Advertisement
ನಿಗಮದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ವರಪ್ಪ, ಮಾರ್ಚ್ 2025ರ ವರೆಗೆ ಕರ್ನಾಟಕ ಸರಕಾರಕ್ಕೆ ಅಕ್ಕಿ ಒದಗಿಸಲು ಸಿದ್ಧರಿದ್ದೇವೆ. ಕರ್ನಾಟಕ ಸರಕಾರದಿಂದ 2.36 ಲಕ್ಷ ಟನ್ ಅಕ್ಕಿಗೆ ಬೇಡಿಕೆ ಬಂದಿದೆ. 18 ಸಾವಿರ ಟನ್ ತತ್‌ಕ್ಷಣ ಖರೀದಿಸುವುದಾಗಿ ತಿಳಿಸಿದೆ. ಉಳಿದ ಅಕ್ಕಿ ಖರೀದಿ ಬಗ್ಗೆ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷ ಅಕ್ಕಿಯ ಉತ್ಪಾದನೆಯಲ್ಲಿ ಕೊರತೆಯಿರಲಿಲ್ಲ. ಹೀಗಾಗಿ ಕರ್ನಾಟಕ ಸರಕಾರದ ಬೇಡಿಕೆಗೆ ಅನುಗುಣವಾಗಿ ಅಕ್ಕಿ ಪೂರೈಕೆ ಮಾಡುವಂತೆ ಕಳೆದ ಜುಲೈ 29ರಂದು ಭಾರತೀಯ ಆಹಾರ ನಿಗಮದ ಕೇಂದ್ರ ಕಚೇರಿಯಿಂದ ನಮಗೆ ಸೂಚನೆ ಬಂದಿತ್ತು. ಅದರಂತೆ ಜುಲೈ 30ರಂದು ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರನ್ನು ಭೇಟಿಯಾಗಿ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರವು 5 ಕೆ.ಜಿ. ಹೆಚ್ಚುವರಿಯಾಗಿ ನೀಡಬೇಕೆಂದಿರುವ ಅಕ್ಕಿಯನ್ನು ಒದಗಿಸಲು ನಿಗಮ ಸಿದ್ಧವಿದೆ ಎಂದು ಹೇಳಿದ್ದೆವು. ಆ ವೇಳೆ ರಾಜ್ಯ ಸರಕಾರದ ಸಂಬಂಧಿಸಿದ ಅಧಿಕಾರಿಗಳು ಕರ್ನಾಟಕಕ್ಕೆ 2.36 ಲಕ್ಷ ಟನ್ ಹೆಚ್ಚುವರಿ ಅಕ್ಕಿಯ ಅಗತ್ಯವಿದೆ ಎಂದಿದ್ದರು ಎಂದು ಮಹೇಶ್ವರಪ್ಪ ತಿಳಿಸಿದ್ದಾರೆ. ರಾಜ್ಯ ಸರಕಾರವು ನಿಗಮಕ್ಕೆ ಸಲ್ಲಿಸಿದ್ದ ಬೇಡಿಕೆಗೆ ಕೇಂದ್ರ ಸರಕಾರ ಹಾಗೂ ನಿಗಮದ ಮುಖ್ಯ ಕಚೇರಿಯಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ. 2.36 ಲಕ್ಷ ಟನ್ ಅಕ್ಕಿ ಕೊಡಲು ಸಿದ್ಧರಿದ್ದೇವೆ ಎಂದು ಆ.2ರಂದು ಕರ್ನಾಟಕ ಸರಕಾರಕ್ಕೂ ಮಾಹಿತಿ ನೀಡಿದ್ದೇವೆ. ಈ ಬೆಳವಣಿಗೆ ಬಳಿಕ ರಾಜ್ಯ ಸರಕಾರವು ನಮ್ಮನ್ನು ಸಂಪರ್ಕಿಸಿಲ್ಲ. ರಾಜ್ಯ ಸರಕಾರದಲ್ಲಿ ಅಕ್ಕಿ ಖರೀದಿಗೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿರುವ ಸಾಧ್ಯತೆಗಳಿವೆ ಎಂದು ವಿವರಿಸಿದರು.
Related Articles
Advertisement
ಶೀಘ್ರ ನಗದು ವಿತರಣೆ ಬಂದ್?ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ, ಅಕ್ಕಿಯ ಕೊರತೆಯಿಂದಾಗಿ ಪ್ರಸ್ತುತ 5 ಕೆ.ಜಿ ಮಾತ್ರ ಉಚಿತ ಅಕ್ಕಿ ಒದಗಿಸಲಾಗುತ್ತಿದೆ. ಉಳಿದ 5 ಕೆ.ಜಿ. ಅಕ್ಕಿಯ ಬದಲು 170 ರೂ. ನಗದು ನೀಡಲಾಗುತ್ತಿದೆ. ಇದೀಗ ನಿಗಮದಿಂದ ರಾಜ್ಯ ಸರಕಾರವು 2.36 ಲಕ್ಷ ಟನ್ ಅಕ್ಕಿ ಖರೀದಿಗೆ ಮುಂದಾಗಿದೆ. ಈ ಬೆಳವಣಿಗೆ ಗಮನಿಸಿದಾಗ ಇದುವರೆಗೆ ಕೊಡುತ್ತಿದ್ದ 5 ಕೆ.ಜಿ. ಅಕ್ಕಿ ಜತೆಗೆ ಇನ್ನೂ 5 ಕೆ.ಜಿ. ಹೆಚ್ಚುವರಿಯಾಗಿ ಸೇರಿ ಒಟ್ಟು 10 ಕೆ.ಜಿ. ಅಕ್ಕಿ ಒದಗಿಸುವ ಸಾಧ್ಯತೆಗಳಿವೆ.