು..?

11:23 PM Dec 22, 2023 | Team Udayavani |

ಮೆಲ್ಬರ್ನ್: ಊಸರವಳ್ಳಿ ಬಣ್ಣ ಬದಲಿಸುವುದು ಗೊತ್ತು. ಆದರೀಗ ಕ್ರಿಕೆಟ್‌ ಸ್ಟಂಪ್‌ಗಳು ಬಣ್ಣ ಬದಲಿಸುವ ಕಾಲ ಬಂದಿದೆ. ಜಾಗತಿಕ ಕ್ರಿಕೆಟನ್ನು ವರ್ಣಮಯಗೊಳಿಸಿದ ಆಸ್ಟ್ರೇಲಿಯ ಇಂಥದೊಂದು ಪ್ರಯೋಗದಿಂದ ಸುದ್ದಿಯಾಗಿದೆ. ಕ್ರಿಕೆಟಿನ 5 “ಪ್ರಕ್ರಿಯೆ”ಗಳಿಗೆ 5 ರೀತಿಯಲ್ಲಿ ಬಣ್ಣ ಬದಲಿಸುವ “ಎಲೆಕ್ಟ್ರಾ ಸ್ಟಂಪ್‌”ಗಳ ನೂತನ ತಂತ್ರಜ್ಞಾನವನ್ನು ಪ್ರಯೋಗಿಸಿದೆ.

Advertisement

ವನಿತಾ ಬಿಗ್‌ ಬಾಶ್‌ ಲೀಗ್‌ನ ಸಿಡ್ನಿ ಸಿಕ್ಸರ್ ಮತ್ತು ಅಡಿಲೇಡ್‌ ಸ್ಟ್ರೈಕರ್ ನಡುವಿನ ಪಂದ್ಯದ ವೇಳೆ ಮೊದಲ ಬಾರಿಗೆ ಈ ಸ್ಟಂಪ್‌ಗ್ಳು ಬಣ್ಣ ಬದಲಿಸುತ್ತಿರುವುದನ್ನು ಕಂಡು ಕ್ರಿಕೆಟ್‌ ವೀಕ್ಷಕರು ರೋಮಾಂಚನಗೊಂಡರು. ಮಾರ್ಕ್‌ ವೋ ಸೇರಿದಂತೆ ಕ್ರಿಕೆಟಿನ ಮಾಜಿ, ಹಾಲಿ ಆಟಗಾರರೆಲ್ಲ ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂಬುದಾಗಿ ಬಣ್ಣಿಸಿದ್ದಾರೆ.

ಸ್ಟಂಪ್‌ಗಳು ಈ ರೀತಿ ಬಣ್ಣ ಬದಲಿಸುವ ಸಂದರ್ಭದಲ್ಲಿ, ಅಂಗಳದಲ್ಲಿ ನಡೆಯುವ ವಿದ್ಯಮಾನಗಳು ವೀಕ್ಷಕರಿಗೆ ನಿಖರವಾಗಿ ತಿಳಿಯುತ್ತದೆ. ಚೆಂಡು ಬಡಿದಾಗಲೆಲ್ಲ ಸ್ಟಂಪ್ಸ್‌ ಕೆಂಪು ಬಣ್ಣಕ್ಕೆ ತಿರುಗುವ ತಂತ್ರಜ್ಞಾನ ಈಗಾಗಲೇ ಚಾಲ್ತಿಯಲ್ಲಿದೆ. ಇದೀಗ ಸುಧಾರಣೆಗೊಂಡು “ಬಹುರೂಪ”ಕ್ಕೆ ತಿರುಗಿದೆ.

ಕೆರ್ರಿ ಪ್ಯಾಕರ್‌ ಪ್ರಭಾವ
ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯ ಏನೆಲ್ಲ ವರ್ಣಪ್ರಯೋಗ ಮಾಡಿದೆಯೋ, ಅಲ್ಲೆಲ್ಲ ಕೆರ್ರಿ ಪ್ಯಾಕರ್‌ ಪ್ರಭಾವ ದಟ್ಟವಾಗಿ ಗೋಚರಿಸುತ್ತದೆ. ಬಣ್ಣದ ಜೆರ್ಸಿ, ಹೊನಲು ಬೆಳಕಿನ ಆಟವೆಲ್ಲ ಪ್ಯಾಕರ್‌ ಅವರ ಕ್ರಾಂತಿಕಾರಿ ಹೆಜ್ಜೆಗಳಾಗಿದ್ದವು. 1992ರ ವಿಶ್ವಕಪ್‌ ವೇಳೆ ಆಸ್ಟ್ರೇಲಿಯ ಮೊದಲ ಸಲ ಇದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಯೋಗಿಸಿ ಭರ್ಜರಿ ಯಶಸ್ಸು ಕಂಡಿತು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೀಗ ಕಲರ್‌ಫ‌ುಲ್‌ ಜೆರ್ಸಿ, ಫ್ಲಡ್‌ಲೈಟ್‌ ಖಾಯಂ ಆಗಿದೆ. ಇದೀಗ ಎಲೆಕ್ಟ್ರಾ ಸ್ಟಂಪ್ಸ್‌ ಸರದಿ.

ತೆರೆಯಲಿದೆ ವರ್ಣಲೋಕ
ಈ ಸ್ಟಂಪ್ಸ್‌ 5 ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಬಣ್ಣಗಳನ್ನು ಹೊಮ್ಮಿಸುತ್ತದೆ. ಬೌಂಡರಿ, ಸಿಕ್ಸರ್‌, ನೋಬಾಲ್‌, ಔಟ್‌ ಹಾಗೂ ಓವರ್‌ ಬದಲಾಗುವ ವೇಳೆ ಸ್ಟಂಪ್‌ಗಳ ಬಣ್ಣ ಬದಲಾಗುತ್ತವೆ. ಈ ವರ್ಣಮಯ ಚಿತ್ತಾರ ಹೀಗಿದೆ…

Advertisement

 ಔಟ್‌ ಆದಾಗ: ಮೂರೂ ಸ್ಟಂಪ್‌ಗಳು ಬೆಂಕಿಯುಗುಳುವ ಕೆಂಪು ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತವೆ.
 ಬೌಂಡರಿ ಬಿದ್ದಾಗ: ಇಲ್ಲಿ ವರ್ಣಗಳ ಸಂಗಮವಾಗುತ್ತದೆ. ಒಂದರ ಹಿಂದೊಂದರಂತೆ ಬೇರೆ ಬೇರೆ ಬಣ್ಣಗಳು ಮೂಡಿಬರುತ್ತವೆ.
 ಸಿಕ್ಸರ್‌ ಸಿಡಿದಾಗ: ಇಲ್ಲಿ ಹತ್ತಾರು ಬಣ್ಣಗಳು ದೀಪಗಳ ಸರಮಾಲೆಯಂತೆ ಝಗಮಗಿಸುತ್ತವೆ.
 ನೋ ಬಾಲ್‌ ಆದಾಗ: ಸ್ಟಂಪ್‌ಗಳು ಬಿಳಿ ಮತ್ತು ಕೆಂಪು ಬಣ್ಣಕ್ಕೆ ಪರಿವರ್ತನೆ ಆಗುತ್ತವೆ.
 ಓವರ್‌ ಪೂರ್ತಿ ಆದಾಗ: ಸ್ಟಂಪ್‌ಗಳು ನೇರಳೆ ಮತ್ತು ನೀಲಿ ಬಣ್ಣಗೆ ತಿರುಗುತ್ತವೆ.

“ಈ ಸ್ಟಂಪ್ಸ್‌ ಕ್ರಿಕೆಟಿಗರಿಗೆ ಮತ್ತು ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಕ್ರಿಸ್ಮಸ್‌ ಉಡುಗೊರೆಯಾಗಿದೆ”
– ಮಾರ್ಕ್‌ ವೋ (ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ)

Advertisement

Udayavani is now on Telegram. Click here to join our channel and stay updated with the latest news.

Next