ಗ್ವಾಲಿಯಾರ್: ಗ್ವಾಲಿಯಾರ್‌ನ ಸಿಟಿ ಸೆಂಟರ್ ಟೆನಿಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಇಂಟರ್‌ನ್ಯಾಷನಲ್ ಟೆನಿಸ್ ಫೆಡರೇಶನ್ ಟೂರ್ನಿಯಲ್ಲಿ ಭಾರತದ ಅಂಕಿತಾ ರೈನಾ ಪ್ರಶಸ್ತಿ ಜಯಿಸಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಸುಮಾರು 4 ವರ್ಷದಿಂದೀಚೆಗೆ ಅನಿತಾ ಎದುರಿಸಿದ್ದ ಪ್ರಶಸ್ತಿ ಬರ ಇಲ್ಲಿಗೆ ಕೊನೆಗೊಂಡಂತಾಗಿದೆ.
4ನೇ ಶ್ರೇಯಾಂಕಿತೆ ಅಂಕಿತಾ 2ನೇ ಶ್ರೇಯಾಂಕಿತ ಫ್ರೆಂಚ್ ಆಟಗಾರ್ತಿ ಅಮಂಡಿನ್ ಹೆಸ್ ಅವರನ್ನು 6-2, 7-5ರ ನೇರ ಸೆಟ್‌ನಿಂದ ಸೋಲಿಸಿದರು. ಇಬ್ಬರ ನಡುವಿನ ಸೆಣಸಾಟ ಒಂದು ಗಂಟೆ, 25 ನಿಮಿಷಗಳ ಕಾಲ ನಡೆಯಿತು.
ಕೊನೆಯ ಬಾರಿ ಅಂಕಿತಾ ವನಿತಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದು 2014ರ ಡಿಸೆಂಬರ್‌ನಲ್ಲಿ. ಅಂದು ಅವರು ಪುಣೆಯಲ್ಲಿ ನಡೆದಿದ್ದ ಐಟಿಎಫ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿದ್ದರು. ಅಲ್ಲಿಂದೀಚೆ ಅಂಕಿತಾ ತಮ್ಮ ಆಟದ ಪ್ರಖರತೆ ಕಳೆದುಕೊಂಡಿದ್ದರು.
ಇದು ಅಂಕಿತಾ ಅವರ ವೃತ್ತಿ ಬದುಕಿನ 6ನೇ ಪ್ರಶಸ್ತಿ. 25ರ ಹರೆಯದ ಅಂಕಿತಾ ವನಿತಾ ಡಬಲ್ಸ್‌ನಲ್ಲಿ ಒಟ್ಟು 12 ಪ್ರಶಸ್ತಿಗಳನ್ನು ಜಯಿಸಿರುವ ಸಾಧನೆ ಮಾಡಿದ್ದಾರೆ.”ನಾನು ಪ್ರೌಢಳಾಗಿದ್ದೇನೆ. ಬರೀ ಆಟಗಾರ್ತಿಯಾಗಿ ಅಲ್ಲ. ಕಠಿನ ಸವಾಲೊಂದನ್ನು ಎದುರುಗೊಳ್ಳಲು ಬೇಕಾಗುಷ್ಟು ಪ್ರೌಢಳಾಗಿದ್ದೇನೆ. ಪಂದ್ಯ ಗೆಲ್ಲಲು ನನಗೆ ಅದೇ ನೆರವಾಯಿತು. ಸಂದರ್ಭಗಳು ಯಾವಾಗಲೂ ನಮ್ಮ ಪರವಾಗಿರುವುದಿಲ್ಲ. ನಾವಾಗ ಭಾವುಕರಾಗದೆ ಎದುರಾಗಿದ್ದನ್ನು ನಿಭಾಯಿಸಬೇಕು’ ಎಂದು ಪಂದ್ಯದ ಬಳಿಕ ಅಂಕಿತಾ ಹೇಳಿದರು.