Advertisement

ಗುಜರಾತ್‌ ಬಿಲ್ಲವ ಸಂಘದಿಂದ ವಾರ್ಷಿಕ ಗುರು ಜಯಂತಿ ಆಚರಣೆ

03:52 PM Sep 12, 2018 | |

ಬರೋಡಾ: ಹೊರ ರಾಜ್ಯಗಳಲ್ಲಿರುವವರ ಪ್ರೀತಿ ಮಧುರ. ಅದರಲ್ಲೂ ಇಲ್ಲಿನವರ ಅತಿಥಿ ಗೌರವ, ಸುಮಧುರವಾದುದು. ಅದನ್ನು ಇಂದು ಪ್ರತ್ಯಕ್ಷವಾಗಿ ಅನುಭವಿಸಿದೆ. ನಾಡಿನ, ದೇಶದ, ವಿದೇಶಗಳ ಹತ್ತು ಹಲವು ತುಳು-ಕನ್ನಡಿಗರ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದವನು. ಆದರೆ ಇಲ್ಲಿನ ಶ್ರೀ ಗುರುಜಯಂತಿ ಮತ್ತು ಮಾತೃ ಸಂಘದ ಕಾರ್ಯಕ್ರಮಗಳನ್ನು ಕಂಡು ಅಕ್ಷರಶಃ ಭಾವುಕನಾದೆ. ಇಲ್ಲಿನ ಕಾರ್ಯಕ್ರಮಗಳನ್ನು ಕಂಡು ಸಂಸ್ಕೃತಿಯನ್ನು ಕಟ್ಟುವ ವಿಧಾನವನ್ನು ಇಲ್ಲಿಯವರಿಂದ ಕಲಿಯಬೇಕು ಎಂದು ಮನಸಿನಲ್ಲೇ ಅಂದುಕೊಂಡೆ ಎಂದು ಡಾ| ರಾಜಶೇಖರ್‌ ಕೋಟ್ಯಾನ್‌ ಅವರು ನುಡಿದರು.

Advertisement

ಸೆ. 9ರಂದು ಸ್ಥಳೀಯ ಬೈದಶ್ರೀ ಸಭಾಗೃಹದಲ್ಲಿ ನಡೆದ ಶ್ರೀ ನಾರಾಯಣ ಗುರುಗಳ ಜಯಂತಿ ಮತ್ತು ಮಾತೃ ಸಂಘದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಸಡಗರ, ಸಂಭ್ರಮದೊಂದಿಗೆ ನಡೆದ ಸಮಾರಂಭವನ್ನು ಕಾಣಲು ಎರಡು ಕಣ್ಣುಗಳು ಸಾಲುತ್ತಿಲ್ಲ. ನಿಮ್ಮೆಲ್ಲರ ಸಂಸ್ಕೃತಿ, ಸಂಸ್ಕಾರ, ನಾಡು-ನುಡಿಯ ಸೇವೆ, ಅಭಿಮಾನ ಮೆಚ್ಚುವಂಥದ್ದಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ  ಸಂಘ ಗುಜರಾತ್‌ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ತುಳು ಸಂಘ ಬರೋಡಾದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬೆಳ್ತಂಗಡಿ ಅವರು ಮಾತನಾಡಿ, ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ನನಗೆ ಸಂತಸ ನೀಡಿದೆ. ನಾರಾಯಣ ಗುರುಗಳು ಸಾಮಾನ್ಯರಾಗಿ ಜನಿಸಿ ದೇಶಕಂಡ ಶ್ರೇಷ್ಠ ದಾರ್ಶನಿಕರು. ಖಾದೀ ತೊಟ್ಟ ಬೂಟಾಟಿಕೆಯ ಸಂತೆಯಲ್ಲಿ ದೀನ, ದಲಿತರ ಉದ್ಧಾರದ ಹೆಸರಿನಲ್ಲಿ ಬಹಳಷ್ಟು ಸಂತರು ಸಂಘಟನೆಯನ್ನು ಕೈಗೊಂಡು, ಕೊನೆಯಲ್ಲಿ ಹೆಸರಿನ ಸ್ವಪಂಥವನ್ನು ಕಟ್ಟಿಕೊಂಡು ದೇಶವನ್ನು ಛಿದ್ರ ಛಿದ್ರಗೊಳಿಸಿದ ನಿದರ್ಶನಗಳು ಬಹಳಷ್ಟಿವೆ. ನಾರಾಯಣ ಗುರುಗಳು ದೀನ ದಲಿತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟು ಮಹಾನ್‌ ಪುರುಷರಾಗಿದ್ದಾರೆ ಎಂದರು.

ಮತ್ತೋರ್ವ ಅತಿಥಿ ಉದ್ಯಮಿ ಸೂರತ್‌ ಕನ್ನಡ ಸಮಾಜದ ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿ ಅವರು ಮಾತನಾಡಿ, ಶ್ರೀ ಗುರುಜಯಂತಿ ವಿಶೇಷ ಕಾರ್ಯಕ್ರಮವು ನನ್ನಲ್ಲಿ ಬಹಳಷ್ಟು ಪರಿಣಾಮ ಬೀರಿತು. ಇದೊಂದು ಪರಿಣಾಮಕಾರಿ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ನನ್ನ ವತಿಯಿಂದ ಸಂಸ್ಥೆಯ 50 ಸಾವಿರ ರೂ.ಗಳನ್ನು ದೇಣಿಗೆಯನ್ನು ನೀಡುತ್ತಿದ್ದೇನೆ ಎಂದರು.

ಅಹ್ಮದಾಬಾದ್‌ನ ಹೈಕೋರ್ಟ್‌ ನ್ಯಾಯವಾದಿ ಲಕ್ಷ್ಮಣ್‌ ಪೂಜಾರಿ ಇವರು ಮಾತನಾಡಿ, ಗುರುವಿನ ಮಹತ್ವದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು. ಮುಂಬಯಿ ಸಮಾಜ ಸೇವಕ ಸತೀಶ್‌ ಬಂಗೇರ ಅವರನ್ನು ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರು ಅತಿಥಿಗಳನ್ನು ಪರಿಚಯಿಸಿದರು. ಆರಂಭದಲ್ಲಿ ಗುರು ಪಾದುಕಾ ಪೂಜೆ ನಡೆಯಿತು. ವಿಶ್ವಗಾಯತ್ರಿ ಪರಿವಾರದವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Advertisement

ವೇದಿಕೆಯಲ್ಲಿ ವಿ. ವಿ. ಸುವರ್ಣ, ಎಸ್‌. ಜಯರಾಮ್‌ ಶೆಟ್ಟಿ, ವಾಸು ಪೂಜಾರಿ, ಸದಾಶಿವ ಪೂಜಾರಿ, ಹರೀಶ್‌ ಅಂಕಲೇಶ್ವರ್‌, ವಿ. ಡಿ. ಅಮೀನ್‌, ವಿಶ್ವನಾಥ್‌ ಪೂಜಾರಿ, ಶಶಿಧರ್‌ ಬಿ. ಶೆಟ್ಟಿ, ರಾಮಚಂದ್ರ ಶೆಟ್ಟಿ, ಮನೋಜ್‌ ಸಿ. ಪೂಜಾರಿ, ದಯಾನಂದ ಬೋಂಟ್ರಾ, ಯಶೋದಾ ಎಲ್‌. ಪೂಜಾರಿ ಅಹ್ಮದಾಬಾದ್‌, ಕುಸುಮಾ ಪೂಜಾರಿ, ಯಶೋದಾ ಕೆ. ಪೂಜಾರಿ ಬರೋಡಾ, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ವಿವಿಧ ಶಾಖೆಗಳ  ಸದಸ್ಯ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿ. ವಿ. ಸುವರ್ಣ ಮತ್ತು ಜಿನ್‌ರಾಜ್‌ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ್‌ ಸುವರ್ಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next