ಕೆ.ಆರ್.ಪುರ: ಕೆಲ ತಿಂಗಳ ಹಿಂದಷ್ಟೇ ಮಾರತ್ತಹಳ್ಳಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಬಿರುಕು ಬಿಟ್ಟ ಪ್ರಕರಣದ ನೆನಪು ಮಾಸುವ ಮುನ್ನವೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೊಂದು ಕಟ್ಟಡ ವಾಲಿದ ಬಿಟ್ಟ ಘಟನೆ ನಡೆದಿದೆ.
ಕೆ.ಆರ್.ಪುರ ಸಮೀಪದ ಹೊರಮಾವು ಬಳಿಯ ರೈಲ್ವೆ ಅಂಡರ್ ಪಾಸ್ ಸಮೀಪದ ಲಾಲ್‌ಸಿಂಗ್ ಎಂಬವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡವೊಂದು ಬಲಭಾಗಕ್ಕೆ ವಾಲಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ, ಕಟ್ಟಡದಲ್ಲಿನ ಜನರನ್ನು ಸ್ಥಳಾಂತರಗೊಳಿಸಿ ಅನಾಹುತ ತಪ್ಪಿಸಿದ್ದಾರೆ.
ಅಪಾಯದ ಸ್ಥಿತಿಯಲ್ಲಿರುವ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಕಟ್ಟಡದ ಮೂಲ ಮಾಲೀಕರಾದ ರತನ್‌ಲಾಲ್ ಹತ್ತು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಮಾಡಿದ್ದು, ಆ ಕಟ್ಟಡವನ್ನು ಲಾಲ್‌ಸಿಂಗ್ ಮೂರು ವರ್ಷಗಳ ಹಿಂದೆ ಖರೀದಿ ಮಾಡಿದ್ದರು. ಅದರಲ್ಲಿ ಜ್ಯುವೆಲ್ಲರಿ ಶಾಪ್ ಸೇರಿ ಮೂರು ಮನೆಗಳು ಇವೆ.
ಅದೇ ಕಟ್ಟಡದ ಪಕ್ಕದಲ್ಲಿ ಎಚ್‌ಆರ್‌ಬಿಆರ್ ಬಡಾವಣೆ ನಿವಾಸಿ ಕುಮರೇಶ್ ಎಂಬವರಿಗೆ ಸೇರಿದ ಜಾಗವಿದ್ದು, ಕಟ್ಟಡ ನಿರ್ಮಾಣ ಮಾಡಲು ಪಾಯ ತೆಗೆಯಲಾಗಿದೆ. ಆರು ಅಡಿಗೂ ಹೆಚ್ಚು ಅಳದ ಗುಂಡಿ ತೋಡಿದ ಹಿನ್ನೆಲೆಯಲ್ಲಿ ಮಣ್ಣು ಕುಸಿದು, ಪಕ್ಕದ ಮೂರು ಅಂತಸ್ಥಿನ ಕಟ್ಟಡ ವಾಲಿಕೊಂಡಿದೆ. ಅದನ್ನು ಕಂಡ ಕಟ್ಟಡ ಕಾರ್ಮಿಕರು ಜೋರಾಗಿ ಕೂಗಿಕೊಂಡು ಸ್ಥಳದಿಂದ ಓಡಿದ್ದು, ಕೂಗಾಟದ ಜೋರು ಶಬ್ಧ ಕೇಳಿ ಕಟ್ಟಡ ನಿವಾಸಿಗಳು ಹೊರ ಬಂದಿದ್ದಾರೆ.
ಕಟ್ಟಡದ ಬಳಿ ನಿರ್ಬಂಧ: ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಾಣಸವಾಡಿಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಹೆಣ್ಣೂರು ಪೊಲೀಸರು ಹಾಗು ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಬಳಿ ಯಾರು ಹೋಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು, ಕಟ್ಟಡದ ಅಕ್ಕ-ಪಕ್ಕದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದರು.
ನಂತರ ಕಟ್ಟಡದ ಸುತ್ತ-ಮುತ್ತ ಯಾರು ಹೋಗದಂತೆ ನಿರ್ಬಂಧ ಹೇರಿದ್ದರು. ಲಾಲ್‌ಸಿಂಗ್ ಮೂರು ವರ್ಷಗಳ ಹಿಂದೆ ರತನ್ ಲಾಲ್ ಎಂಬುವವರಿಂದ ಕಟ್ಟಡ ಖರೀದಿ ಮಾಡಿದ್ದರು. ಚಿಕ್ಕ ನಿವೇಶನದಲ್ಲಿ ಭದ್ರವಾದ ಪಾಯ ಹಾಕದೆ ಮೂರು ಅಂತಸ್ತಿನ ನಿರ್ಮಾಣ ಮಾಡಿರುವುದೇ ಘಟನೆಗೆ ಕಾರಣ ಎಂದು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.