Advertisement

ಅನ್ನ ವಿಟ್ಠಲ ನನ್ನವ; ಕೊಡದಿದ್ದರೆ ದಾವೆ : ಶೀರೂರು ಶ್ರೀ ಎಚ್ಚರಿಕೆ 

12:27 PM Jul 17, 2018 | Team Udayavani |

ಉಡುಪಿ: ಶೀರೂರು ಮಠದ ಪಟ್ಟದ ದೇವರಾದ ಅನ್ನವಿಟ್ಠಲ ನನ್ನ ಸೊತ್ತು. ದೇವರ ಮೂರ್ತಿಯನ್ನು ಹಿಂದಿರುಗಿ ಕೊಡದೆ ಇದ್ದರೆ ನ್ಯಾಯಾಲಯದಲ್ಲಿ ಕ್ರಿಮಿನಲ್‌ ದಾವೆ ಹೂಡುವೆ ಎಂದು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಎಚ್ಚರಿಸಿದ್ದಾರೆ.

Advertisement

ಶೀರೂರು ಮೂಲ ಮಠದಲ್ಲಿ ಸೋಮವಾರ ನಡೆದ 10 ಸಾವಿರ ಗಿಡ ನೆಡುವ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣ ಮಠದ ಶ್ರೀಕೃಷ್ಣ ನನ್ನ ಸ್ವತ್ತಲ್ಲ, ಪಲಿಮಾರು ಮಠದ ರಾಮನೂ ನನ್ನ ಸ್ವತ್ತಲ್ಲ. ಆದರೆ  ಶೀರೂರು ಮಠದ ಅನ್ನ ವಿಟ್ಠಲ ನನ್ನ ಸ್ವತ್ತು. ಅದನ್ನು ಹೇಗೆ ಪಡೆಯಬೇಕೆಂದು ನನಗೆ ಗೊತ್ತು ಎಂದರು.

ಅಷ್ಟಮಠದ ಯತಿಗಳು ಕಾರ್ಯ ನಿಮಿತ್ತ ಬೇರೆಡೆಗೆ ಹೋಗಬೇಕಾದ ಸಂದರ್ಭ ಅಥವಾ ಅನಾರೋಗ್ಯವಿರುವಾಗ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಪೂಜೆಗೆ ಇಡುವುದು ಸಂಪ್ರದಾಯ. ನನಗೆ ಅನಾರೋಗ್ಯವಿದ್ದಾಗ ಪಟ್ಟದ ದೇವರನ್ನು ಕೃಷ್ಣ ಮಠದಲ್ಲಿ ಪೂಜೆಗೆಂದು ಇರಿಸಿದ್ದೇನೆ. ಕೃಷ್ಣ ಮಠದಿಂದ ಪಟ್ಟದ ದೇವರನ್ನು ಮರಳಿ ಕೊಡುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಕೃಷ್ಣ ಮಠದ ಸುತ್ತ ಭದ್ರತಾ ಪಡೆ ಇರಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು.

ಶಿಷ್ಯ ಸ್ವೀಕಾರ- ಸಲಹೆ ಬೇಕಿಲ್ಲ
ಶಿಷ್ಯ ಸ್ವೀಕಾರದ ಬಗ್ಗೆ ಕೇಳಿದಾಗ, “ಇವರು ಯಾರು ನನ್ನ ಮಠದ ಶಿಷ್ಯ ಸ್ವೀಕಾರಕ್ಕೆ ಹೇಳುವವರು? ಎಲ್ಲ ಮಠಕ್ಕೂ ಶಿಷ್ಯ ಸ್ವೀಕರಿಸಬೇಕಾಗುತ್ತದೆ. ನಮಗೆ ಹೇಳುವುದು ಬೇಡ’ ಎಂದರು.  ಈ ವಿಚಾರದ ಕುರಿತು ಕೃಷ್ಣ ಮಠದಲ್ಲಿ ನಡೆಯುವ ಯಾವುದೇ ಸಭೆಗೆ ನಾನು ಹೋಗುವುದಿಲ್ಲ. ನನ್ನ ನಿಲುವು ಅಚಲವಾಗಿದೆ ಎಂದು ಶ್ರೀಪಾದರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next