Advertisement

ಅನಾಮಧೇಯ ಇ-ಮೇಲ್‌: ತನಿಖೆಗೆ ಕೋರ್ಟ್ ನಿದೇರ್ಶನ

11:50 AM Dec 05, 2018 | |

ಬೆಂಗಳೂರು: ನಗರದಲ್ಲಿನ ಅನಧಿಕೃತ ಫ್ಲೆಕ್ಸ್‌ ಸಮಸ್ಯೆಗೆ ತನ್ನ ಬಳಿ ಕೆಲವೊಂದು “ಐಡಿಯಾ’ಗಳಿವೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಇ-ಮೇಲ್‌ ಕಳಿಸಿದ ಅನಾಮಧೇಯ ವ್ಯಕ್ತಿಯ ಬಗ್ಗೆ ಸೈಬರ್‌ ಕ್ರೈಂ ಪೊಲೀಸರಿಂದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

Advertisement

“ಫ್ಲೆಕ್ಸ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತನ್ನ ಬಳಿ ಕೆಲವೊಂದು ಐಡಿಯಾಗಳಿವೆ. ಅದನ್ನು ಬಳಸಿಕೊಂಡು ಸಮಸ್ಯೆ ಬಗೆಹರಿಸಬಹುದು. ನಾನು ಸೇವೆ ಕಲ್ಪಿಸಲು ಸಿದ್ಧನಿದ್ದೇನೆ’ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರನ್ನು ಹೆಸರಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಇ-ಮೇಲ್‌ ಕಳಿಸಿದ್ದರು.

ಇದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಈ ಬಗ್ಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದರು. ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ ಹಾವಳಿ ಕುರಿತಂತೆ ಸಲ್ಲಿಕೆಯಾಗಿರುವ ಪ್ರತ್ಯೇಕ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಅನಾಮಧೇಯ ವ್ಯಕ್ತಿ ಕಳಿಸಿರುವ ಇ-ಮೇಲ್‌ನ ಪ್ರತಿಯನ್ನು ಅಡ್ವೋಕೇಟ್‌ ಜನರಲ್‌, ಬಿಬಿಎಂಪಿ ಪರ ವಕೀಲರು ಮತ್ತು ಅರ್ಜಿದಾರರಿಗೆ ತೋರಿಸಿದ ಮುಖ್ಯ ನ್ಯಾಯಮೂರ್ತಿಗಳು, ಇದಕ್ಕೆ ಯಾವ ರೀತಿ ಕ್ರಮ ಜರುಗಿಸಬಹುದು ಎಂದು ಸಲಹೆ ನೀಡುವಂತೆ ಸೂಚಿಸಿದರು. 

ಅಲ್ಲದೇ, ಒಂದು ವಿಚಾರವು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲಿ ಅನಾಮಧೇಯರು ಹೀಗೆ ಇ ಮೇಲ್‌ ಕಳುಹಿಸಿದರೆ, ಅದು ನ್ಯಾಯಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ. ಹೈಕೋರ್ಟ್‌ ಎಲ್ಲ ವಿಚಾರಗಳ ಬಗ್ಗೆಯೂ ಕಾಳಜಿ ವಹಿಸಲಿದೆ.

Advertisement

ಯಾರೇ ಬೇಕಾದರೂ ಕೋರ್ಟ್‌ಗೆ ಹಾಜರಾಗಿ ತಮ್ಮ ಅಹವಾಲು ಕೇಳಲು ಕೋರಬಹುದು. ನ್ಯಾಯಾಲಯ ಸಹ ಅವರ ಅಹವಾಲು ಕೇಳಲಿದೆ. ಆದರೆ, ಅನಾಮಧೇಯ ಇ-ಮೇಲ್‌ ಕಳುಹಿಸುವುದು ಸೂಕ್ತವಲ್ಲ. ಈ ರೀತಿ ಆದರೆ ನ್ಯಾಯಾಲಯಗಳು ಕೆಲಸ ಮಾಡಲು ಕಷ್ಟಸಾಧ್ಯವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

ಇ-ಮೇಲ್‌ ಓದಿ ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್‌, ಇದೊಂದು ಅಸಮರ್ಪಕ ಹಾಗೂ ಅಕ್ರಮ ನಡೆ, ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಅರ್ಜಿದಾರರ ಪರ ವಕೀಲರು ಸಹ, ಈ ಸಂಬಂಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬಹುದು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇ-ಮೇಲ್‌ ಕುರಿತು ಸೈಬರ್‌ ಪೊಲೀಸರಿಂದ ಕೂಡಲೇ ತನಿಖೆ ನಡೆಸಿ, ವಿವರಗಳನ್ನು ಪಡೆದು ಕೋರ್ಟ್‌ಗೆ ತಿಳಿಸುವಂತೆ ಸೂಚಿಸಿತು.

ಇ-ಮೇಲ್‌ ನಲ್ಲೇನಿದೆ?: “ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಿದೆ. ಈ ಕುರಿತು ಆಯುಕ್ತರಿಗೆ ಪದೆ ಪದೇ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾ. ಎನ್‌.ವೆಂಕಟಾಚಲ ಅವರು ಅನಧಿಕೃತ ಫ್ಲೆಕ್ಸ್‌ ಅಳವಡಿಕೆ ವಿರುದ್ಧ ಕ್ರಮ ಜರುಗಿಸಿದ್ದರು. ಫ್ಲೆಕ್ಸ್‌ ಸಮಸ್ಯೆ ಬಗೆಹರಿಸಲು ನನ್ನ ಬಳಿ ಕೆಲವೊಂದು ಐಡಿಯಾಗಳು ಇವೆ. ಅದನ್ನು ಬಳಸಿಕೊಂಡೆ ಸಮಸ್ಯೆ ಬಗೆಹರಿಸಬಹುದು. ನಾನು ಸೇವೆ ಕಲ್ಪಿಸಲು ಸಿದ್ದನಿದ್ದೇನೆ’ ಎಂದು ಕಳುಹಿಸಲಾಗಿದೆ.

ಮತ್ತೆ ಫ್ಲೆಕ್ಸ್‌ ಹಾವಳಿಗೆ ತಾಕೀತು: ಅನಧೀಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ನಿರ್ದೇಶನ ನೀಡುತ್ತಿದ್ದರೆ, ಮತ್ತೂಂಡೆ ಫ್ಲೆಕ್ಸ್‌ ಹಾಕುವುದು ನಡೆದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಆಯುಕ್ತರಿಗೆ ತಾಕೀತು ಮಾಡಿತು.

ಅರ್ಜಿ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಅನಧಿಕೃತವಾಗಿ ಕೆ.ಆರ್‌.ಪುರಂ ಶಾಸಕ ಭೈರತಿ ಬಸವರಾಜ್‌ ಹಾಗೂ ಸ್ಥಳೀಯ ಕಾರ್ಪೊರೇಟರ್‌ ಶ್ರೀಕಾಂತ್‌ ಅವರ ಫ್ಲೆಕ್ಸ್‌ ಹಾಕಲಾಗಿದೆ. ಹಾಗೆಯೇ, ಇತ್ತೀಚೆಗೆ ನಿಧರಾದ ಖ್ಯಾತ ನಟರೊಬ್ಬರ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಈ ಕುರಿತು ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಫ್ಲೆಕ್ಸ್‌ ತೆರವು ಗೊಳಿಸುವುದಾಗಿ ಬಿಬಿಎಂಪಿ ವಕೀಲರು ಹೇಳಿದರು.

ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ, ಯಾರೇ ಆಗಲಿ , ಯಾವುದೇ ರೀತಿಯಲ್ಲೂ ನಗರವನ್ನು ಮಲಿನಗೊಳಿಸಲು ಪ್ರಯತ್ನಿಸುವುದಕ್ಕೆ ಅನುಮತಿ ನೀಡಲಾಗದು. ಫ್ಲೆಕ್ಸ್‌ ಹಾಕಿದ ಮೇಲೆ ಕ್ರಮ ಜರುಗಿಸುತ್ತೀರಿ ಎಂದು ಹೇಳುತ್ತೀರಿ. ಆದರೆ, ಫ್ಲೆಕ್ಸ್‌ ಹಾಕದಂತೆ ಯಾಕೆ ತಡೆಯುವುದಿಲ್ಲ. ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಆಯುಕ್ತರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಡಿಕೆಶಿ ವಿರುದ್ಧ ಎಫ್ಐಆರ್‌ ಹಾಕಿದ್ದಕ್ಕೆ ವರ್ಗ: ಇದೇ ವೇಳೆ, ಅನಧಿಕೃತ ಫ್ಲೆಕ್ಸ್‌ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಎಫ್ಐಆರ್‌ ದಾಖಲಿಸಿದ ಬ್ಯಾಟರಾಯನಪುರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಮತ್ತೂಬ್ಬ ಅರ್ಜಿದಾರರ ಪರ ವಕೀಲರು ದೂರಿದರು. ಇದೊಂದು ಸಾಮಾನ್ಯ ವರ್ಗಾವಣೆಯಾಗಿದೆ ಎಂದು ಅಡ್ವೋಕೇಟ್‌ ಜನರಲ್‌ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next