Advertisement

ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಸ್ಥಳೀಯ ಸಂಸ್ಥೆಗಳ ವಾರ್ಷಿಕೋತ್ಸವ

11:40 PM Aug 30, 2019 | Lakshmi GovindaRaj |

ಬೆಂಗಳೂರು: ಚುನಾವಣೆ ನಡೆದು ಅಧ್ಯಕ್ಷ- ಉಪಾಧ್ಯಕ್ಷರಿಲ್ಲದೆ ರಾಜ್ಯದ 109 ನಗರ ಸ್ಥಳೀಯ ಸಂಸ್ಥೆಗಳು “ವಾರ್ಷಿಕೋತ್ಸವ’ ಆಚರಿಸಿಕೊಳ್ಳುತ್ತಿವೆ. ಈ ಸಂಸ್ಥೆಗಳಿಗೆ ಕಳೆದ ವರ್ಷ ಇದೇ ದಿನ ಅಂದರೆ 2018ರ ಆ.31ರಂದು ಚುನಾವಣೆ ನಡೆದಿತ್ತು. ಇದಲ್ಲದೇ ಇದೇ ವರ್ಷ ಮೇ ತಿಂಗಳಲ್ಲಿ ಚುನಾವಣೆ ನಡೆದಿರುವ 65 ನಗರ ಸ್ಥಳೀಯ ಸಂಸ್ಥೆಗಳಿಗೂ ಅಧ್ಯಕ್ಷ-ಉಪಾಧ್ಯಕ್ಷ ಭಾಗ್ಯ ಸಿಕ್ಕಿಲ್ಲ. ಇನ್ನೂ 43 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದೆ. ಹಾಗಾಗಿ, ಸದ್ಯ ರಾಜ್ಯದ 200ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರ್‌ ನಡೆಯುತ್ತಿದೆ.

Advertisement

2018ರ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಅವಧಿ ಮುಕ್ತಾ ಯ ಗೊಂಡಿದ್ದ 109 ನಗರ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ 2018ರ ಆ.31ರಂದು ಚುನಾವಣೆ ನಡೆದಿತ್ತು. ಆದರೆ, ಈ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಕೆಲವರು ಕೋರ್ಟ್‌ ಮೆಟ್ಟಿಲೇರಿ ದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸ್ಥಗಿತಗೊಂಡಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದು, ಸದ್ಯ ಹೈಕೋರ್ಟ್‌ ತಡೆ ನೀಡಿದೆ. ಹಾಗಾಗಿ, ಕಳೆದೊಂದು ವರ್ಷದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿದೆ.

ಈ ಮಧ್ಯೆ 2019ರ ಮಾರ್ಚ್‌ ಹಾಗೂ ಜುಲೈ ನಲ್ಲಿ ಅವಧಿ ಮುಕ್ತಾಯಗೊಳ್ಳಲಿರುವ 103 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರ ಡಿ ಸಿತ್ತು. ಆದರೆ, ವಾರ್ಡ್‌ವಾರು ಮೀಸಲಾತಿ ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆಗ 63 ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಅಧಿಸೂಚನೆ ಯನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. ಅದರಂತೆ, ಉಳಿದ 39 ನಗರ ಸ್ಥಳೀಯ ಸಂಸ್ಥೆಗಳನ್ನು ಬಿಟ್ಟು 63 ಸಂಸ್ಥೆಗಳಿಗೆ 2019ರ ಮೇ ತಿಂಗಳಲ್ಲಿ ಚುನಾವಣೆ ನಡೆದಿತ್ತು.

ಮೊದಲ ಹಂತದಲ್ಲಿ ಚುನಾವಣೆ ನಡೆದಿರುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾ ತಿಗೆ ತಡೆ ಇರುವುದರಿಂದ 2ನೇ ಹಂತದ 63 ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದಿಲ್ಲ.  43 ಕಡೆ ಚುನಾವಣೆ ನಡೆಯಬೇಕಿದೆ. ಈ ಮಧ್ಯೆ, ಹೈಕೊರ್ಟ್‌ನ ಧಾರವಾಡ ಮತ್ತು ಕಲಬುರಗಿ ನ್ಯಾಯಪೀಠಗಳಲ್ಲಿ ವಿಚಾರಣೆಗೆ ಬಾಕಿ ಇರುವ 14 ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 43 ಕಡೆ ಚುನಾವಣೆ ನಡೆಯಬೇಕಿದೆ.

2016ರಲ್ಲಿ ಗ್ರಾಮ ಪಂಚಾಯಿತಿಯಿಂದ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿದ 53 ಪಟ್ಟಣ ಪಂಚಾಯಿತಿಗಳು ಸೇರಿ ರಾಜ್ಯದಲ್ಲಿ ಒಟ್ಟು 273 ನಗರ ಸ್ಥಳೀಯ ಸಂಸ್ಥೆಗಳಿವೆ. ಈ ಪೈಕಿ ಈವರೆಗೆ 170ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿದೆ. ಮೇಲ್ದರ್ಜೆಗೇರಿದ 53 ಸಂಸ್ಥೆಗಳಿಗೆ ಪ್ರತ್ಯೇಕ ವಾಗಿ ಚುನಾವಣೆ ನಡೆಸಬೇಕಾಗುತ್ತದೆ. ನ್ಯಾಯಾಲಯದ ವ್ಯಾಜ್ಯ ಇತ್ಯರ್ಥಗೊಂಡು, ಸರ್ಕಾರ ಪಟ್ಟಿ ಕಳಿಸಿಕೊಡು ವವರೆಗೆ ನಾವು ಮುಂದುವರಿಯಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳುತ್ತಾರೆ.

Advertisement

ಅಭಿವೃದ್ಧಿಗೆ “ಗ್ರಹಣ’: ಚುನಾವಣೆ ನಡೆದಿರುವ ಕಡೆ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಚುನಾಯಿತ ಜನಪ್ರತಿನಿಧಿಗಳ ಕೈಗೆ ಅಧಿಕಾರ ಸಿಕ್ಕಿಲ್ಲ. ಅವಧಿ ಮುಗಿದು ಚುನಾವಣೆ ನಡೆಯಬೇಕಿರುವ ಕಡೆ ಸದ್ಯ ದಿಕ್ಕಿಲ್ಲದ ಸ್ಥಿತಿ. 200ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸದ್ಯ ಆಡಳಿತಾಧಿಕಾರಿಗಳದ್ದೇ ದರ್ಬಾರ್‌. ಒಬ್ಬೊಬ್ಬರಿಗೆ ಒಂದಕ್ಕಿಂತ ಹೆಚ್ಚು ಕಡೆ ಜವಾಬ್ದಾರಿ ನಿಭಾಯಿಸ ಬೇಕಿರುವುದರಿಂದ ಆಡಳಿತದತ್ತ ಗಮನ ಕೊಡಲು ಆಗುತ್ತಿಲ್ಲ. ಸಾಮಾನ್ಯ ಸಭೆಗಳು ನಡೆಯುತ್ತಿಲ್ಲ, ನಿವೇಶನ, ಮನೆ, ಪರಿಹಾರ ಸೇರಿ ಫ‌ಲಾನುಭವಿ ಆಧರಿತ ಯೋಜನೆಗಳ ಫ‌ಲಾನುಭವಿಗಳ ಆಯ್ಕೆ ನಡೆಯುತ್ತಿಲ್ಲ. ಅನುದಾನ ಸಮರ್ಪಕ ಬಳಕೆ ಆಗುತ್ತಿಲ್ಲ. ಚುನಾವಣೆ ಗೆದ್ದರೂ ಸುಮಾರು 4 ಸಾವಿರ ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕಾರ ಭಾಗ್ಯ ಸಿಕ್ಕಿಲ್ಲ.

“ಮೊದಲ ಹಂತದಲ್ಲಿ ಚುನಾವಣೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಆಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸರ್ಕಾರ ನಡೆಸಬೇಕು. ಉಳಿದಂತೆ, 2ನೇ ಹಂತದಲ್ಲಿ ಇನ್ನೂ 40ಕ್ಕೂ ಹೆಚ್ಚು ಕಡೆ ನಡೆಸಬೇಕಾಗಿದೆ. ಚುನಾವಣೆ ನಡೆಯಬೇಕಿರುವ ಕೆಲವು ಸಂಸ್ಥೆಗಳ ಮೀಸಲಾತಿ ವಿಚಾರ ಕೋರ್ಟ್‌ನಲ್ಲಿ ಬಾಕಿ ಇದೆ. ಆ ಅರ್ಜಿಗಳು ಇತ್ಯರ್ಥಗೊಂಡ ಬಳಿಕ ಎಲ್ಲದ್ದಕ್ಕೂ ಒಂದೇ ಬಾರಿಗೆ ಅಧಿಸೂಚನೆ ಹೊರಡಿಸಬೇಕು ಎಂಬ ಆಲೋಚನೆಯಿದೆ. ಅದಕ್ಕಾಗಿ ಆಯೋಗವೂ ಸಹ ನ್ಯಾಯಾಲಯಕ್ಕೆ ಕೋರಿಕೊಳ್ಳುತ್ತಿದೆ.
-ಡಾ. ಬಿ. ಬಸವರಾಜು, ರಾಜ್ಯ ಚುನಾವಣಾ ಆಯುಕ್ತ

ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ತಡೆಯಾಜ್ಞೆ ಇರುವುದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವಾರ ಏನಾದರೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಿದೆ.
-ಅಂಜುಂ ಪರ್ವೇಜ್‌, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next