ಅಂಕೋಲಾ: ನೆರೆಯ ಕುಮಟಾ ತಾಲೂಕಿನ 7 ಗ್ರಾಮದ ಭಾಗಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೊಗಟಾದ ಯೋಜನಾ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿ ತಡೆ ಹಿಡಿಯದಂತೆ ಸ್ಥಳೀಯರ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾದ ಘಟನೆ ಗುರುವಾರ ನಡೆಯಿತು.
ಜಿಪಂ ಸಿಇಒ ರೋಷನ್ ಅವರ ಸೂಚನೆ ಮೇರೆಗೆ ಕುಮಟಾ ತಾಪಂ ಇಒ ಸಿ.ಟಿ. ನಾಯ್ಕ, ಅಂಕೋಲಾ ತಾಪಂ ಇಒ ಕರೀಂ ಅಸದಿ, ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಕುಮಟಾದ ಎಂಜಿನಿಯರ್ ರಾಘವೇಂದ್ರ, ಅಂಕೋಲಾದ ಇಂಜಿನಿಯರ್ ವಿ.ಎಸ್. ಬಾಲಚಂದ್ರ, ಮೊಗಟಾ ಗ್ರಾಪಂ ಪಿಡಿಒ ಮಹಮ್ಮದ ಪಟೇಲ, ಕಾರ್ಯದರ್ಶಿ ಮಹಂತೇಶ, ಡೊಂಗ್ರಿ ಗ್ರಾಪಂ ಪಿಡಿಒ ಗಿರೀಶ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಕುಮಟಾ ಇಒ ಸಿ.ಟಿ. ನಾಯ್ಕ, ಅಂಕೋಲಾ ಇಒ ಅಸದಿ ಮಾತನಾಡಿ ಮೊಗಟಾ, ಸಗಡಗೇರಿ, ಅಗ್ರಗೋಣ, ಹಿಲ್ಲೂರು, ಡೊಂಗ್ರಿ, ವಾಸರಕುದ್ರಿಗೆ, ಬೆಳಸೆ ಭಾಗದ ನೀರಿನ ಸಮಸ್ಯೆಗೆ 34 ಕೋಟಿ ಪ್ರಸ್ತಾವನೆ ಮಾಡಿ ಸರಕಾರಕ್ಕೆ ಕಳುಹಿಸಲಾಗಿದೆ. ಆದಷ್ಟು ಬೇಗ ಯೋಜನೆ ಕಾರ್ಯರೂಪಕ್ಕೆ ಬರಬಹುದು. ಈ ಹಿನ್ನೆಲೆಯಲ್ಲಿ ಯೋಜನೆಗೆ ತಾವು ತಡೆಯೊಡ್ಡದೆ, ಕಾಮಗಾರಿ ಅನುಷ್ಠಾನಕ್ಕೆ ಸಹಕರಿಸಿ ಎಂದರು.
ಮೊಗಟಾ ಗ್ರಾಪಂ ಅಧ್ಯಕ್ಷೆ ಭಾಗ್ಯಶ್ರೀ ಶಿವಾನಂದ ನಾಯಕ ಮಾತನಾಡಿ ಯಾವುದೇ ಕಾರಣಕ್ಕೂ ಯೋಜನೆ ಮುಂದುವರಿಸಲು ಬಿಡುವುದಿಲ್ಲ. ಇದು 40 ಸಾವಿರ ಜನರ ಜೀವಜಲಕ್ಕಾಗಿ ನಡೆದ ಹೋರಾಟವಾಗಿದೆ. ನಮಗೆ ಮೊದಲು ನೀರು ನೀಡಿ, ನಂತರ ನೆರೆಯ ಕುಮಟಾ ತಾಲೂಕಿನ ಗ್ರಾಮಗಳಿಗೆ ನೀರು ನೀಡಲು ಮುಂದಾಗಿ ಎಂದು ಆಗ್ರಹಿಸಿದರು. ಬಿಜೆಪಿ ತಾಲೂಕಾಧ್ಯಕ್ಷ ನಿತ್ಯಾನಂದ ಗಾಂವಕರ ಮಾತನಾಡಿ ನಮ್ಮ ತಾಲೂಕಿನ ಜೀವನದಿ ಗಂಗಾವಳಿಯ ನೀರು ಸಮೃದ್ಧವಾಗಿದ್ದರೆ ಮಾತ್ರ ನಮ್ಮ ತಾಲೂಕಿನ ನೀರಿನ ಭವಣೆ ನೀಗುತ್ತದೆ. ಆದರೆ ಉದ್ದೇಶಪೂರ್ವಕವಾಗಿಯೆ ಪ್ರತಿ ಭಾರಿಯು ನಮ್ಮ ತಾಲೂಕಿಗೆ ಅನ್ಯಾಯ ಮಾಡಿ, ಬೇರೆ ತಾಲೂಕಿಗೆ ನೀರು ಕೊಡುವ ಅಧಿಕಾರಿ ಹಾಗೂ ರಾಜಕಾರಣಿಗಳ ಒಳ ಮರ್ಮವೇನು ಎಂದು ಪ್ರಶ್ನಿಸಿದ ಅವರು ನಾವು ನೀರಿಗಾಗಿ ಜೈಲಿಗೆ ಹೋಗಲು ಸಿದ್ಧ ಎನ್ನುವುದನ್ನು ತಾವು ಅರ್ಥಮಾಡಿಕೊಳ್ಳಿ ಎಂದರು.
ಅಂತೂ ಸಂಧಾನಕ್ಕೆ ಬಂದ ಅಧಿಕಾರಿಗಳಿಗೆ ಪ್ರಾಣ ಬಿಟ್ಟೇವು.. ನೀರು ಬಿಡೆವು.. ಎಂಬ ಸಂದೇಶವನ್ನು ಗ್ರಾಮಸ್ಥರು ನೀಡುವದರ ಮೂಲಕ, ಅಧಿಕಾರಿಗಳು ಮನವೊಲಿಸಲು ನಡೆಸಿದ ಪ್ರಯತ್ನ ವಿಫಲತೆ ಕಂಡು ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಯಲ್ಲಿ ಮರಳಿದ್ದಾರೆ.