ಮುಂಬಯಿ: ಪ್ರತಿಷ್ಠಿತ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ಭಾರತ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಇದರ ವಾರ್ಷಿಕ ಮಹಾಸಭೆಯು ಮಾ. 27ರಂದು ಗೋರೆಗಾಂವ್ ಪಶ್ವಿಮದ ಲಲಿತ್ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಜರಗಿತು.
ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಹಿರಿಯ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭೆಯ ಅಧ್ಯಕ್ಷತೆ ವಹಿಸಿದ ಭಾರತ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಅಶೋಕ್ ಎಲ್. ಕೋಟ್ಯಾನ್ ಮಾತನಾಡಿ, ಒಂದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದಾಗಿದೆ. ಸಮಯ ಪ್ರಜ್ಞೆ, ಗ್ರಾಹಕ ಸಂತೃಪ್ತಿಗೊಳಿಸುವ ವಿಶಾಲ ಮನೋಭಾವ ಪ್ರತಿಯೊಬ್ಬರಲ್ಲಿ ಅಂತರ್ಗತವಾಗಿರಬೇಕು. ಕೊರೊನಾ ಸಂದರ್ಭ ಭಾರತ್ ಬ್ಯಾಂಕ್ ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮದಂತೆ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಸೇವಾವಧಿಯನ್ನು ವಿಸ್ತರಿಸಿ ವೈದ್ಯಕೀಯ ಚಿಕಿತ್ಸೆಗೆ ಸಹಕರಿಸಿದೆ. ಎಂತಹ ತುರ್ತು ಪರಿಸ್ಥಿತಿಯಲೂ ಎದೆಗುಂದದೆ ಆತ್ಮ ಸ್ಥೆçರ್ಯದಲ್ಲಿ ಮುನ್ನಡೆಯಬೇಕು. ಮಾತೃ ಸಂಸ್ಥೆ ಬಿಲ್ಲವ ಅಸೋಸಿಯೇಶನ್ ಮುಂಬಯಿಯ ಪ್ರಾಯೋಜತ್ವದಲ್ಲಿರುವ ಭಾರತ್ ಬ್ಯಾಂಕ್ ಅಪೂರ್ವ ಸಾಧನೆಗಳಿಂದ ಮುನ್ನಡೆಯುತ್ತಿದೆ. ನಮ್ಮ ಬ್ಯಾಂಕ್ ಭದ್ರತೆ ಮತ್ತು ಸದೃಡತೆಗಾಗಿ ಆನೇಕ ಪ್ರಶಸ್ತಿ, ಪುರಸ್ಕಾರಗಳ ಮೂಲಕ ಶೇಷ್ಠತೆಯನ್ನು ಹೊಂದಿದೆ. ಇದನ್ನು ಸದಾ ಶಾಶ್ವತಗೊಳಿಸುದು ನಮ್ಮ ಧ್ಯೇಯವಾಗಿದೆ. ನಿರ್ದೇಶಕ ಮಂಡಳಿ, ಉನ್ನತ ಅಧಿಕಾರಿಗಳೊಂದಿಗೆ ಮಧುರ ಬಾಂಧವ್ಯವನ್ನು ಇರಿಸಿಕೊಂಡು ಭಾರತ್ ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಮುಂದಾಗಬೇಕು ಎಂದರು.
ಗೌರವ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಸನಿಲ್ ಅವರು ಮಾತನಾಡಿ, ಸುರಕ್ಷಿತ ಠೇವಣಿ, ಕರೆನ್ಸಿ ವಿನಿಮಯ, ಮುಂತಾದ ಹಲವಾರು ಹಣಕಾಸು ಸೇವೆಗಳಿಗೆ ಭಾರತ್ ಬ್ಯಾಂಕ್ ಖಾತೆದಾರರ, ಶೇರುದಾರರ ಮತ್ತು ಹಿತೈಷಿಗಳ ಪ್ರಶಂಶೆಗೆ ಪಾತ್ರವಾಗಿದೆ. ಬ್ಯಾಂಕ್‌ಗಳು ಅಧುನಿಕ ಕಾಲದ ಹಣಕಾಸಿನ ಜೀವನಾಡಿಗಳು. ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿರುವ ಉಳಿತಾಯ ಖಾತೆ, ಚಾಲ್ತಿ ಖಾತೆ, ಸ್ಥಿರ ಠೇವಣಿ ಮುಂತಾದವುಗಳ ಬಗ್ಗೆ ಹೆಚ್ಚಿನ ಅದ್ಯತೆ ನೀಡಬೇಕು. ಹಕ್ಕುಗಳ ಬಗ್ಗೆ ಮಾತಾಡುವಾಗ ನಾವು ಕರ್ತವ್ಯವನ್ನು ಮರೆಯಬಾರದು ಎಂದರು.
ಇದೇ ಸಂದರ್ಭ ಸೇವೆಯಿಂದ ನಿವೃತಿ ಹೊಂದಿದ ಯೂನಿಯನ್‌ನ ಹಿರಿಯ ಪದಾಧಿಕಾರಿ ವಿಜಯ ಪಾಲನ್ ಅವರನ್ನು ವೇದಿಕೆಯ ಗಣ್ಯರು ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಗತ ವರ್ಷದಲ್ಲಿ ನಿಧನ ಹೊಂದಿದ ಭಾರತ್ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷರಾದ ಜಯ ಸಿ. ಸುವರ್ಣ ಮತ್ತು ಎಂ. ಬಿ. ಕುಕ್ಯಾನ್, ಬ್ಯಾಂಕಿನ ಸಿಬಂದಿ ನಾರಾಯಣ ಸಿ. ಪೂಜಾರಿ, ರೋಹಿತಾಕ್ಷ ಆರ್. ಸುವರ್ಣ ಮತ್ತು ಹರೀಣಾಕ್ಷಿ ಕೆಮ್ರಾಲ್ ಅವರಿಗೆ ಮಹಾಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭಾರತ್ ಬ್ಯಾಂಕ್ ಜೋಗೇಶ್ವರಿ ಶಾಖೆಯ ಕೋಶಾಧಿಕಾರಿ ಪುರುಷೋತ್ತಮ ಕೆ. ಪೂಜಾರಿ ಆಯ-ವ್ಯಯ ಮಂಡಿಸಿದರು. ದಹಿಸರ್ ಶಾಖೆಯ ವಿನುತಾ ಪಿ. ಪೂಜಾರಿ ಗತ ಮಹಾಸಭೆಯ ವರದಿ ವಾಚಿಸಿದರು. ಭಾರತ್ ಬ್ಯಾಂಕ್ ದಹಿಸರ್ ಶಾಖೆಯ ಲೋಹಿತಾಕ್ಷ ಅಂಚನ್ ಪ್ರಾರ್ಥಿಸಿದರು. ಲೆಕ್ಕ ಪರಿಶೋಧಕರಾಗಿ ಮೆಸರ್ಸ್ ಅಶ್ವಜಿತ್ ಅಸೋಸಿಯೇಟ್ಸ್ ಅವರನ್ನು ಮಹಾಸಭೆಯಲ್ಲಿ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಸದಸ್ಯರು ಸಲಹೆ ಸೂಚನೆ ನೀಡಿದರು. ಜತೆ ಕಾರ್ಯದರ್ಶಿ ಅಂಧೇರಿ ಪೂರ್ವ ಶಾಖೆಯ ಪ್ರಿಯ ಬಿ. ಪೂಜಾರಿ ಧನ್ಯವಾದಗೈದರು. ವೇದಿಕೆಯಲ್ಲಿ ಉಪಾಧ್ಯಕ್ಷ ಲೋಹಿತಾಕ್ಷ ಎ. ಅಂಚನ್, ರಾಘವೇಂದ್ರ ಪ್ರಸಾದ್ ಸಾಲ್ಯಾನ್ ಗಿರೀಶ್ ಎ. ಸಾಲ್ಯಾನ್, ಸುಜಿತ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.