ಹಾಸನ: ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೂ 10 ಕೆ.ಜಿ. ಅಕ್ಕಿಯನ್ನು ಜುಲೈ ತಿಂಗಳಿನಿಂದ ವಿತರಣೆ ಮಾಡುವುದಾಗಿ ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದೆ. ಅದರಂತೆ ಹಾಸನ ಜಿಲ್ಲೆಯಲ್ಲಿ ಅನ್ನ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳ ಫಲಾನುಭವಿಗಳೂ ಸೇರಿ 15,02,989 ಮಂದಿ ಅನ್ನಭಾಗ್ಯ ಫಲಾನುಭವಿಗಳಿಗೆ 30 ಸಾವಿರ ಟನ್‌ಗೂ ಹೆಚ್ಚು ಆಹಾರ ಧಾನ್ಯ ಪೂರೈಕೆಯಾಗಬೇಕಾಗಿದೆ. ಈಗ ಸಾರ್ವನಿಕ ವಿತರಣಾ ವ್ಯವಸ್ಥೆಯಡಿ ಜಿಲ್ಲೆಗೆ ಪೂರೈಕೆಯಾಗುತ್ತಿರುವ 15 ಸಾವಿರ ಟನ್ ಜೊತೆಗೆ ಹೆಚ್ಚುವರಿಯಾಗಿ 15 ಸಾವಿರ ಟನ್ ಅಕ್ಕಿ ಪೂರೈಕೆ ಮಾಡಬೇಕಾಗಿದೆ.
ಜಿಲ್ಲೆಯಲ್ಲಿ ಒಟ್ಟು 4,96,246 ಕಾರ್ಡ್‌ದಾರರಿದ್ದು 16,29,664 ಫಲಾನುಭವಿಗಳಿದ್ದಾರೆ. ಆ ಪೈಕಿ ಅಂತ್ಯೋದಯ ಕಾರ್ಡ್‌ಗಳ ಸಂಖ್ಯೆ 23,407 , ಫಲಾನುಭವಿಗಳ ಸಂಖ್ಯೆ 98,885 ಇದ್ದರೆ. ಎಪಿಎಲ್ ಕಾರ್ಡ್‌ಗಳ ಸಂಖ್ಯೆ 43123, ಫಲಾನುಭವಿಗಳ ಸಂಖ್ಯೆ 1,26,675. ಇನ್ನು ಮುಖ್ಯವಾಗಿ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ 4,29,716, ಈ ಕಾರ್ಡ್‌ಗಳ ಫಲಾನುಭವಿಗಳ ಸಂಖ್ಯೆ 14,04,104 ಇದೆ.
ಎಎವೈ ಕಾರ್ಡ್‌ಗೆ 35 ಕೆ.ಜಿ.ಆಹಾರ ವಿತರಣೆ: ಇದೂವರೆಗೂ ಅನ್ನ ಅಂತ್ಯೋದಯ ಕಾರ್ಡ್‌ದಾರರಿಗೆ 21 ಕೆ.ಜಿ.ಅಕ್ಕಿ, 14 ಕೆ.ಜಿ. ರಾಗಿ ಸೇರಿ ಒಟ್ಟು 35 ಕೆ.ಜಿ. ಅಹಾರ ಧಾನ್ಯವನ್ನು ಉಚಿತವಾಗಿ ವಿತರಣೆ ಮಾಡುತ್ತಿ ದ್ದರೇ, ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ಸದಸ್ಯನಿಗೂ ತಲಾ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡುತ್ತಿತ್ತು. ಎಪಿಎಲ್ ಕಾರ್ಡ್‌ದಾರರು ಅಕ್ಕಿ ಖರೀದಿಸ ಬಯಸಿದರೆ ಪ್ರತಿ ಕೆ.ಜಿ.ಗೆ 15 ರೂ.ನಂತೆ ಕಾರ್ಡ್‌ನಲ್ಲಿ ನಮೂದಾದ ಒಬ್ಬ ಸದಸ್ಯನಿಗೆ 5 ಕೆ.ಜಿ. ಅಕ್ಕಿಯನ್ನು ಖರೀದಿಸಬಹುದಿತ್ತು.ಆದರೆ, ಬಹುತೇಕ ಎಪಿಎಲ್ ಕಾರ್ಡ್ ದಾರರು ಅಕ್ಕಿ ಖರೀದಿಸಲು ಹೊಗುತ್ತಿರಲಿಲ್ಲ.
ಪ್ರತಿ ಸದಸ್ಯರಿಗೂ 10 ಕೆ.ಜಿ. ಆಹಾರ ವಿತರಣೆ: ಹೊಸ ಸರ್ಕಾರ ಅನ್ನ ಅಂತ್ಯೋದಯ (ಎಎವೈ) ಕಾರ್ಡ್‌ದಾರರ ಕುಟುಂಬಕ್ಕೆ 35 ಕೆ.ಅಹಾರ ಧಾನ್ಯದ ಬದಲು ಪ್ರತಿ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿ ಸದಸ್ಯನಿಗೂ ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಹಾಗೆಯೇ ಬಿಪಿಎಲ್ ಕಾರ್ಡ್‌ದಾರರಿಗೆ ಈಗ ವಿತರಣೆ ಮಾಡುತ್ತಿದ್ದ 5 ಕೆ.ಜಿ. ಅಕ್ಕಿ ಜೊತೆಗೆ ಹೆಚ್ಚು ವರಿಯಾಗಿ 5 ಕೆ.ಜಿ.ಸೇರಿ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿ ಸದಸ್ಯನಿಗೂ ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಹಾಗಾಗಿ ಹಾಸನ ಜಿಲ್ಲೆಯ ಅಂತ್ಯೋದಯ ಕಾರ್ಡ್‌ನ 98,885 ಫಲಾನುಭವಿಗಳು ಹಾಗೂ ಎಪಿಎಲ್ ಕಾರ್ಡ್‌ಗಳ 4,29,716 ಕಾರ್ಡ್‌ದಾರರು ಸೇರಿ ಒಟ್ಟು 15,02,989 ಫಲಾನುಭವಿಗಳು ಉಚಿತವಾಗಿ ಪ್ರತಿ ತಿಂಗಳೂ ತಲಾ 10 ಕೆ.ಜಿ. ಅಕ್ಕಿಯನ್ನು ಪಡೆಯಲಿದ್ದಾರೆ.
ಆಹಾರ ವಿತರಣೆಗೆ ಕ್ರಮ ಕೈಗೊಳ್ಳಿ: ಈಗ ಸರ್ಕಾರ ಪ್ರತಿ ಸದಸ್ಯನಿಗೂ ತಲಾ 10 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ಹೇಳಿದೆ. ಆದರೆ ಮುಂದಿನ ದಿನಗಳಲ್ಲಿ ಅಕ್ಕಿ ಲಭ್ಯತೆ ಇಲ್ಲದಿದ್ದರೆ ಹಳೆ ಮೈಸೂರು ಜಿಲ್ಲೆಗಳ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಮತ್ತು 5 ರಾಗಿ ವಿತರಣೆ ಮಾಡಬಹುದು. ಹಾಗಯೇ ಉತ್ತರ ಕರ್ನಾಟದ ಜಿಲ್ಲೆಗಳ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಮತ್ತು 5 ಕೆ.ಜಿ. ಜೋಳ ವಿತರಣೆ ಮಾಡಬಹುದು. ಆದರೆ, ಇದುವರೆಗೂ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೆ ಜುಲೈ ತಿಂಗಳಿನಿಂದಲೇ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳ ಫಲಾನುಭವಿಗಳಿಗೆ ತಲಾ 10 ಕೆ.ಜಿ. ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವ ಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಜೂ.3ರಂದೇ ಆದೇಶ ಹೊರಡಿಸಿ ಆಹಾರ ಧಾನ್ಯ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ಗೋದಾಮುಗಳ ವ್ಯವಸ್ಥೆ: ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಪೂರೈಕೆ ಮಾಡುವ ಆಹಾರ ಧಾನ್ಯಗಳು ಭಾರತ ಉಗ್ರಾಣ ನಿಗಮದ ಗೋದಾಮುಗಳಿಗೆ ಸರಬರಾಜಾ ಗುತ್ತದೆ. ಅಲ್ಲಿಂದ ಆಹಾರ ಇಲಾಖೆಯು ಎತ್ತುವಳಿ ಮಾಡಿ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡುತ್ತಿದೆ. ಚೀಲದ ವೆಚ್ಚ ಸೇರಿ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಪ್ರತಿ ಕ್ವಿಂಟಲ್ ಆಹಾರ ಧಾನ್ಯ ವಿತರಣೆಗೆ 124 ರೂ. ಕಮಿಷನ್‌ನ್ನು ಸರ್ಕಾರ ನೀಡುತ್ತಿದೆ. ಜಿಲ್ಲೆಯಲ್ಲಿ ಒಟ್ಟು 10 ಗೋದಾಮುಗಳಿದ್ದು, ಹಾಸನ ಮತ್ತು ಚನ್ನರಾಯಪಟ್ಟಣದಲ್ಲಿ ತಲಾ 2 ಗೋದಾಮುಗಳಂತೆ ಒಟ್ಟು 4 ಗೋದಾಮುಗಳು ಇನ್ನುಳಿದ ಇನ್ನುಳಿದ 6 ತಾಲೂಕುಗಳಲ್ಲಿ ಒಂದೊಂದು ಗೋದಾಮು ಸೇರಿ ಒಟ್ಟು 10 ಗೋದಾಮುಗಳಲ್ಲಿ ಪಡಿತರ ಆಹಾರ ಧಾನ್ಯಗಳ ದಾಸ್ತಾನಿಗೆ ಆಹಾರ ಇಲಾಖೆಯುವ ವ್ಯವಸ್ಥೆ ಮಾಡಿದೆ.
ಆಹಾರ ಧಾನ್ಯ ವಿತರಣೆ ಸಕಲ ವ್ಯವಸ್ಥೆ: ಜಿಲ್ಲೆಯಲ್ಲಿರುವ ಕಾರ್ಡ್‌ದಾರರು ಹಾಗೂ ಫಲಾನುಭವಿಗಳ ಸಂಖ್ಯೆ ಅಧರಿಸಿ ಆಹಾರ ಧಾನ್ಯದ ಪೂರೈಕೆಯಾಗುತ್ತಿದ್ದು, ಜುಲೈ ತಿಂಗಳಿನಿಂದ ದುಪ್ಟಟ್ಟು ಆಹಾರ ಧಾನ್ಯ ಪೂರೈಕೆಯಾಗಲಿದೆ. ಜಿಲ್ಲೆಗೆ ಪೂರೈಕೆಯಾಗುವ ಆಹಾರ ಧಾನ್ಯಗಳ ಸಂಗ್ರಹಣೆ ಹಾಗೂ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಇರುವ ಸಿಬ್ಬಂದಿ ಜೊತೆಗೆ ಕಂದಾಯ ಇಲಾಖೆ ಸಿಬ್ಬಂದಿ ಎರವಲು ಸೇವೆ ಪಡೆದು ಕಾರ್ಡ್‌ದಾರರಿಗೆ ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಾಸನ ಜಿಲ್ಲೆಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಸಂಜಯ್ ಅವರು ತಿಳಿಸಿದ್ದಾರೆ.
– ಎನ್. ನಂಜುಂಡೇಗೌಡ