ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಧಾನ್ಯ ಪಡೆಯಲು ಇನ್ನುಂದೆ ಕೂಪನ್ ಕಡ್ಡಾಯವಲ್ಲ. ಕೂಪನ್ ಪಡೆಯದವರು ಬಯೋಮೆಟ್ರಿಕ್ ಧೃಢೀಕರಣ ನೀಡಿ ಪಡಿತರ ಪಡೆಯಬಹುದು.
ಅನ್ನಭಾಗ್ಯ ಯೋಜನೆಯಡಿ ಕೂಪನ್‌ಗಳ ದುರುಪಯೋಗದಿಂದ ಪಾಠ ಕಲಿತಿರುವ ಆಹಾರ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ. ವಿಕಾಸಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಕೂಪನ್ ವ್ಯವಸ್ಥೆಯಿಂದ ಕಾರ್ಡುದಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಇನ್ನು ಮುಂದೆ ಕೂಪನ್ ಪಡೆದುಕೊಳ್ಳುವುದನ್ನು ಐಚ್ಛಿಕವನ್ನಾಗಿ ಮಾಡಲಾಗಿದೆ. ಅಂದರೆ, ಕೂಪನ್ ಬೇಡ ಅನ್ನುವವರು ತಮ್ಮ ಬಯೋಮೆಟ್ರಿಕ್ ಧೃಢೀಕರಣ ನೀಡಿ ನೇರವಾಗಿ ನ್ಯಾಯಬೆಲೆ ಅಂಗಡಿಗಳಲ್ಲೇ ಪಡಿತರವನ್ನು ಪಡೆದುಕೊಳ್ಳಬಹುದು.
ಕೂಪನ್ ಬೇಕು ಅನ್ನುವವರು ಈಗಿರುವ ವ್ಯವಸ್ಥೆಯಲ್ಲೇ ಕೂಪನ್ ಮೂಲಕ ಪಡಿತರಧಾನ್ಯ ಪಡೆದುಕೊಳ್ಳುವ ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದರು.ಕಾರ್ಡುದಾರರು ಕೂಪನ್ ಪಡೆದುಕೊಳ್ಳಲು ಮೊದಲು ಸೇವಾ ಕೇಂದ್ರಗಳಿಗೆ ಹೋಗಬೇಕು. ಬಳಿಕ ನ್ಯಾಯಬೆಲೆ ಅಂಗಡಿಗೆ ಬಂದು ಪಡಿತರ ತೆಗೆದುಕೊಳ್ಳಬೇಕು. ಇದರಿಂದ ಕಾರ್ಡುದಾರರು ಅಲೆದಾಡುವ ಪರಿಸ್ಥಿತಿಯಿತ್ತು, ಈ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದ್ದೇವೆ. ಆದ್ದರಿಂದ ಕೂಪನ್ ವ್ಯವಸ್ಥೆಯ ಜೊತೆಗೆ ಬಯೋಮೆಟ್ರಿಕ್ ಧೃಢೀಕರಣ ಪದ್ಧತಿಯ ಮೂಲಕ ಪಡಿತರ ಪಡೆದುಕೊಳ್ಳಲು ಅವಕಾಶ ನೀಡಲಾಗುತ್ತಿದೆ.
ಕೂಪನ್ ಬೇಕು ಎನ್ನುವವರು ಒಂದು ವೇಳೆ ಅನಾರೋಗ್ಯ, ಕೆಲಸದ ಒತ್ತಡ ಮತ್ತಿತರ ಕಾರಣಗಳಿಗೆ ಸೇವಾ ಕೇಂದ್ರಗಳಿಗೆ ಹೋಗಿ ಕೂಪನ್ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಆಧಾರ್‌ಕಾರ್ಡ್‌ನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆ ಮೂಲಕ ಕೂಪನ್ ಸಂಖ್ಯೆ ಪಡೆದುಕೊಂಡು, ಅದನ್ನು ಸಂಬಂಧಿಕರು, ನೆರೆಹೊರೆಯವರಿಗೆ ಕೊಟ್ಟು ತಮ್ಮ ಪಾಲಿನ ಪಡಿತರ ತರಿಸಿಕೊಳ್ಳಬಹುದು ಎಂದು ಸಚಿವರು ವಿವರಿಸಿದರು.
ಕಠಿಣ ಕ್ರಮ: ಕೇಂದ್ರದ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದ ಮೇಲೆ ಪಡಿತರ ಪಡೆದುಕೊಳ್ಳುವುದು ಕಾರ್ಡುದಾರರ ಹಕ್ಕು ಆಗಿದೆ. ಆದ್ದರಿಂದ ದಾಸ್ತಾನು ಬಂದಿಲ್ಲ, ಬಂದರೂ ಕಡಿಮೆ ಬಂದಿದೆ, ಬಯೋಮೆಟ್ರಿಕ್ ಯಂತ್ರ ದುರಸ್ತಿಯಲ್ಲಿದೆ, ಕರೆಂಟ್ ಇಲ್ಲ, ನೆಟ್‌ವರ್ಕ್ ಇಲ್ಲ ಮುಂತಾದ ಕಾರಣಗಳು ನೀಡಿ ಪಡಿತರ ನೀಡುವುದನ್ನು ನ್ಯಾಯಬೆಲೆ ಅಂಗಡಿ ಮಾಲಿಕರು ನಿರಾಕರಿಸುವಂತಿಲ್ಲ. ಒಂದು ವೇಳೆ ಯಾರಾದರೂ ನಿರಾಕರಿಸಿದರೆ, ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ ಕಾರ್ಡುದಾರರಿಗೆ ಹಣದ ರೂಪದಲ್ಲಿ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ ಆನ್‌ಲೈನ್ ದೂರು ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಸೂಚನೆ: ಕೂಪನ್ ವ್ಯವಸ್ಥೆ ಇದ್ದ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಗೆ ಎರಡು ತಿಂಗಳು ಬೇಕಾಗಬಹುದು ಎಂದು ಆಹಾರ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಇದಾದ ಬಳಿಕ ಹೊಸ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದ್ದು, ಬಯೋಮೆಟ್ರಿಕ್ ಯಂತ್ರಗಳ ಖರೀದಿ ಹೊಣೆಯನ್ನು ಆಯಾ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಮರ್ಪಕ ವಿದ್ಯುತ್ ಹಾಗೂ ದತ್ತಾಂಶ ಸಂಪರ್ಕ ಇರುವ ಅಂಗಡಿಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಬಯೋಮೆಟ್ರಿಕ್ ಸ್ಕ್ಯಾನರ್‌ನ್ನು ಲ್ಯಾಪ್‌ಟಾಪ್, ಟ್ಯಾಬ್ ಅಥವಾ ಸ್ಮಾರ್ಟ್ ಫೋನ್‌ಗೆ ಅಳವಡಿಸಿಕೊಂಡು ಕಾರ್ಡುದಾರರ ಬಯೋಮೆಟ್ರಿಕ್ ದೃಢೀಕರಣ ಖಾತರಿಪಡಿಸಿಕೊಳ್ಳಬಹುದು. ಇದಕ್ಕಾಗಿ 5 ರಿಂದ 25 ಸಾವಿರ ರೂ.ವರೆಗೆ ಖರ್ಚು ಬರುತ್ತದೆ. ಬಯೋಮೆಟ್ರಿಕ್ ಯಂತ್ರಗಳನ್ನು ಅಳಡಿಸಿಕೊಳ್ಳುವ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಶೇ,75ರಷ್ಟು ಹೆಚ್ಚುವರಿ ಲಾಭಾಂಶ ನೀಡಲಾಗುವುದು ಎಂದು ಖಾದರ್ ಹೇಳಿದ್ದಾರೆ.