ಅಂಕೋಲಾ : ಜಿಂಕೆಯೊಂದರ ಕೊಂಬು ಮತ್ತು ಕೊಂಬು ಸಹಿತ ತಲೆಬುರುಡೆಯನ್ನು ಮಾರಾಟ ಮಾಡಲು ಯತ್ನಿಸಿದಾಗ ಅಂಕೋಲಾ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ರಾ.ಹೆ.63ರ ಮಾಸ್ತಿಕಟ್ಟಾ ಬಳಿ ನಡೆದಿದೆ.
ಸೂರಜ್ ಶ್ರೀಧರ ಭಂಡಾರಿ(32) ವಂಡರಮನೆ, ಕಲ್ಲೇಶ್ವರ, ಶೌಕತಸಾಬ್ ಹುಸೇನಸಾಬ್ ಮುಜಾವರ(27) ಜತಗಾ ಹಳಿಯಾಳ, ಸಂದೀಪ ದಯಾನಂದ ಭಂಡಾರಿ(25) ವಂಡರಮನೆ ಕಲ್ಲೇಶ್ವರ ಮತ್ತು ಪ್ರಸಾದ ರಾಮಾ ದೇಸಾಯಿ(23) ಕನಕನಹಳ್ಳಿ, ಬಂಧಿತ ಆರೋಪಿಗಳು.
ರಾಮನಗುಳಿ ಅರಣ್ಯ ಪ್ರದೇಶದಲ್ಲಿ 3 ವರ್ಷದ ಹಿಂದೆ ಸಂಗ್ರಹಿಸಿದ್ದರೆನ್ನಲಾದ ಜಿಂಕೆಯ ಒಂದು ಕೊಂಬು ಹಾಗೂ ಕೊಂಬು ಸಹಿತ ತಲೆಬುರುಡೆಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧೀಕ್ಷಕರಾದ ಡಾ.ಸುಮನ ಪೆನ್ನೇಕರ ನಿರ್ದೇಶನದಂತೆ ಡಿ.ವೈ.ಎಸ್.ಪಿ ವ್ಯಾಲಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಶೆಟ್ಟಿ ಹಾಗೂ ಅಪರಾಧ ವಿಭಾಗದ ಪಿ.ಎಸ್.ಐ ಪ್ರೇಮನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಜಿಂಕೆಯ ಕೊಂಬು ಹಾಗೂ ಕೊಂಬು ಸಹಿತ ಜಿಂಕೆಯ ತಲೆಬುರುಡೆಯನ್ನು ಹಾಗೂ ಸಾಗಾಟಕ್ಕೆ ಬಳಸಿದ ಕೆ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ ಕಾರವಾರ ಜೈಲಿಗೆ ಕಳುಹಿಸಲಾಗಿದೆ.
ದಾಳಿಯ ವೇಳೆ ಪೊಲೀಸ್ ಸಿಬ್ಬಂದಿಗಳಾದ ಮಹಮ್ಮದ ಅಬ್ದುಲ್ ಅಜೀಜ್ ಶೇಖ್, ರಾಘವೇಂದ್ರ ಜಿ ನಾಯ್ಕ, ಭಗವಾನ ಗಾಂವಕರ, ವೀರೇಶ ನಾಯ್ಕ, ಸಂತೋಷಕುಮಾರ ಕೆ ಬಿ ಭಾಗವಹಿಸಿದ್ದರು. ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ ಅಧೀಕ್ಷಕರಾದ ಡಾ.ಸುಮನ ಪೆನ್ನೇಕರ ಹಾಗೂ ಹೆಚ್ಚುವರಿ ಪೊಲೀಸ್ ಅಧಿಲಕ್ಷಕರಾದ ಎಸ್ ಬದರೀನಾಥ ಇವರು ಅಭಿನಂದಿಸಿದ್ದಾರೆ.