ಬೆಂಗಳೂರು: ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ರಾಜ ಕಾಲುವೆಯಲ್ಲಿ ಆಂಜನೇಯ ಸ್ವಾಮಿ ವಿಗ್ರಹ ಪತ್ತೆಯಾಗಿದೆ. ದೇವಾಲಯದ ಬಳಿಯ ರಾಜಕಾಲುವೆಯಲ್ಲಿ ಕಳೆದ ಕೆಲ ದಿನಗಳಿಂದ ಹೂಳೆತ್ತುವ ಕೆಲಸ ನಡೆಯುತ್ತಿದ್ದು, ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಜೆಸಿಬಿಗೆ ಬೃಹದಾಕಾರ ಕಲ್ಲು ಸಿಕ್ಕಿದೆ. ಅದನ್ನು ಮೇಲೆತ್ತಿದಾಗ ಆಂಜನೇಯನ ವಿಗ್ರಹ ಎಂಬುದು ತಿಳಿದು ಬಂದಿದೆ.
ಸುಮಾರು 7 ಅಡಿ ಎತ್ತರವಿರುವ ವಿಗ್ರಹವನ್ನು ಸಾರ್ವಜನಿಕರು ಸ್ವತ್ಛಗೊಳಿಸಿದ್ದು, ಅರಿಶಿನ-ಕುಂಕುಮ ಹಾಗೂ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದ್ದಾರೆ. ಕಾಲುವೆಯಲ್ಲಿ ವಿಗ್ರಹ ಸಿಕ್ಕಿರುವ ವಿಷಯ ಕಡ್ಗಿಚ್ಚಿನಂತೆ ಹರಿಡಿದರಿಂದ ವಿಗ್ರಹ ನೋಡುವ ಕುತೂಹಲದಿಂದ ಸುತ್ತಮುತ್ತಲ ಬಡಾವಣೆಗಳಿಂದ ನೂರಾರು ಜನರು ಬಂದು ದರ್ಶನ ಪಡೆದರು.
ಇನ್ನು ವಿಗ್ರಹದ ಕುರಿತು ಹತ್ತಾರು ಕಥೆಗಳು ಹುಟ್ಟಿಕೊಳ್ಳುತ್ತಿದ್ದು, ಇದೊಂದು ದೈವಿ ಶಕ್ತಿ ಆಂಜನೇಯ ಮೂರ್ತಿಯಾಗಿರುವುದರಿಂದ ದೇವಾಲಯ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಇದೊಂದು ಪುರಾತನ ಕಾಲದ ವಿಗ್ರಹವಾಗಿರುವುದರಿಂದ ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದು ಹೇಳುತ್ತಿದ್ದಾರೆ.
ಸಂಚಾರ ದಟ್ಟಣೆ: ಆಂಜನೇಯ ಸ್ವಾಮಿ ವಿಗ್ರಹ ಉದ್ಭವವಾಗಿದೆ ಎಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ನೂರಾರು ಜನರು ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಧಾವಿಸಿದರು. ಇದರಿಂದಾಗಿ ಮೈಸೂರು ರಸ್ತೆಯಲ್ಲಿ ಕೆಲಕಾಲ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.
ಪುರಾತನ ವಿಗ್ರಹವಲ್ಲ – ಪಾಲಿಕೆ ಸದಸ್ಯ: ಮೂರ್‍ನಾಲ್ಕು ವರ್ಷಗಳ ಹಿಂದೆ ದೇವಾಲಯದ ಬಳಿ ಕೆಲ ಕಲಾವಿದರು ಆಂಜನೇಯನ ವಿಗ್ರಹಗಳ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ವಿಗ್ರಹ ಹೆಚ್ಚು ಭಾರವಿದ್ದರಿಂದ ದೇವಾಲಯದ ಬಳಿಯೇ ಬಿಟ್ಟು ಹೋಗಿದ್ದರು. ಆಗಿನಿಂದಲೂ ಈ ವಿಗ್ರಹವನ್ನು ನಾನು ನೋಓಡಿದ್ದೇನೆ.
ಮೂರ್ತಿಯನ್ನು ಜರುಗಿಸುವ ವೇಳೆ ಇಲ್ಲವೇ ಮಳೆ ಬಂದಾಗ ಕಾಲುವೆಗೆ ಬಿದ್ದಿರುವ ಸಾಧ್ಯೆತೆಯಿದ್ದು, ಶನಿವಾರ ಕಾಲುವೆಯಲ್ಲಿ ಹೂಳು ತೆಗೆಯುವ ವೇಳೆ ಪತ್ತೆಯಾಗಿದೆ ಎಂದು ಹಂಪಿನಗರ ಪಾಲಿಕೆ ಸದಸ್ಯ ಸಿ.ಆನಂದ್ “ಉದಯವಾಣಿ’ಗೆ ಮಾಹಿತಿ ನೀಡಿದರು. ಕೆಲವರು ಉದ್ಭವ ಮೂರ್ತಿ ಎಂದೆಲ್ಲ ಸುದ್ದಿ ಹಬ್ಬಿಸಿದ್ದು, ನೂರಾರು ಜನರು ವಿಗ್ರಹ ನೋಡಲು ಧಾವಿಸುತ್ತಿದ್ದಾರೆ ಎಂದರು.