ಉತ್ತರಾಖಂಡ್: 19 ವರ್ಷದ ರಿಸೆಪ್ಶನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪುಲ್ಕಿತ್ ಆರ್ಯ ತಂದೆ ಬಿಜೆಪಿ ಮುಖಂಡ ವಿನೋದ್ ಆರ್ಯ ಹಾಗೂ ಪುಲ್ಕಿತ್ ಸಹೋದರ ಅಂಕಿತ್ ಆರ್ಯನನ್ನು ತಕ್ಷಣವೇ ಅನ್ವಯವಾಗುವಂತೆ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಮಿನ್ಸ್ ಗೆ 5 ಕೋಟಿ ನೀಡಲು ಮುಂದಾಗಿದ್ದ ರಾಜ್ಯದ ಲೀಗ್; ಐಸಿಸಿಗೆ ಭಯ ಹುಟ್ಟಿಸಿದ ವರದಿ!
ಬಿಜೆಪಿ ಮುಖಂಡನ ಪುತ್ರ ಪುಲ್ಕಿತ್ ಆರ್ಯನ ಒಡೆತನದ ಖಾಸಗಿ ರೆಸಾರ್ಟ್ ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಅಂಕಿತಾ ಭಂಡಾರಿ ನಾಪತ್ತೆಯಾಗಿದ್ದು, ನಂತರ ಆಕೆಯ ಶವ ಶನಿವಾರ ಬೆಳಗ್ಗೆ ಚಿಲ್ಲಾ ಪವರ್ ಹೌಸ್ ಬಳಿ ಪತ್ತೆಯಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಅವರ ಆದೇಶದಂತೆ ವಿನೋದ್ ಆರ್ಯ ಮತ್ತು ಅಂಕಿತ್ ಆರ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪಕ್ಷದ ಮಾಧ್ಯಮ ವಕ್ತಾರ ಮನ್ ವೀರ್ ಚೌಹಾಣ್ ತಿಳಿಸಿದ್ದಾರೆ.
ಇದೊಂದು ಕೊಲೆ ಪ್ರಕರಣವಾಗಿದ್ದು, ಪ್ರಕರಣದಲ್ಲಿ ಶಾಮೀಲಾದ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಹಾಗೂ ಇಬ್ಬರು ನೌಕರರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.
ವೈಯಕ್ತಿಕ ವಿಚಾರದ ಜಗಳದಲ್ಲಿ ತಾನು ರೆಸಾರ್ಟ್ ಸಮೀಪ ಇದ್ದ ಕಾಲುವೆಗೆ ಅಂಕಿತಾಳನ್ನು ತಳ್ಳಿರುವುದಾಗಿ ವಿಚಾರಣೆ ವೇಳೆ ಆರ್ಯ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉತ್ತರಾಖಂಡ್ ಬಿಜೆಪಿ ಘಟಕ ವಿನೋದ್ ಆರ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಒಂದು ವೇಳೆ ಅಪರಾಧ ಎಸಗಿದ್ದು ಸಾಬೀತಾದರೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.