Advertisement

ಅನಿತಾ, ಪ್ರಜ್ವಲ್‌ ಸ್ಪರ್ಧೆಗೆ ಗೌಡರ ಗ್ರೀನ್‌ ಸಿಗ್ನಲ್‌

02:33 PM Jun 20, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದಿಂದ
ಇಬ್ಬರು ಮಾತ್ರ ಸ್ಪರ್ಧೆ ಮಾಡುತ್ತಾರೆ ಎಂಬ ವರಿಷ್ಠರ ಮಾತುಗಳು ಸುಳ್ಳಾಗುವ ಸಾಧ್ಯತೆಗಳಿದ್ದು, ಸ್ಪರ್ಧಿಸುವ ಸಂಖ್ಯೆ
ನಾಲ್ಕಕ್ಕೇರಿದೆ. ಎಚ್‌.ಡಿ.ಕುಮಾರಸ್ವಾಮಿ,ಎಚ್‌.ಡಿ.ರೇವಣ್ಣನವರ ಜತೆಗೆ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ
ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಕಣಕ್ಕಿಳಿಯಲು ಹಸಿರು ನಿಶಾನೆ ದೊರೆತಿದೆ ಎಂದು
ವಿಶ್ವಸನೀಯ ಮೂಲಗಳು ತಿಳಿಸಿವೆ.

Advertisement

ಅನಿತಾ ಕುಮಾರಸ್ವಾಮಿ ಕಳೆದ ಬಾರಿ ಸ್ಪರ್ಧೆ ಮಾಡಿ ಸೋತಿದ್ದ ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಪ್ರಜ್ವಲ್‌
ರೇವಣ್ಣ ಬೇಲೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಒಲವು ಹೊಂದಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ರಾಮನಗರದಿಂದ ಮಾತ್ರ ಸ್ಪರ್ಧೆ ಮಾಡುವಂತೆ ದೇವೇಗೌಡರು ಸೂಚನೆ ನೀಡಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ ಗೊಂದಲ ಉಂಟಾಗಬಹುದು. ಹೀಗಾಗಿ, ಒಂದೇ ಕಡೆ ಸ್ಪರ್ಧೆ ಸೂಕ್ತ ಎಂಬ ಸಲಹೆ ನೀಡಿದ್ದಾರೆ.

ಈ ಮಧ್ಯೆ, ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಪ್ರಜ್ವಲ್‌ ರೇವಣ್ಣಗೆ ಹಾಸನದ ಬೇಲೂರು ಅಥವಾ ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ದೇವೇಗೌಡರು ಒಪ್ಪಿಗೆ ನೀಡಿದ್ದು, ರಾಜರಾಜೇಶ್ವರಿನಗರ ಕ್ಷೇತ್ರ ಸೂಕ್ತ ಎಂಬುದು ಕುಟುಂಬದ ಅಭಿಪ್ರಾಯ. ಆದರೂ ಪ್ರಜ್ವಲ್‌ ರೇವಣ್ಣ ಹುಣಸೂರಿನಿಂದಲೇ ಕಣಕ್ಕಿಳಿಯುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಮುಖಂಡ ಎಚ್‌.ವಿಶ್ವನಾಥ್‌ ಜೆಡಿಎಸ್‌ ಸೇರ್ಪಡೆ ಬಹುತೇಕ ಖಚಿತವಾಗಿದ್ದು, ಜೂನ್‌ 22 ಅಥವಾ 24 ರಂದು ಪಕ್ಷಕ್ಕೆ ಸೇರಲು ಮಹೂರ್ತ ನಿಗದಿಯಾಗಿದೆ. ಅವರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ, ಪ್ರಜ್ವಲ್‌ ರೇವಣ್ಣಗೆ ಬೇರೆ ಕಡೆ ಸ್ಪರ್ಧೆ ಮಾಡಲು ಒಪ್ಪಿಗೆ ದೊರೆತಿದೆ ಎಂದು ತಿಳಿದುಬಂದಿದೆ.

ಪ್ರಚಾರ ಶುರು: ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರೂವರೆ ಸಾವಿರ ಮತಗಳ ಅಂತರದಲ್ಲಿ
ಸೊಲು ಅನುಭವಿಸಿದ್ದ ಅನಿತಾ ಕುಮಾರ ಸ್ವಾಮಿ, ಈ ಬಾರಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಲು ಕುಟುಂಬದಲ್ಲಿ ಒಪ್ಪಿಗೆ ಸಿಕ್ಕಿರುವ ಬೆನ್ನಲ್ಲೇ ಪ್ರಚಾರ ಆರಂಭಿಸಿದ್ದು, ಸದ್ದಿಲ್ಲದೆ ದೇವಾಲಯಗಳಲ್ಲಿ ಪೂಜೆ ಹಾಗೂ ಹಿರಿಯ ನಾಯಕರ ಮನೆ ಭೇಟಿಯಲ್ಲಿ ತೊಡಗಿದ್ದಾರೆ. ರಂಜಾನ್‌ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರ ಇಫ್ತಾರ್‌ ಕೂಟಕ್ಕೂ ಹಾಜರಾಗಿದ್ದರು. ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರು ನಿರ್ಣಾಯಕ ಎಂಬುದು ಇಲ್ಲಿ ಗಮನಾರ್ಹ.

Advertisement

ಚನ್ನಪಟ್ಟಣ ಮಾತ್ರವಲ್ಲದೆ ರಾಮನಗರ, ಮಾಗಡಿ, ಕನಕಪುರ ಕ್ಷೇತ್ರಗಳಲ್ಲೂ ಅನಿತಾ ಕುಮಾರಸ್ವಾಮಿ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ತಪ್ಪದೇ ಹೋಗುತ್ತಿದ್ದು, ಮಾಗಡಿಯಲ್ಲಿ ಕಾಂಗ್ರೆಸ್‌ನ ಜಿಪಂ ಸದಸ್ಯ ಎ.ಮಂಜು ಅವರಿಗೆ
ಹಾಗೂ ಕನಕಪುರದಲ್ಲಿ ವಿಶ್ವನಾಥ್‌ ಅವರಿಗೆ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದ್ದು, ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next