Advertisement

ಎಲ್ಲಿ ನಾರಿಗೆ ಗೌರವವಿದೆಯೋ ಅಲ್ಲಿ ಭಗವಂತನ ಕೃಪೆ ಇರುತ್ತದೆ: ದಿವಾಕರ ಸಾಲ್ಯಾನ್‌

01:08 PM Mar 21, 2021 | Team Udayavani |

ಮುಂಬಯಿ: ಕರ್ನಾಟಕ ಮಿತ್ರ ಮಂಡಳ ಕಲ್ಯಾಣ್‌ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯು ಮಾ. 14ರಂದು ಸಂಘದ ಕಚೇರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಸಂಘದ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಸದಸ್ಯೆಯರು ಪ್ರಾರ್ಥನೆಗೈದರು. ವೇದಿಕೆಯಲ್ಲಿ ಕರ್ನಾಟಕ ಮಿತ್ರ ಮಂಡಳ ಕಲ್ಯಾಣ್‌ ಇದರ ಗೌರವಾಧ್ಯಕ್ಷ ಶ್ರೀಧರ ಪೂಜಾರಿ, ಅಧ್ಯಕ್ಷ ದಿವಾಕರ ಸಾಲ್ಯಾನ್‌, ಗೌರವ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಗೌರವ ಕೋಶಾಧಿಕಾರಿ ಪ್ರಶಾಂತ್‌ ಪೂಜಾರಿ, ರಾಜೇಶ್‌ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೇವಕಿ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೋಟ್ಯಾನ್‌, ಪ್ರೀತಿ ಪೂಜಾರಿ, ಸುಜಾತಾ ಕೋಟ್ಯಾನ್‌ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ದಿವಾಕರ ಸಾಲ್ಯಾನ್‌ ಅವರು ಮಾತನಾಡಿ, ಅನಾದಿ ಕಾಲದಿಂದಲೂ ಸನಾತನ ಧರ್ಮದ ಪ್ರತೀಕವಾದ ಅರಸಿನ ಕುಂಕುಮ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಇದು ಮಹಿಳೆಯರಿಗೆ ಮಂಗಳ ಭಾಗ್ಯ, ಸುಖ, ಸಂಪತ್ತು, ಆರೋಗ್ಯ ಭಾಗ್ಯವನ್ನು ಕರುಣಿಸುತ್ತದೆ. ನಾರಿಯು ನಾರಾಯಣಿಗೆ ಸಮಾನವಾಗಿದ್ದು, ತಮ್ಮ ವಿವಿಧ ಕರ್ತವ್ಯಗಳನ್ನು ನಿಭಾಯಿಸುತ್ತಾ ಸದೃಢ ಸಮಾಜ ನಿರ್ಮಾಣಕ್ಕೆ ಕಾರಣಿಕರ್ತರಾಗುತ್ತಾಳೆ. ಎಲ್ಲಿ ನಾರಿಗೆ ಗೌರವವಿದೆಯೋ ಅಲ್ಲಿ ಭಗವಂತನ
ಕೃಪೆ ಇರುತ್ತದೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಪುರುಷರಿಗೆ ಸಮಾನವಾಗಿ ನಿಂತಿದ್ದಾಳೆ. ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರಿಗೆ ಆಯಾಯ ಕ್ಷೇತ್ರಗಳಲ್ಲಿ ಬೆಳೆಯಲು ಸಾಧ್ಯ. ಕರ್ನಾಟಕ ಮಿತ್ರ ಮಂಡಳಿಯು ಕಳೆದ ಹಲವಾರು ವರ್ಷಗಳಿಂದ ಮಹಿಳೆಯರಿಗೆ ಪ್ರಾಧಾನ್ಯತೆಯನ್ನು ನೀಡಿ ಅವರನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದೆ ಎಂದು ನುಡಿದು ಮಹಿಳಾ ದಿನದ ಶುಭಾಶಯ ತಿಳಿಸಿದರು.

ಮಹಿಳಾ ವಿಭಾಗದ ವತಿಯಿಂದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಗೌರವಿಸಲಾಯಿತು. ಸಂಘಕ್ಕಾಗಿ ನಿಸ್ವಾರ್ಥ ಸೇವೆಗೈದ ಉಮಾನಾಥ್‌ ಸಫಲಿಗ ದಂಪತಿಯನ್ನು ಸಂಘದ ಪರವಾಗಿ ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೇವಕಿ ಪೂಜಾರಿ ಅವರು ಮಾತನಾಡಿ, ಮಹಿಳೆಯು ಮನೆ ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸೊಸೆಯಾಗಿ, ತಾಯಿಯಾಗಿ ತನ್ನ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸುಸಂಸ್ಕೃತ ಕುಟುಂಬ ಕಟ್ಟಲು ಮುಂಚೂಣಿಯಲ್ಲಿರುತ್ತಾಳೆ. ಮಹಿಳೆಯ ತ್ಯಾಗ, ನಿಷ್ಠೆ ಅಪಾರವಾಗಿದೆ. ಮಹಿಳೆಯರನ್ನು ಸಮಾಜ ಗೌರವದಿಂದ ಕಾಣಬೇಕು. ಕೇವಲ ಒಂದು ದಿನದ ಆಚರಣೆಗೆ ಮಾತ್ರ ಮಹಿಳಾ ದಿನ ಮೀಸಲಾಗಬಾರದು. ಕರ್ನಾಟಕ ಮಿತ್ರ ಮಂಡಳಿಯು ಮಹಿಳೆಯರನ್ನು ಸದಾ ಪ್ರೋತ್ಸಾ ಹಿಸುತ್ತಿರುವುದು ಅಭಿಮಾನದ ವಿಷಯವಾಗಿದೆ ಎಂದು ನುಡಿದು ಶುಭಹಾರೈಸಿದರು.
ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೋಟ್ಯಾನ್‌ ಅವರು ಮಾತನಾಡಿ, ಅರಸಿನ ಕುಂಕುಮವು ಎಲ್ಲ ಮಹಿಳೆಯರಿಗೆ ಗೌರವದ ವಿಷಯ. ಮಂಗಳದ ಪ್ರತೀಕವಾದ ಅರಸಿನ ಕುಂಕುಮವು ಆರೋಗ್ಯ ಭಾಗ್ಯವನ್ನು ವೃದ್ಧಿಸುತ್ತದೆ. ಮಹಿಳೆಯರು ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಬೇಕು. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿಕೊಡುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಅವರು ಮಾತನಾಡಿ, ಮಹಿಳೆಯರು ಸಂಸಾರದ ಕಣ್ಣು. ಅವರಿಂದಲೇ ಒಂದು ಕುಟುಂಬ ಬೆಳಗುತ್ತದೆ. ಆದ್ದರಿಂದ ಪ್ರಾಮಾಣಿಕತೆ, ನಿಷ್ಠೆ, ಇನ್ನಿತರ ಮಾನವೀಯ ಗುಣಗಳನ್ನು ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ರಾಜೇಶ್‌ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರಲ್ಲಿ ವಿಶೇಷ ಪ್ರತಿಭೆಯಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ
ಸಂಸ್ಕಾರ ನೀಡಿ ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಸುಜಾತಾ ಕೋಟ್ಯಾನ್‌ ವಂದಿಸಿದರು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು. ಯುವ ವಿಭಾಗದ ಪ್ರತೀಶ್‌ ಪೂಜಾರಿ, ಕಾರ್ತಿಕ್‌ ಪೂಜಾರಿ, ಧೀರಾಜ್‌ ಪೂಜಾರಿ, ಸಂಘದ ಹಿರಿಯ, ಕಿರಿಯ ಸದಸ್ಯರು, ಮಹಿಳಾ ವಿಭಾಗದ ಸರ್ವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next