Advertisement

ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ 

05:34 PM Nov 08, 2017 | |

ಶಿವಮೊಗ್ಗ: ವೇತನ ಆಯೋಗದ ವರದಿ ಆಧಾರದ ಮೇಲೆ ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಳ ಮಾಡುವಂತೆ ರೈತರು
ಬೆಳೆದ ಎಲ್ಲಾ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌
ಒತ್ತಾಯಿಸಿದರು. 

Advertisement

ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ನಗರದ ಈದ್ಗಾ ಮೈದಾನದಲ್ಲಿ ರಾಜ್ಯ ರೈತಸಂಘದ ವತಿಯಿಂದ ಆಯೋಜಿಸಲಾಗಿದ್ದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳು ರೈತರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು. ರೈತರು ಸಾಲದ ಶೂಲದಿಂದ ಹೊರಬರಬೇಕಿದೆ. ಈ ಬಗ್ಗೆ ರೈತರು ಗಂಭೀರವಾಗಿ ಚಿಂತಿಸಬೇಕು ಎಂದರು. ಉದ್ಯಮಿಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ದೊರಕಿಸಿಕೊಡಬೇಕು. ರೈತರು ಸಾಲ ಮಾಡಿರುವುದು ದೇಶಕ್ಕೆ ಅನ್ನ ನೀಡುವ ಸಲುವಾಗಿ. ಕೇಂದ್ರ ಹಾಗೂ ರಾಜ್ಯಸರ್ಕಾರ ಮಾತಿಗೆ ತಪ್ಪಬಾರದು. ರೈತರ ಎಲ್ಲ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ಹಗಲು ದರೋಡೆ ಮಾಡಿ ರೈತರನ್ನು ವಂಚಿಸಲಾಗುತ್ತಿದೆ. ವೈಜ್ಞಾನಿಕ ಬೆಲೆ ದೊರಕದ ಮಾಡಿದ ಸಾಲವನ್ನು ರೈತರು ತೀರಿಸುವುದು ಹೇಗೆ ಎಂದು ಪ್ರಶ್ನಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಸಾವಿರ ರೂ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಯಾವ ಆಧಾರದಲ್ಲಿ 50 ಸಾವಿರ ರೂ. ಸಾಲಮನ್ನಾ ಮಾಡಲಾಗಿದೆ? ಇದಕ್ಕೆ ವೈಜ್ಞಾನಿಕ ಕಾರಣ ನೀಡಲು ಸಾಧ್ಯವೇ? ಅಥವಾ ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮನ್ನಾ ಮಾಡಲಾಗಿದೆಯೇ ಎಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌. ಆರ್‌. ಬಸವರಾಜಪ್ಪ ಮಾತನಾಡಿ, ದೊಡ್ಡ ದೊಡ್ಡ ಉದ್ಯಮಿಗಳು  ಸಾವಿರಾರು ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಇವರಿಂದ ಸಾಲ ವಸೂಲಿ ಮಾಡುವ ತಾಕತ್ತು ಕೇಂದ್ರ ಸರ್ಕಾರಕ್ಕಿಲ್ಲ. ಆದರೆ ದೇಶಕ್ಕೆ ಅನ್ನ ನೀಡುವ ರೈತರ ಸಾಲ ವಸೂಲಿ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಸಂಸದ ಯಡಿಯೂರಪ್ಪನವರು ಪ್ರಧಾನಿ ಬಳಿ ಚರ್ಚೆ ನಡೆಸಿ ರೈತರ ಸಾಲ ಮನ್ನಾ ಮಾಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಟಿ.ಎಂ. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ, ರೈತ
ಮುಖಂಡ ಕಡಿದಾಳು ಶಾಮಣ್ಣ, ರಾಜ್ಯ ಖಜಾಂಚಿ ಡಾ| ಬಿ.ಎಂ. ಚಿಕ್ಕಸ್ವಾಮಿ, ರಾಜ್ಯ ಕಾರ್ಯದರ್ಶಿಗಳಾದ ಕೆ. ರಾಘವೇಂದ್ರ, ಹಿಟ್ಟೂರು ರಾಜು ಪ್ರಮುಖರಾದ ಇ.ಬಿ. ಜಗದೀಶ್‌, ಅರಬಿಳಚಿ ಈಶಣ್ಣ, ಎಸ್‌. ಶಿವಮೂರ್ತಿ, ರಾಮಚಂದ್ರಪ್ಪ, ಪಂಚಾಕ್ಷರಪ್ಪ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next