ನನ್ನ ಇಷ್ಟು ವರ್ಷಗಳ ಸಿನಿಮಾ ಕೆರಿಯರ್‌ನಲ್ಲಿ ಮೊದಲ ಬಾರಿಗೆ “ರಾಮಾರ್ಜುನ’ ಸಿನಿಮಾಕ್ಕೆ ಇಷ್ಟು ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿದೆ. ದಿನದಿಂದ ದಿನಕ್ಕೆ ಥಿಯೇಟರ್‌ಗೆ ಬರುತ್ತಿರುವ ಆಡಿಯನ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ಸುಮಾರು ಒಂದು ವರ್ಷ ಕಾದು, ಕೊರೋನಾ ನಂತರ ಸಿನಿಮಾ ರಿಲೀಸ್ ಮಾಡಿದ್ದು ಸಾರ್ಥಕ ಎನಿಸುತ್ತಿದೆ. ಸಿನಿಮಾಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಕಂಡು ಇಡೀ ಟೀಮ್ ಮತ್ತು ನಾನು ಖುಷಿಯಾಗಿದ್ದೇವೆ…’ ಹೀಗೆ ಹೇಳುತ್ತ ಮಾತಿಗಿಳಿದವರು ನಟ ಅನೀಶ್ ತೇಜೇಶ್ವರ್.
ಅಂದಹಾಗೆ, ನಟ ಅನೀಶ್ ಅವರಿಗೆ ಇಂಥದ್ದೊಂದು ಖುಷಿಗೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ “ರಾಮಾರ್ಜುನ’ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ.
“ರಾಮಾರ್ಜುನ’ ಬಿಡುಗಡೆಯಾದ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಚಿತ್ರತಂಡದ ಜೊತೆಗೆ ಬಂದಿದ್ದ ಅನೀಶ್, ಈ ವೇಳೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡರು.
“ಕಳೆದ ವರ್ಷ ಜನವರಿಯಲ್ಲೇ “ರಾಮಾರ್ಜುನ’ ಸಿನಿಮಾ ರೆಡಿಯಾಗಿತ್ತು. ಆನಂತರ ರಿಲೀಸ್ ಮಾಡೋಣ ಅಂದುಕೊಳ್ಳುವಷ್ಟರ ಹೊತ್ತಿಗೆ ಕೋವಿಡ್ ಲಾಕ್‌ಡೌನ್ ಶುರುವಾಯ್ತು. ಹೀಗಾಗಿ ಅನಿವಾರ್ಯವಾಗಿ ಸಿನಿಮಾದ ರಿಲೀಸ್ ಇಷ್ಟು ಸಮಯ ಮುಂದೂಡಬೇಕಾಯ್ತು. ಕೊನೆಗೂ ಧೈರ್ಯ ಮಾಡಿ ಇದೇ ಜನವರಿ ಕೊನೆಗೆ ಸಿನಿಮಾವನ್ನ ರಿಲೀಸ್ ಮಾಡಿದ್ದೆವು. ಸ್ವಲ್ಪ ತಡವಾದ್ರೂ, ಒಳ್ಳೆಯ ಸಮಯಕ್ಕೆ ಸಿನಿಮಾ ರಿಲೀಸ್ ಮಾಡಿದ್ದೇವೆ ಅಂಥ ಈಗ ಅನಿಸುತ್ತಿದೆ. ಕೋವಿಡ್ ಆತಂಕವಿದ್ರೂ “ರಾಮಾರ್ಜುನ’ನಿಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗಿರುವ ಎಲ್ಲ ಸೆಂಟರ್‌ಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ಕೂಡ ಚೆನ್ನಾಗಿ ಬರುತ್ತಿದೆ. ನಾವು ಕೂಡ ಸೇಫ್ ಆಗುತ್ತಿದ್ದೇವೆ. ಹೊಸ ವರ್ಷದ ಆರಂಭದಲ್ಲೇ ಒಂದು ಮಾಸ್ ಸಿನಿ ಮಾಕ್ಕೆ ಇಷ್ಟೊಂದು ಬಿಗ್ ಓಪನಿಂಗ್ ಸಿಕ್ಕಿರುವುದು ನಮಗೆ ಖುಷಿ ತಂದಿದೆ’ ಎಂದರು ಅನೀಶ್.
“ಸದ್ಯ ರಿಲೀಸ್ ಆಗಿರುವ ಎಲ್ಲ ಕಡೆಗಳಲ್ಲೂ ಆಡಿಯನ್ಸ್ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಶಿವಮೊಗ್ಗ, ಕೊಪ್ಪಳ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಶೋಗಳು ಹೌಸ್‌ಫುಲ್ ಜನ ಇಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಅಂತಾ ಅಂದುಕೊಂಡಿರಲಿಲ್ಲ. ಸಿನಿಮಾದ ಪ್ರತಿದೃಶ್ಯಗಳನ್ನೂ ಆಡಿಯನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಧಮ್ ಇದ್ದರೆ ಜನ ಕೈಹಿಡಿಯುತ್ತಾರೆ ಎನ್ನುವ ನಿಜ ಈಗ ಗೊತ್ತಾಗಿದೆ. “ರಾಮಾರ್ಜುನ’ನ ಸದ್ಯದ ಗೆಲುವಿನ ಓಟ ನೋಡಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಮ್ಯಾಜಿಕ್ ಕ್ರಿಯೇಟ್ ಆಗಲಿದೆ ಅನ್ನೋದು ನನ್ನ ನಂಬಿಕೆ. ರಾಮಾರ್ಜುನ ಸಿನಿಮಾವನ್ನು ಗೆಲ್ಲಿಸಿರುವ ಕನ್ನಡದ ಜನತೆಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ’ ಎಂದರು ಅನೀಶ್.
ನಾಯಕಿ ನಿಶ್ವಿಕಾ ನಾಯ್ಡು , ಹರೀಶ್ ರಾಜ್, ಶರಣ್ ಸಿಂಧಗಿ, ಸಂಗೀತ ನಿರ್ದೇಶಕ ಆನಂದ್ ರಾಜವಿಕ್ರಂ, ಛಾಯಾಗ್ರಹಕ ನವೀನ್ ಕುಮಾರ್, ಸಾಹಸ ನಿರ್ದೇಶಕ ವಿಕ್ರಂ ಮೋರ್, ಸಂಭಾಷಣಾ ಕಾರ ಕಿರಣ್ ಸೇರಿದಂತೆ ಚಿತ್ರತಂಡದ ಸದಸ್ಯರು “ರಾಮಾರ್ಜುನ’ನಿಗೆ ಸಿಗುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಖುಷಿಯನ್ನು ಹಂಚಿಕೊಂಡರು