Advertisement
ಅಬ್ಬರಿಸಿ ಬೊಬ್ಬಿರಿದ ಜೋಡುಪಾಲ ಈಗ ಜನರ ಓಡಾಟ ಇಲ್ಲದೆ ಅಕ್ಷರಶಃ ಬಿಕೋ ಎನ್ನುತ್ತಿದೆ. ನಾಯಿ, ಬೆಕ್ಕು, ದನಗಳು ರಸ್ತೆಯಲ್ಲಿಯೇ ಬೀಡುಬಿಟ್ಟಿವೆ. ಬೆರಳೆಣಿಕೆಯ ಸಿಬಂದಿ ಕಾರ್ಯಾಚರಣೆ ಸ್ಥಳದಲ್ಲಿದ್ದಾರೆ. ಜೆಸಿಬಿ ಯಂತ್ರಗಳು ದುರಸ್ತಿ ಮುಂದುವರಿಸಿವೆ. ಜೋಡುಪಾಲ ವೀಕ್ಷಣೆಗೆ ಬಂದವರು ಹಾಕಿದ ಬಿಸ್ಕೆಟ್ ಮೂಕ ಪ್ರಾಣಿಗಳ ಪಾಲಿನ ಆಹಾರವಷ್ಟೆ. ಸಂತ್ರಸ್ತರ ಕುಟುಂಬಗಳು ಪರಿಹಾರ ಕೇಂದ್ರದೊಳಗೆ ಮನೆ ಪರಿಸ್ಥಿತಿ ಕುರಿತು ಚಿಂತೆಯಲ್ಲಿದ್ದರೆ, ಸಾಕು ಪ್ರಾಣಿಗಳು ಯಜಮಾನ ಬರುವಿಕೆ ನಿರೀಕ್ಷೆಯಲ್ಲಿದ್ದುದು ಮನ ಕಲಕುತಿದೆ.
ರಸ್ತೆಯಲ್ಲಿ ಮಲಗಿದ್ದ ಸಾಕು ಪ್ರಾಣಿಗಳಿಗೆ ಗುರುವಾರ ಕೊಂಚ ಖುಷಿ ಕೊಟ್ಟಿತ್ತು. ವಾಹನಗಳಿಂದ ಇಳಿದು ಮನೆಗೆ ಬರುತ್ತಿದ್ದ ಮನೆ ಮಂದಿಯನ್ನು ಕಂಡು ನೋವು, ದುಮ್ಮಾನಗಳನ್ನು ಹಾವಭಾವಗಳಲ್ಲೇ ತೋರ್ಪಡಿಸಿದವು. ಹೊತ್ತು-ಹೊತ್ತು ಊಟ, ತಿಂಡಿ ನೀಡಿ, ಮನೆ ಮಕ್ಕಳಂತೆ ಬೆಳೆಸಿದ ಸಾಕು ಪ್ರಾಣಿಗಳು ಹಸಿವಿನಿಂದ ಬಳಲಿ ಬೆಂಡಾದದನ್ನು ಕಂಡು ಸಂತ್ರಸ್ತರ ಕಣ್ಣಲ್ಲಿಯೂ ನೀರು ತೊಟ್ಟಿಕ್ಕಿತ್ತು. ತಲೆ ನೇವರಿಸುತ್ತ ಸಂತೈಸಿದರು. ನಾವು ಮನೆಗೆ ಬಂದಿದ್ದೇವೆ. ಸಾಕು ಪ್ರಾಣಿಗಳು ನಮ್ಮನ್ನು ಕಂಡು ಜೀವ ಸಿಕ್ಕಿದಷ್ಟು ಖುಷಿ ಪಟ್ಟವು. ಈಗ ಸುಬ್ರಹ್ಮಣ್ಯಕ್ಕೆ ಹೊರಟಿದ್ದೇವೆ. ಇವು ನಮ್ಮ ಜತೆಗೆ ಬರುತ್ತಿದೆ. ಮರಳಿ ಹೋಗುತ್ತಿದ್ದಾರೆ ಎಂಬ ಭಯ ಎಂದು ಎರಡನೆ ಮೊಣ್ಣಂಗೇರಿ ನಿವಾಸಿ ಬೆಕ್ಕಿನ ತಲೆ ನೇವರಿಸಿಸುತ್ತಲೇ ನುಡಿದರು. ಯಾವಾಗ ಬರುವನು ಯಜಮಾನ?
ಸಂಪಾಜೆ, ದೇವರಕೊಲ್ಲಿ, ಅರೆಕ್ಕಳ್, ಎರಡನೆ ಮೊಣ್ಣಂಗೇರಿ ಭಾಗದ ಕೆಲ ಕುಟುಂಬಗಳು ಮನೆಗೆ ಮರಳಿವೆ. ಆದರೆ ಜೋಡುಪಾಲದಲ್ಲಿ ಪರಿಸ್ಥಿತಿ ಪೂರ್ತಿ ತಹಬದಿಗೆ ಬಾರದ ಕಾರಣ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿಯೇ ಉಳಿದಿದ್ದಾರೆ. ಇಲ್ಲಿ 50ಕ್ಕೂ ಅಧಿಕ ಮನೆಯ ಸಾಕು ಪ್ರಾಣಿಗಳ ಮೂಕರೋದನ ಮುಂದುವರಿದಿದೆ. ಮನೆ ನೋಡಲು ಬರುವವರು, ದುರಂತ ಸ್ಥಳದಲ್ಲಿ ಕಾರ್ಯಾಚರಣೆ ಮಾಡುವವರು ಹಾಕುವ ತಿಂಡಿ ತಿನಿಸುಗಳಿಗೆ ಕಾಯುವ ಸ್ಥಿತಿ. ಮನೆ ಯಜಮಾನ ಮರಳಿ ಯಾವಾಗ ಬರಬಹುದು ಎಂಬ ಮೂಕ ಪ್ರಾಣಿಗಳ ನಿರೀಕ್ಷೆಗೆ ಪ್ರಕೃತಿ ಉತ್ತರ ಹೇಳಬೇಕಿದೆ.