ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 23 ಹೊಸ ಕೋವಿಡ್-19 ಪ್ರಕರಣಗಳು ದೃಢವಾಗಿದೆ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದೆ. ಸೋಂಕಿತ ಸಂಖ್ಯೆ 653ರ ದ್ವಿತೀಯ ಸಂಪರ್ಕದಿಂದ ನಗರದಲ್ಲಿ ಸೋಂಕು ಪ್ರಕರಣಗಳು ವರದಿಯಾಗಿದೆ.
ಬೆಂಗಳೂರಿನಲ್ಲಿ 14, ಹಾಸನದಲ್ಲಿ ಮೂರು ಮತ್ತು, ಉಡುಪಿ, ಮಂಡ್ಯ, ಧಾರವಾಡ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ಬೆಂಗಳೂರಿನ ಎಲ್ಲಾ 14 ಪ್ರಕರಣಗಳು ಸೋಂಕಿತ ಸಂಖ್ಯೆ 653ರ ದ್ವಿತೀಯ ಸಂಪರ್ಕದಿಂದಲೇ ದೃಢವಾಗಿದೆ. ಹಾಸನದಲ್ಲಿ ಮೂರು ಪ್ರಕರಣ ದೃಢವಾಗಿದ್ದು ಮೂರು ಪ್ರಕರಣಗಳು ಮುಂಬೈಯಿಂದ ಬಂದವರಿಗೆ ಸೋಂಕು ತಾಗಿದೆ.
ಬಾಗಲಕೋಟೆ, ಧಾರವಾಡದಲ್ಲೂ ತಲಾ ಒಂದು ಪ್ರಕರಣಗಳು ಮುಂಬೈ ಪ್ರಯಾಣಿಕರಿಗೆ ದೃಢವಾಗಿದೆ. ಉಡುಪಿಯ ಒಂದು ವರ್ಷದ ಮಗುವಿಗೆ ಸೋಂಕು ದೃಢವಾಗಿದ್ದು, ದುಬೈನಿಂದ ಪ್ರಯಾಣದ ಹಿನ್ನಲೆಯಲ್ಲಿ ಸೋಂಕು ತಾಗಿತ್ತು.
ದಾವಣಗೆರೆಯಲ್ಲಿ ಸೋಂಕಿತ ಸಂಖ್ಯೆ 533ರ ಸಂಪರ್ಕದಿಂದ 65 ವರ್ಷದ ವೃದ್ಧೆಗೆ ಸೋಂಕು ತಾಗಿದೆ, ಬಳ್ಳಾರಿಯ 46 ವರ್ಷದ ವ್ಯಕ್ತಿ ಹೈದರಾಬಾದ್ ನಿಂದ ಬಂದಿದ್ದು ಸೋಂಕು ದೃಢವಾಗಿದೆ. ಬೆಂಗಳೂರು ಮತ್ತು ಕೋಲಾರಕ್ಕೆ ಪ್ರಯಾಣ ಮಾಡಿದ್ದ ಮಂಡ್ಯದ 40 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಟ್ಟು 494 ಜನರು ಗುಣಮುಖರಾಗಿದ್ದು, 36 ಜನರು ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಓರ್ವ ಕೋವಿಡ್ ಸೋಂಕಿತ ವ್ಯಕ್ತಿ, ಕೋವಿಡ್-19 ಅಲ್ಲದ ಕಾರಣದಿಂದ ಮೃತಪಟ್ಟಿದ್ದಾನೆ.