ಮಡಿಕೇರಿ: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ನಾನು ಕೂಡ ಆಕಾಂಕ್ಷಿಯಾಗಿರುವುದಾಗಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸ್ಪರ್ಧೆಗೆ ಅವಕಾಶ ನೀಡುವಂತೆ ಈಗಾಗಲೇ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದೇನೆ. ಆದರೆ ಪಕ್ಷದ ತೀರ್ಮಾನವೇ ಅಂತಿಮವಾಗಿದೆ. ಪಕ್ಷ ಯಾವುದೇ ಅಭ್ಯರ್ಥಿಗೆ ಸ್ಪರ್ಧೆಗೆ ಅವಕಾಶ ನೀಡಿದರೂ ಅಂತಹ ಅಭ್ಯರ್ಥಿಯ ಪರವಾಗಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು.
ಜೆಡಿಎಸ್ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ಚರ್ಚೆಗಳು ಮಾತ್ರವೇ ನಡೆಯುತ್ತಿವೆ ಎಂದರು.
ಸಂಸದ ಪ್ರತಾಪ್ ಸಿಂಹ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲ್ಲ ಪಕ್ಷಗಳಲ್ಲೂ ಎರಡು ಮೂರು ಮಂದಿ ಆಕಾಂಕ್ಷಿಗಳು ಇರುತ್ತಾರೆ. ಅದರಂತೆ ನಾನೂ ಅವಕಾಶ ಬಯಸಿದ್ದೇನೆ. ಅಭ್ಯರ್ಥಿಗಳ ಅಂತಿಮ ತೀರ್ಮಾನ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಮಿತಿ ಮಾಡಲಿದೆ ಎಂದು ಹೇಳಿದರು.
33 ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ. ಮಾತ್ರವಲ್ಲದೇ 1996ರಿಂದ 99ರವರೆಗೆ ಕೊಡಗು ಜಿಲ್ಲಾ ಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದು, ಮಹಿಳಾ ಪೊಲೀಸ್ ಸಿಬಂದಿ ನಿಯೋಜನೆ ಮಾಡಿದ್ದೇನೆ. ಮೈತ್ರಿ ಪೊಲೀಸ್ ಸಮುದಾಯ ಭವನ, ಆರ್‌ಟಿಒ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಆರ್‌ಟಿಒ ಕಚೇರಿಯನ್ನು ಸ್ಥಳಾಂತರಿಸಿರುವುದು, ಹೊರ ಭಾಗದಲ್ಲಿ ಪೊಲೀಸ್ ಚೌಕಿಗಳ ಸ್ಥಾಪನೆ ಸಹಿತ ಜನಪರ ಸೇವೆ ಸಲ್ಲಿಸಿದ್ದೇನೆ ಎಂದು ವಿವರಿಸಿದರು.
ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಇಂದಿಗೂ ಉತ್ತಮ ಬಾಂಧವ್ಯವೂ ಇದೆ ಎಂದು ಭಾಸ್ಕರ ರಾವ್ ಹೇಳಿದರು.