ಬಳ್ಳಾರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನಿಲುವು ಖಂಡಿಸಿ ಹಾಗೂ ಕೇಂದ್ರ ಸರ್ಕಾರ ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಒತ್ತಾಯಿಸಿ ನಗರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘ, ರೈತರ ಮತ್ತು ಕೃಷಿ ಕಾರ್ಮಿಕರ ಸಂಘಟನೆ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಡಾ| ರಾಜಕುಮಾರ್ ರಸ್ತೆಯಲ್ಲಿರುವ ನಗರೂರು ನಾರಾಯಣರಾವ್ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಗಡಿಗಿ ಚನ್ನಪ್ಪ ವೃತ್ತ, ಸ್ಟೇಷನ್ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಅಂದಾಜು 54 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಈ ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು. ಅಂತೆಯೇ ಜಿಲ್ಲೆಯ ನಗರ-ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಸರ್ಕಾರಿ ಹಾಗೂ ಅರಣ್ಯ ಭೂಮಿಯ ಬಡ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಬರಗಾಲ ಮತ್ತು ನಿರಂತರವಾಗಿ ಕುಸಿದ ಬೆಲೆಗಳಿಂದಾಗಿ ನಷ್ಟಕ್ಕೊಳಗಾಗಿ ಸಾಲಗಾರರಾಗಿರುವ ಎಲ್ಲಾ ರೈತರು, ಕೃಷಿ ಕೂಲಿಕಾರರು, ಗೇಣಿದಾರರ ಖಾಸಗಿ ಸೇರಿದಂತೆ ಎಲ್ಲಾ ಸಂಸ್ಥೆಗಳ ಸಾಲವನ್ನು (2017-18 ಸಾಲ ಸೇರಿದಂತೆ) ಮನ್ನಾ ಮಾಡಬೇಕು. ಅದೇ ರೀತಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತಿತರೆ ಇಲಾಖೆಗಳಿಂದ ನೀಡಿದ ಎಲ್ಲಾ ರೀತಿಯ ಸಹಾಯಧನದ ಸಾಲ ಮತ್ತು ಸ್ತ್ರೀ-ಶಕ್ತಿ ಸಂಘಗಳ ಎಲ್ಲಾ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ರೈತರು ಬ್ಯಾಂಕ್‌ಗಳಿಂದ ಪಡೆದ ಸಾಲ ಮನ್ನಾ ಮಾಡಬೇಕು. ರೈತರು ಬೆಳೆದ ಬೆಳೆಗೆ ನ್ಯಾಯೋಚಿತವಾಗಿ ಸೂಕ್ತ ಬೆಲೆ ನಿಗದಿಪಡಿಸಬೇಕು. ಡಾ|ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರು ಬೆಳೆದ ಬೆಳೆಯ ಅದರ ಒಟ್ಟು ಖರ್ಚು ಮತ್ತು ಅರ್ಧದಷ್ಟು ಲಾಭಾಂಶ ಸೇರಿಸಿ, ಬೆಂಬಲ ಬೆಲೆಯನ್ನು ಖಾತ್ರಿಯಾಗಿ ನೀಡಲು ಶಾಸನ ರೂಪಿಸಬೇಕು. ಮಾರುಕಟ್ಟೆಯಲ್ಲಿಯೂ ದರ ಕುಸಿಯದಂತೆ ತಡೆಯಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ದಿನಕ್ಕೆ ಕನಿಷ್ಠ 600 ರೂ.ಗಳಿಗೆ ಹೆಚ್ಚಿಸಬೇಕು. ಕೂಲಿ ಕೆಲಸದ ದಿನಗಳನ್ನು 200 ದಿನಗಳಿಗೆ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗವನ್ನು ನಗರ-ಪಟ್ಟಣಗಳ ಬಡವರಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಬೆಳೆ ವಿಮೆ ಯೋಜನೆಯನ್ನು ರೈತ ಸ್ನೇಹಿಯಾಗಿ ತಕ್ಷಣವೇ ಪರಿವರ್ತಿಸಲು, ಅಗತ್ಯ ತಿದ್ದುಪಡಿ ತರಬೇಕು. ಕರ್ನಾಟಕ ರಾಜ್ಯದಲ್ಲಿ ಸತತವಾಗಿ ಮೂರು ವರ್ಷಗಳಿಂದ ಬರಗಾಲದ ಕರಿನೆರಳು ಆವರಿಸಿದ್ದು, ಇಡೀ ರಾಜ್ಯವನ್ನು ಬರಗಾಲ ಪೀಡಿತ ಎಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ಯು.ಬಸವರಾಜ್, ವಿ.ಎಸ್.ಶಿವಶಂಕರ್, ಆರ್‌ಕೆಎಸ್‌ನ ಎ.ದೇವದಾಸ್, ಇ.ಹನುಮಂತಪ್ಪ, ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಗೋಣಿ ಬಸಪ್ಪ, ಕೃಷ್ಣಪ್ಪ, ಡಿಎಸ್ ಎಸ್ ಮುಖಂಡರಾದ ಗಂಗಾಧರ, ಕೆಂಚಪ್ಪ, ಹುಸೇನಪ್ಪ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಬಿ.ಮಾಳಮ್ಮ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಂಬಯ್ಯ ನಾಯಕ, ಆರ್‌ಕೆಎಸ್‌ನ ಗಾದಿಲಿಂಗ, ಗೋಪಾಲ ಸೇರಿದಂತೆ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್), ಅಖೀಲ ಭಾರತ ಕಿಸಾನ್‌ಸಭಾ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ವಿವಿಧ ದಲಿತ ಸಂಘರ್ಷ ಸಮಿತಿಗಳ ಸಮನ್ವಯ ಸಮಿತಿ, ದಲಿತ ಹಕ್ಕುಗಳ ಸಮಿತಿ ಮತ್ತಿತರೆ ಸಂಘಟನೆಗಳ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.