ಶಿವಮೊಗ್ಗ: ಈ ಅವಧಿಗೆ ಮಾತ್ರವಲ್ಲ. ಮುಂದಿನ ಅವಧಿಯಲ್ಲೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ. ಬಲಿಷ್ಠ ಕಾಂಗ್ರೆಸ್ ಸರಕಾರ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಏನೇ ಹೇಳಿದರೂ ಅದು ಸುಳ್ಳು. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು. ತೆನೆ ಹೊತ್ತ ಮಹಿಳೆ ತೆನೆ ಎಸೆದು ಹೋದಳು. ಕರ್ನಾಟಕ ಪ್ರಬುದ್ಧವಾಯಿತು. ಕರ್ನಾಟಕ ಸಮೃದ್ಧಿಯಾಯಿತು ಎಂದರು.
ನಿಮ್ಮ ಮನೆ ಬೆಳಗಲಿ ಎಂದು “ಗೃಹಜ್ಯೋತಿ’ ಯೋಜನೆ ಘೋಷಿಸಿದ್ದು, ಇಂದು ಒಂದೂವರೆ ಕೋಟಿ ಕುಟುಂಬ 200 ಯೂನಿಟ್‌ವರೆಗೂ ವಿದ್ಯುತ್ ಅನ್ನು ಉಚಿತವಾಗಿ ಬಳಸುತ್ತಿದೆ. ಇದರಿಂದ ಪ್ರತಿ ಕುಟುಂಬಕ್ಕೆ 1,500 ರೂ. ಉಳಿಯುತ್ತದೆ. “ಅನ್ನಭಾಗ್ಯ’ ಯೋಜನೆಗೆ ಕೇಂದ್ರ ಸರಕಾರ ಅಕ್ಕಿ ನೀಡದಿದ್ದಾಗ ನಿಮ್ಮ ಖಾತೆಗೆ ಹಣ ಹಾಕಿದೆವು. ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಪ್ರತಿ ಮಹಿಳೆಗೆ ಕನಿಷ್ಠ 2-3 ಸಾ. ರೂ. ಉಳಿಯುತ್ತದೆ ಎಂದರು.
“ಗೃಹಲಕ್ಷ್ಮಿ ‘ ಯೋಜನೆಯಡಿ ರಾಜ್ಯದ 1.10 ಕೋಟಿ ಜನ ಪ್ರಯೋಜನ ಪಡೆಯುತ್ತಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ಮೂರು ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿಯನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ ಕಾರ್ಯಕ್ರಮ ಎಂದರು.
ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗ ಒಂದು ಸೀರೆ, ಒಂದು ಸೈಕಲ್ ನೀಡಿದ್ದರು. ಅದನ್ನು ಬಿಟ್ಟರೆ ಬಿಜೆಪಿ ಬೇರೆ ಏನೂ ನೀಡಿಲ್ಲ. ಆ ಸೈಕಲ್ ಎಲ್ಲಿ ಹೋಯಿತು? ಅದನ್ನು ಯಾಕೆ ನಿಲ್ಲಿಸಿದಿರಿ ಎಂದು ಪ್ರಶ್ನಿಸಿದರು.
ವಿಜಯೇಂದ್ರಗೆ ಸವಾಲು
ಜಾತಿ ವಿಚಾರದ ಬಗ್ಗೆ ಯೋಚಿಸಬೇಡಿ ಎಂದು ನಾರಾಯಣ ಗುರುಗಳು ನಮಗೆ ಸಂದೇಶ ನೀಡಿದರು. ಅದರಂತೆ ನಾವು ಜಾತಿಯನ್ನು ಬಿಟ್ಟು ನೀತಿ ಮೇಲೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅದಕ್ಕಾಗಿ ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಬಿಜೆಪಿಯವರು ಇಂತಹ ಒಂದು ಕಾರ್ಯಕ್ರಮ ಹೆಸರಲ್ಲಿ ಮತ ಕೇಳಲು ಆಗುತ್ತದೆಯೇ? ನಮ್ಮದು 420 ಕಾರ್ಯಕ್ರಮವಾದರೆ ನಮ್ಮ ಯೋಜನೆಯಿಂದ ಪ್ರಯೋಜನ ಪಡೆಯಬೇಡಿ ಎಂದು ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರು ಜನರಿಗೆ ಕರೆ ನೀಡಲಿ ನೋಡೋಣ ಎಂದು ಸವಾಲು ಹಾಕುತ್ತೇನೆ ಎಂದು ಡಿಕೆಶಿ ಹೇಳಿದರು.