ಔರಂಗಾಬಾದ್: ವಿಶ್ವ ಪ್ರಸಿದ್ಧ ಅಜಂತಾ- ಎಲ್ಲೋರಾ ಸೇರಿದಂತೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ತೆರೆಯಲು ಔರಂಗಾಬಾದ್ ಜಿಲ್ಲಾಧಿಕಾರಿ ಸುನಿಲ್ ಚವಾಣ್ ಆದೇಶಿಸಿದ್ದಾರೆ.
ಪ್ರವಾಸಿಗರು ಗುರುವಾರದಿಂದ ಜಿಲ್ಲೆಯ ಪ್ರವಾಸಿ ಸ್ಥಳಗಳಾದ ಅಜಂತಾ -ಎಲ್ಲೋರಾ ಸೇರಿದಂತೆ ದೌಲತಾಬಾದ್ ಕೋಟೆ ಮತ್ತು ಬೀಬಿ ಕಾ ಮಕºರಾ, ಔರಂಗಾಬಾದ್ ಗುಹೆಗಳಿಗೆ ಭೇಟಿ ನೀಡಬಹುದು. ಭಾರತೀಯ ಪುರಾತತ್ವ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯ ಧಾರ್ಮಿಕ ಸ್ಥಳಗಳು ಇನ್ನೂ ಮುಚ್ಚಿರಲಿದೆ ಎಂದು ತಿಳಿಸಿದೆ.
ನಗರ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣವು ಸದ್ಯ ಶೇ.0.45 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ. 4.5ರಷ್ಟಿದ್ದು, ಪ್ರಸ್ತುತ ಆಮ್ಲಜನಕ ಹಾಸಿಗೆಗಳಲ್ಲಿ ಕೇವಲ ಶೇ.10.80ರಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನ್‌ಲಾಕ್ ಪ್ರಕ್ರಿಯೆಯಲ್ಲಿ ಜಿಲ್ಲೆಯು ಮೊದಲ ಹಂತಕ್ಕೆ ತಲುಪಿದ್ದು, ಸೋಂಕಿತ ಪ್ರಕರಣಗಳು ಕಡಿಮೆಯಿರುವ ಹಿನ್ನೆಲೆ ಪ್ರವಾಸಿ ತಾಣಗಳನ್ನು ತೆರೆಯಲು ಆದೇಶಿಸಲಾಗಿದೆ.
ಕಳೆದ ಒಂದೂವರೆ ವರ್ಷಗಳಲ್ಲಿ ಕೊರೊನಾ ಹಿನ್ನೆಲೆ ಜಾರಿಯಲ್ಲಿದ್ದ ಲಾಕ್‌ಡೌನ್ ಹಿನ್ನೆಲೆ ವಿದೇಶಿ ಪ್ರವಾಸಿಗರು ಆಗಮಿಸುವುದು ಸ್ಥಗಿತಗೊಂಡಿದೆ. ಹಾಗಾಗಿ ದೇಶೀಯ ಪ್ರವಾಸಿಗರಿಂದ ಎಷ್ಟು ಆರ್ಥಿಕ ವಹಿವಾಟು ನಡೆಯಲಿದೆ ಎನ್ನುವುದು ಪ್ರಶ್ನೆಯಾಗಿದೆ.
ಎಲ್ಲೋರಾ, ಅಜಂತಾ ಗುಹೆಗಳಿಂದ ದೌಲತಾಬಾದ್ ಕೋಟೆಗೆ ಪ್ರವಾಸಿಗರು ಪ್ರಯಾಣಿಸುತ್ತಾರೆ. ಇದು ನಗರದಲ್ಲಿ ಪ್ರವಾಸೋದ್ಯಮವನ್ನೂ ಹೆಚ್ಚಿಸುತ್ತಿತ್ತು. ಭಾರತೀಯ ಪುರಾತತ್ವ ಇಲಾಖೆಯ ಜೂನ್ 15ರ ವರೆಗೆ ವಿಶ್ವ ಪರಂಪರೆಯ ತಾಣಗಳನ್ನು ಪ್ರಾರಂಭಿಸುವುದಕ್ಕೆ ನಿಷೇಧಿಸಿತ್ತು. ಆದರೆ ಒಟ್ಟು ರೋಗಿಗಳ ಸಂಖ್ಯೆಯನ್ನು ಪರಿಶೀಲಿಸಿದ ಬಳಿಕ, ಪ್ರವಾಸಿ ತಾಣಗಳನ್ನು ಪ್ರಾರಂಭಿಸಲು ಅನುಮೋದಿಸಲಾಗಿದೆ. ಪ್ರವಾಸಿ ತಾಣದ ಸ್ವತ್ಛತೆ ಮತ್ತು ಸುರಕ್ಷತೆಯನ್ನು ನೋಡಿಕೊಳ್ಳುವುದರ ಜತೆಗೆ ಕೊರೊನಾಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದು ಆವಶ್ಯಕ ಎಂದು ಹೇಳಿದ್ದಾರೆ.