ಚೆನ್ನೈ: ವೈದ್ಯಕೀಯ ಸೀಟಿಗಾಗಿ ನೀಟ್ ಪರೀಕ್ಷೆ ಕಡ್ಡಾಯದ ವಿರುದ್ಧ ಹೋರಾಟಕ್ಕೆ ನಾಂದಿ ಹಾಡಿದ್ದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಪ್ರಕರಣ ಈಗ ರಾಜಕೀಯವಾಗಿ ಮಹತ್ವ ಪಡೆದುಕೊಳ್ಳುತ್ತಿದೆ. ಶನಿವಾರ ತಮಿಳು ಸಂಘಟನೆಗಳು ಹಾಗೂ ವಿಪಕ್ಷಗಳು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಿಳಿದಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ಆಕ್ರೋಶ ವ್ಯಕ್ತಗೊಂಡಿದೆ.
ನೀಟ್ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯ್ತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ಅನಿತಾ ತೀರ್ಪು ತನ್ನ ಪರವಾಗಿ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಸಾಕಷ್ಟು ನೊಂದಿದ್ದಳು. ವ್ಯವಸ್ಥೆಯ ಬಗ್ಗೆಯೂ ಆಕ್ರೋಶಗೊಂಡಿದ್ದ ಅನಿತಾ ಅಸಹಾಯಕತೆ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿಟ್ಟು, ನೇಣು ಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕಾರಣವಾದ ನೀಟ್ ಮಾದರಿ ಪರೀಕ್ಷೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕೆಲ ರಾಜಕೀಯ ಸಂಘಟನೆಗಳು, ತಮಿಳು ಪರ ಸಂಘಟನೆಗಳು, ಸಿಪಿಎಂ, ಎಸ್‌ಎಫ್ಐ, ಡಿವೈಎಫ್ಐ ಸಂಘಟನೆಗಳು ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಿವೆ. ರಸ್ತೆಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿವೆ. ಕೂಡಲೇ ಕೇಂದ್ರ ಪರೀಕ್ಷಾ ಮಂಡಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿವೆ. ಸಾಮಾಜಿಕ ಜಾಲತಾಣ ಗಳಲ್ಲಿ ಅನಿತಾ ಸಾವಿನ ಬಗ್ಗೆ ದೇಶಾದ್ಯಂತ ಅನೇಕರು ಆಕ್ರೋಶ ದಿಂದ ಪೋಸ್ಟ್‌ಗಳನ್ನು ಪ್ರಕಟಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.
ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸಾಂತ್ವನ ಹೇಳಿ, “”ಅನಿತಾ ಸಾವು ಶಾಕ್ ನೀಡಿದೆ. ಇದೊಂದು ದುರಂತ” ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಕೂಡ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ, ಸಿಎಂ ಪಳನಿಸ್ವಾಮಿ ಅವರು ಅನಿತಾ ಕುಟುಂಬಕ್ಕೆ 7 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.