ಕಮರ್ಷಿಯಲ್ ಸಿನಿಮಾಗಳ ಅಬ್ಬರವಿಲ್ಲದೆ, ಶಿಳ್ಳೆ- ಚಪ್ಪಾಳೆ, ಕೇಕೆ-ಕೂಗಾಟಗಳ ಸದ್ದು-ಗದ್ದಲವಿಲ್ಲದೆ ಎಂಟತ್ತು ತಿಂಗಳಿನಿಂದ ಭಣಗುಡುತ್ತಿದ್ದ ಥಿಯೇ ಟರ್ ಗಳು ಈ ವಾರದಿಂದ ಮತ್ತೆ ಕಳೆಗಟ್ಟುತ್ತಿವೆ. ಅದು “ರಾಮಾರ್ಜುನ’ ಎಂಬ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಸಿನಿಮಾದ ಮೂಲಕ.
ಹೌದು, ಅನೀಶ್ ತೇಜೇಶ್ವರ್ ನಾಯಕನಾಗಿ ಅಭಿನಯಿಸಿ, ನಿರ್ದೇಶಿಸಿರುವ “ರಾಮಾರ್ಜುನ’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಚಿತ್ರದ ಟೈಟಲ್ಲೇ ಹೇಳುವಂತೆ ರಾಮನ ಗುಣ, ಅರ್ಜುನನ ಪರಾಕ್ರಮ ಎರಡನ್ನೂ ಬ್ಲೆಂಡ್ ಮಾಡಿ ತೆರೆಮೇಲೆ ತಂದಿದ್ದಾರೆ ನಾಯಕ ಕಂ ನಿರ್ದೇಶಕ ಅನೀಶ್.
ಸಿಟಿಯ ಮಧ್ಯದಲ್ಲಿರುವ ಸ್ಲಂ ಜನರನ್ನು ಒಕ್ಕಲೆಬ್ಬಿಸಲು ಹೊಂಚು ಹಾಕುವ ರಿಯಲ್ ಎಸ್ಟೇಟ್ ಮಾಫಿಯಾ, ವಿರುದ್ಧ ರಾಮ್ (ಅನೀಶ್) ಎದುರಾಗಿ ನಿಂತು ಹೋರಾಟ ಮಾಡಿಕೊಂಡು ಬರುತ್ತಿರುತ್ತಾನೆ. ಈ ಚಕ್ರವ್ಯೂಹದಿಂದ ರಾಮ್, ಹೇಗೆ ಅರ್ಜುನನಂತೆ ಹೋರಾಡಿ ತನ್ನ ಜನರನ್ನು ಕಾಪಾಡುತ್ತಾನೆ ಅನ್ನೋದು “ರಾಮಾರ್ಜುನ’ನ ಕಥಾಹಂದರ. ಅದು ಗೊತ್ತಾಗುವ ಹೊತ್ತಿಗೆ ಚಿತ್ರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರುತ್ತದೆ.
ಇದನ್ನೂ ಓದಿ:ಬಲಾ ಬೊಲ್ಲ.. ಬಲಾ ಕಾಟಿ… ಮತ್ತೆ ಮೊಳಗಲು ಸಿದ್ದವಾಗಿದೆ ಕಂಬಳದ ಕಹಳೆ
ಮಾಫಿಯಾ, ರಾಜಕಾರಣ, ಲವ್ – ಸೆಂಟಿಮೆಂಟ್ ಎಲ್ಲವನ್ನು ಹಿತಮಿತವಾಗಿ ಬಳಸಿ ಕೊಂಡು, ಅನೀಶ್ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಫಾಮ್ಯಾಟ್ ನಲ್ಲಿ “ರಾಮಾ ರ್ಜುನ’ ನನ್ನು ತೆರೆಮೇಲೆ ತಂದಿದ್ದಾರೆ. ಆ್ಯಕ್ಷನ್ ಕಿಕ್, ಪಂಚಿಂಗ್ ಟಾಕ್, ಅಲ್ಲಲ್ಲಿ ಕಾಮಿಡಿ ಝಲಕ್, ಒಂದೆರಡು ರೊಮ್ಯಾಂಟಿಕ್ ಟ್ರ್ಯಾಕ್ … ಹೀಗೆ ಮಾಸ್ ಆಡಿಯನ್ಸ್ ಏನೇನು ನಿರೀಕ್ಷಿಸುತ್ತಾರೋ, ಅದೆಲ್ಲವನ್ನೂ “ರಾಮಾರ್ಜುನ’ ನಲ್ಲಿ ಕಾಣಬಹುದು.
ಇಲ್ಲಿಯವರೆಗೆ ಬೇರೆ ಬೇರೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಅನೀಶ್, “ರಾಮಾರ್ಜುನ’ನಲ್ಲಿ ಪೂರ್ಣ ಪ್ರಮಾಣದ ಆ್ಯಕ್ಷನ್ ಹೀರೋ ಆಗಿ ಮ್ಯಾನರಿಸಂ, ಗೆಟಪ್‌ನಲ್ಲಿ ಗಮನ ಸೆಳೆಯುತ್ತಾರೆ. ಇನ್ನು ನಿರ್ದೇಶನ, ಮೇಕಿಂಗ್ ಮತ್ತಿತರ ವಿಷಯಗಳಲ್ಲೂ ನಿರ್ದೇಶಕನಾಗಿ ಅನೀಶ್ ತೆರೆಹಿಂದೆ ಹಾಕಿರುವ ಪ್ರಯತ್ನ ಕೂಡ ತೆರೆಮೇಲೆ ಕಾಣುತ್ತದೆ. ಸಾಮಾನ್ಯ ಕಥೆಯೊಂದನ್ನ ಒಂದಷ್ಟು ಟರ್ನ್, ಟ್ವಿಸ್ಟ್ ಮೂಲಕ ಥ್ರಿಲ್ಲಿಂಗ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆಯ ಕಡೆಗೆ ಇನ್ನಷ್ಟು ಗಮನ ಕೊಟ್ಟು, ನಿರೂಪಣೆ ವೇಗ ಕೊಂಚ ಹೆಚ್ಚಿಸಿದ್ದರೆ, “ರಾಮಾರ್ಜುನ’ ಇನ್ನೂ ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪುವ ಸಾಧ್ಯತೆಗಳಿದ್ದವು.
ಇನ್ನು ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು ಲೈವ್ಲಿ ಹುಡುಗಿಯಾಗಿ ಇಷ್ಟವಾಗುತ್ತಾರೆ. ಉಳಿದಂತೆ ರಂಗಾಯಣ ರಘು, ರವಿ ಕಾಳೆ, ಬಲರಾಜವಾಡಿ ಸೇರಿದಂತೆ ಬಹುತೇಕ ಕಲಾವಿದರದ್ದು ಎಂದಿನಂತೆ ಅಚ್ಚುಕಟ್ಟಾದ ಅಭಿನಯ. ಚಿತ್ರದ ಛಾಯಾಗ್ರಹಣ ದಲ್ಲಿ “ರಾಮಾರ್ಜುನ’ ಕಲರ್‌ಫುಲ್ ಆಗಿ ಕಾಣು ತ್ತಾನೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಾಗಿದ್ದರೆ, ಚಿತ್ರದ ಹೊಳಪು ಹೆಚ್ಚಾಗಿರುತ್ತಿತ್ತು. ಒಂದೆ ರಡು ಹಾಡು, ಹಿನ್ನೆಲೆ ಸಂಗೀತ ಕೆಲಕಾಲ ಕಿವಿಯಲ್ಲಿ ಉಳಿಯುತ್ತದೆ. ಒಟ್ಟಾರೆ ಕೋವಿಡ್ ಆತಂಕದಿಂದ ಥಿಯೇಟರ್‌ಗಳ ಕಡೆಗೆ ಮುಖಮಾಡದೆ ಕುಳಿತಿದ್ದ ಮಾಸ್ ಆಡಿಯನ್ಸ್‌ಗೆ “ರಾಮಾರ್ಜುನ’ ಒಂದೊಳ್ಳೆ ಓಪನಿಂಗ್ ಕೊಟ್ಟಿರುವುದಂತೂ ಸುಳ್ಳಲ್ಲ.
ಜಿ.ಎಸ್.ಕಾರ್ತಿಕ ಸುಧನ್