Advertisement

ಪ್ರಸ್ತುತ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ: ದೇಶಪಾಂಡೆ

10:56 AM Jan 06, 2019 | Team Udayavani |

ಭಟ್ಕಳ: ನೂರು ವರ್ಷಗಳ ಹಿಂದೆ ಶಿಕ್ಷಣವೆಂದರೆ ಜನರು ದೂರ ಓಡುತ್ತಿದ್ದ ಕಾಲವದು, ಶ್ರೀಮಂತರೂ ಶಿಕ್ಷಣ ಪಡೆಯದ ಸಮಯದಲ್ಲಿ ಮುಂದಿನ ಗುರಿಯನ್ನಿಟ್ಟುಕೊಂಡು ಅಂಜುಮಾನ್‌ ಶಿಕ್ಷಣ ಸಂಸ್ಥೆ ಸ್ಥಾಪಿಸಿರುವುದು ಶ್ಲಾಘನೀಯ, ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಅವರು ಇಲ್ಲಿನ ಅಂಜುಮಾನ್‌ ಹಾಮಿ-ಇ- ಮುಸ್ಲಿಮೀನ್‌ ಸಂಸ್ಥೆ ಶತಮಾನೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲಿ ಇಂತಹ ಒಂದು ಉತ್ತಮ ವಿದ್ಯಾ ಸಂಸ್ಥೆಗಳು ದೇಶದಲ್ಲಿಯೇ ವಿರಳ ಎಂದ ಅವರು, ದೂರದೃಷ್ಟಿತ್ವದಿಂದ ಒಂದು ವಿದ್ಯಾ ಸಂಸ್ಥೆ ಕಟ್ಟಿ ಬೆಳೆಸಿದ ಮಹನೀಯರ ಕಾರ್ಯ ಶ್ಲಾಘಿಸಿದರು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿದ್ಯೆಗೆ ಮಹತ್ವ ಕೊಡುವುದರಿಂದ ಎಲ್ಲಾ ವರ್ಗದ ಜನರೂ ವಿದ್ಯೆ ಕಲಿಯುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಗುಣಮಟ್ಟದ ಶಿಕ್ಷಣಕ್ಕೆ ಅತ್ಯಂತ ಮಹತ್ವವಿದೆ ಎಂದರು.

ಅಂಜುಮಾನ್‌ ಸಂಸ್ಥೆ ಈಗಾಗಲೇ ಅನೇಕ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದು ಮಹಿಳೆಯರ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಿರುವುದು ಶ್ಲಾಘನೀಯ ಎಂದರು. ಭಟ್ಕಳದ ಅಂಜುಮಾನ್‌ ಸಂಸ್ಥೆ ಮೆಡಿಕಲ್‌ ಕಾಲೇಜನ್ನು ಆರಂಭಿಸಲು ಮುಂದಾದರೆ ಅಗತ್ಯ ಸಹಕಾರ ನೀಡಲು ತಮ್ಮ ಸರಕಾರ ಬದ್ಧ ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನತೆಗೆ ಅತ್ಯವಿರುವ ಶಿಕ್ಷಣ ಕೊಡಬೇಕು. ಇಂದು ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು ಎಂದು ಹೇಳಿದ ಅವರು, ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವಂತೆ ಕರೆ ನೀಡಿದರು.

ಗಿಡಕ್ಕೆ ನೀರೆಯುವ ಮೂಲಕ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಜಾಮಿಯಾ ಇಸ್ಲಾಮಿಯಾ ಇಶಾತುಲ್‌ ಉಲೂಮಾದ ಅಧ್ಯಕ್ಷ ಹಜರತ್‌ ಮೌಲಾನಾ ಗುಲಾಮ್‌ ಮೊಹಮ್ಮದ್‌ ವಸ್ತಾನ್ವಿ ಮಾತನಾಡಿ ಯಾವುದೇ ಒಂದು ಅಭಿವೃದ್ಧಿಗೆ ಶಿಕ್ಷಣ ಮುಖ್ಯ. ಅಂಜುಮಾನ್‌ ಸಂಸ್ಥೆ ಶತಮಾನದಿಂದ ಶಿಕ್ಷಣ ನೀಡುತ್ತಾ ಜನತೆ ಏಳಿಗೆಯನ್ನೇ ಬಯಸುತ್ತಾ ಬಂದಿದೆ. ಒಂದು ಶಿಕ್ಷಣ ಸಂಸ್ಥೆ ಇಷ್ಟೊಂದು ಕೋರ್ಸ್‌ಗಳನ್ನು ಹೊಂದಿ ಶಿಕ್ಷಣ ನೀಡುತ್ತಿರುವಾಗ ಒಂದು ಮೆಡಿಕಲ್‌ ಕಾಲೇಜಿನ ಕೊರತೆ ಕಾಣುತ್ತಿದೆ. ಈ ಸಂಸ್ಥೆ ಮೆಡಿಕಲ್‌ ಕಾಲೇಜನ್ನು ಸ್ಥಾಪಿಸುವತ್ತ ಕೂಡಾ ಮನಸ್ಸು ಮಾಡಬೇಕು ಎಂದು ಕರೆ ನೀಡಿದರು.

ಅತಿಥಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ಈ ಭಾಗದ ಶೈಕ್ಷಣಿಕ ಅಗತ್ಯತೆ ಪೂರೈಸುತ್ತಿರುವ ಅಂಜುಮಾನ್‌ ಸಂಸ್ಥೆ ನೂರು ವರ್ಷಗಳನ್ನು ಪೂರೈಸಿದ್ದು ಸಂತಸದ ಸಂಗತಿಯಾಗಿದೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಬಂದಿರುವ ಅಂಜುಮಾನ್‌ ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದಿ ಹತ್ತು ಹಲವು ಹೊಸ ಹೊಸ ಕೋರ್ಸುಗಳನ್ನು ಆರಂಭಿಸಲು ಮುಂದಾಗಲಿ ಎಂದು ಹಾರೈಸಿದರು.

Advertisement

ಅಂಜುಮಾನ್‌ ಅಧ್ಯಕ್ಷ ಅಬ್ದುಲ್‌ ರಹೀಮ್‌ ಜುಕಾಕೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಸುನಿಲ್‌ ನಾಯ್ಕ, ಶಾಸಕ ತನ್ವೀರ್‌ ಶೇಠ್, ಮಹಮ್ಮದ್‌ ಇಶಾಕ್‌ ಶಾಬಂದ್ರಿ, ಡಿ.ಎಚ್. ಶಬ್ಬರ್‌, ಯು.ಎಸ್‌. ತಲಕಣಿ, ಮಾಜಿ ಶಾಸಕ ಜೆ.ಡಿ. ನಾಯ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅಂಜುಮಾನ್‌ ಸಂಸ್ಥೆಯಲ್ಲಿ 20 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದವರಿಗೆ, ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಶತಮಾನೋತ್ಸವ ಗೌರವ ನೀಡಲಾಯಿತು. ಅಂಜುಮಾನ್‌ ಕಾರ್ಯದರ್ಶಿ ಸಿದ್ಧಿಕ್‌ ಇಸ್ಮಾಯಿಲ್‌ ಪ್ರಾಸ್ತಾವಿಕ ಮಾತನಾಡಿದರು. ಶತಮಾನೋತ್ಸವ ಸಮಿತಿ ಸಂಚಾಲಕ ಅಬ್ದುರ್‌ ರಖೀಬ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next