Advertisement

ಮತ್ತೊಂದು ವಂಚಕ ಕಂಪನಿ ಸಿಬ್ಬಂದಿ ಸಿಸಿಬಿ ಬಲೆಗೆ

12:42 AM Aug 30, 2019 | Lakshmi GovindaRaj |

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ವಂಚಕ ಕಂಪನಿಯ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ನಗರದ ಕೋಣನಕುಂಟೆಯಲ್ಲಿರುವ ಜಿನಾರಿಯಾ ಕಂಪನಿಯ ತಮಿಳುನಾಡು ಮೂಲದ ಎಸ್‌.ಹರಿಹರನ್‌ ಹಾಗೂ ಕೆ.ಬಾಲಕೃಷ್ಣನ್‌ ಬಂಧಿತರು.

Advertisement

ಆರೋಪಿಗಳಿಂದ ವಂಚನೆಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಚೈನ್‌ಲಿಂಕ್‌ ಮಾದರಿಯಲ್ಲಿ ಸಂಸ್ಥೆ ನಡೆಸುತ್ತಿದ್ದ ಆರೋಪಿಗಳು ಕಡಿಮೆ ಬೆಲೆಗೆ ಬಿಎಂಡಬ್ಲ್ಯೂ, ಬೆಂಜ್‌ ಕಾರುಗಳನ್ನು ಕೊಡುವುದಾಗಿ ವಂಚನೆ ಮಾಡಲು ಸಿದ್ಧತೆ ನಡೆಸಿದ್ದರು. ಈ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಭಾರೀ ಮೊತ್ತದ ಶಾರಾಮಿ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ವಂಚನೆಗೆ ಸಿದ್ಧತೆ ನಡೆಸಿದ್ದ ಆರೋಪಿಗಳು, ಅದಕ್ಕಾಗಿ ಸಾರ್ವಜನಿಕರ ಮನವೊಲಿಸಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿಸುವುದು ಹೇಗೆ ಎಂಬ ಬಗ್ಗೆ ಹತ್ತು ಯುವತಿರಿಗೆ ತರಬೇತಿ ನೀಡಿದ್ದರು. ಒಬ್ಬ ಸದಸ್ಯ ಮತ್ತೂಬ್ಬ ಸದಸ್ಯರನ್ನು ಸೇರಿಸಬೇಕು. ಸಂಸ್ಥೆ ನೀಡಿದ ಗುರಿ ತಲುಪಿದರೆ ಬಹುಮಾನ ಮತ್ತು ರಿಯಾಯಿತಿ ದರದಲ್ಲಿ ಭಾರೀ ಮೊತ್ತದ ವಸ್ತುಗಳು ಅಥವಾ ಐಶಾರಾಮಿ ಕಾರು ಕೊಡುವುದಾಗಿ ಆಮಿಷವೊಡುತ್ತಿದ್ದರು.

ಆರೋಪಿಗಳು ಈ ಕುರಿತು ಜಾಹೀರಾತು ಸಹ ನೀಡಿದ್ದರು. ಅದನ್ನು ಗಮನಿಸಿದ ಕೆಲವರು, ಕಂಪನಿ ಸಿಬ್ಬಂದಿಯ ಸಂಪರ್ಕಿಸಿದ್ದರು. ವಂಚನೆ ಕುರಿತ ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು, ಕೆಲಸ ಕೇಳುವ ನೆಪದಲ್ಲಿ ಸಂಸ್ಥೆಯ ಸಿಬ್ಬಂದಿ ಜತೆ ಮಾತನಾಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next