ಗಂಗಾವತಿ : ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ರವಿವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿ ಶ್ರೀ ಆಂಜನೇಯನ ದರ್ಶನ ಪಡೆಯದೇ ವಾಪಸ್ ತೆರಳಿದ್ದಾರೆ .
ಹೊಸಪೇಟೆ ಕಮಲಾಪುರ ಹತ್ತಿರವಿರುವ ಆರೆಂಜ್ ಕೌಂಟಿ ಹೋಟೆಲ್ ನಲ್ಲಿ ಚಲನಚಿತ್ರ ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ ಪುನೀತ್ ರಾಜ್ ಕುಮಾರ್ ರವಿವಾರ ಬಿಡುವು ಮಾಡಿಕೊಂಡು ಅವರ ಅಚ್ಚುಮೆಚ್ಚಿನ ದೇವರು ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ಕೊರೋನಾ ಮೂರನೆಯ ಅಲೆಯನ್ನು ತಡೆಯುವ ಉದ್ದೇಶದಿಂದ ಕೊಪ್ಪಳ ಜಿಲ್ಲಾಡಳಿತ ಪ್ರತಿ ಶನಿವಾರ ರವಿವಾರ ಅಮವಾಸ್ಯೆ ಹುಣ್ಣಿಮೆಯ ದಿನದಂದು ಅಂಜನಾದ್ರಿಯ ದರ್ಶನಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಿದೆ. ಈ ಕುರಿತು ಮಾಹಿತಿ ಇಲ್ಲದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವಿವಾರ ಅಂಜನಾದ್ರಿಗೆ ಆಗಮಿಸಿದ್ದರು . ಸಾರ್ವಜನಿಕರ ಪ್ರವೇಶ ನಿಷಿದ್ಧ ನಾಮಫಲಕ ವೀಕ್ಷಿಸಿ ದೇವರ ದರ್ಶನ ಪಡೆಯದೇ ವಾಪಸ್ ಹನುಮನಹಳ್ಳಿ ವಿರುಪಾಪುರ ಗಡ್ಡೆ ಸಣಾಪೂರ ಅಲ್ಲಿಯ ಲೇಕ್ ಹಾಗೂ ತುಂಗಭದ್ರಾ ಫಾಲ್ಸ್ ನ್ನು ವೀಕ್ಷಣೆ ಮಾಡಿ ಅಲ್ಲಿಯ ರೆಸಾರ್ಟ್ ಗಳಲ್ಲಿ ಚಹಾ ಕುಡಿದು ಪ್ರಕೃತಿಯ ಸೌಂದರ್ಯವನ್ನು ಸವಿದು ಒಂದು ಗಂಟೆ ವಿರಮಿಸಿ ವಾಪಸ್ ಕಮಲಾಪುರದ ಆರೆಂಜ್ ಕೌಂಟಿ ಹೋಟೆಲಿಗೆ ತೆರಳಿದ್ದಾರೆ.
ಇದನ್ನೂ ಓದಿ :ಕೊಚ್ಚಿ ಹೋಯ್ತು ಕೆಂಚಿಹಳ್ಳ ತಾತ್ಕಾಲಿಕ ಸೇತುವೆ
ರವಿವಾರ ಆನೆಗೊಂದಿ ಸಣಾಪುರ ಹಾಗೂ ತುಂಗಭದ್ರಾ ನದಿಪಾತ್ರದಲ್ಲಿ ಗಂಗಾವತಿ ಹೊಸಪೇಟೆ ಕಮಲಾಪುರ ಕೊಪ್ಪಳ ಬಳ್ಳಾರಿ ಹುಬ್ಬಳ್ಳಿಯಿಂದ ಇಲ್ಲಿಯ ಪ್ರವಾಸಿ ತಾಣಗಳು ಮತ್ತು ಪ್ರಕೃತಿ ಸೌಂದರ್ಯವನ್ನ ವೀಕ್ಷಿಸಲು ಸಾವಿರಾರು ಜನ ಪ್ರವಾಸಿಗರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ಮೊಬೈಲ್ ಮೂಲಕ ಸೆಲ್ಫಿ ತೆಗೆಸಿಕೊಳ್ಳಲು ಪ್ರವಾಸಿಗರು ಮುಗಿ ಬಿದ್ದ ಪ್ರಸಂಗ ಜರುಗಿತು.
ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಮಾತನಾಡಿ ಕೊರೋನಾ ಮೂರನೆಯ ಅಲೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರು ಕೊರೋನಾ ಜಾಗೃತಿಯನ್ನ ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಆಗಾಗ ಸ್ಯಾನಿಟೈಜರ್ ಮೂಲಕ ಕೈಯನ್ನ ಸ್ವಚ್ಛ ಮಾಡಿಕೊಳ್ಳಬೇಕು. ಮಕ್ಕಳ ಮೇಲೆ ವಿಶೇಷ ಪರಿಣಾಮ ಉಂಟುಮಾಡುವ ಮೂರನೇ ಅಲೆಯ ಬಗ್ಗೆ ಪಾಲಕರು ಬಹಳ ಎಚ್ಚರಿಕೆ ವಹಿಸಬೇಕು. ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಕೊರೋನಾ ಓಡಿಸಬೇಕಾಗಿದೆ ಜನರು ಜಾಗ್ರತೆ ವಹಿಸುವಂತೆ ಮನವಿ ಮಾಡಿದರು