ಕಲಬುರಗಿ: ನೆರೆಯ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದಲ್ಲಿ ರವಿವಾರ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದ ಟೀಕಾಚಾರ್ಯರ ಪೂರ್ವಾರಾಧನೆ ಜರುಗಿತು.
ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥರ ಪಾದಂಗ ಳವರು ಮಂಗಳಾರತಿ, ಮೂಲ ರಾಮದೇವರ ಪೂಜೆ, ತೀರ್ಥ, ಪ್ರಸಾದ, ಮಂತ್ರಾಕ್ಷತೆ, ತಪ್ತಮುದ್ರಾ ಧಾರಣೆ ನೆರವೇರಿಸಿ ಆಶೀರ್ವಚನ ನೀಡಿದರು. ಸಾವಿರಾರು ಸಂಖ್ಯೆಯ ಭಕ್ತರು ಟೀಕಾರಾಯರು ಗ್ರಂಥ ರಚಿಸಿದ ಗುಹೆಯ ದರ್ಶನ ಪಡೆದರು.
ಮಹಿಳೆಯರು, ಪುರುಷ ಭಜನಾ ತಂಡದವರು ಭಕ್ತಿಗೀತೆಗಳನ್ನು ಹಾಡಿದರು. ತುಂತುರು ಮಳೆ ನಡುವೆಯೂ, ನೂರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದರು.
ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಆಗಮಿಸಿದ ಭಕ್ತರು ಗುಹೆಯಲ್ಲಿನ ಟೀಕಾರಾಯರ ದರ್ಶನ ಪಡೆದು ಪುನೀತರಾದರು. ಕಲಬುರಗಿ ನಗರದ ಶ್ರೀ ಲಕ್ಷ್ಮೀ ನಾರಾಯಣ, ಹಂಸನಾಮ, ಶ್ರೀ ಪ್ರಶಾಂತ ಹನುಮಾನ ಪಾರಾಯಣ ಸಂಘದ ವತಿಯಿಂದ ವಿಷ್ಣು ಸಹಸ್ರನಾಮ, ಸುಂದರಕಾಂಡ, ಶ್ರೀ ಜಯತೀರ್ಥ ಸುತ್ತಿ ಪಾರಾಯಣ ನಡೆಯಿತು. ಪಂಡಿತ ಶಶಿ ಆಚಾರ್ಯ, ಮಠಾಧಿಕಾರಿ ಘಂಟಿ ರಾಮಾಚಾರ್ಯ ಪಾರಾಯಣ ಸಂಘದ ಸಂಚಾಲಕರಾದ ರವಿ ಲಾತೂರಕರ ಮುಂತಾದವರಿದ್ದರು.
ಮಳಖೇಡಕ್ಕೆ ಆಗಮಿಸಿದ ಪೂಜ್ಯರು: ಶ್ರೀ ಸತ್ಯಾತ್ಮ ತೀರ್ಥರು ಯರಗೋಳದಿಂದ ರವಿವಾರ ಸಂಜೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸುಕ್ಷೇತ್ರ ಮಳಖೇಡದ ಕಾಗಿಣಾ ನದಿ ದಡದ ಜಯತೀರ್ಥರ ಮೂಲ ಬೃಂದಾವನ ಸನ್ನಿಧಾನಕ್ಕೆ ಆಗಮಿಸಿದರು.
ಮೂರು ದಿನಗಳ ಕಾಲ ಉತ್ತರಾದಿಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೂರು ದಿನಗಳ ಕಾಲ ಶ್ರೀ ಜಯತೀರ್ಥರ ಆರಾಧನೆ ಮಹೋತ್ಸವ ಜರುಗಲಿದೆ.