ಬೆಳ್ತಂಗಡಿ: ಕೆರೆಯ ಮಹತ್ವವನ್ನರಿತು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಆದ್ಯ ಕರ್ತವ್ಯ. ಕೆರೆ ಕಟ್ಟೆಗಳನ್ನು ದುರ್ಬಳಕೆ ಮಾಡದೆ ಪಾವಿತ್ರ್ಯವನ್ನು ಕಾಪಾಡಬೇಕು. ಜಲ ಮೂಲವನ್ನು ಸಂರಕ್ಷಿಸುವ ಜತೆಗೆ ಜೀವ ಜಲವನ್ನು ಎಚ್ಚರಿಕೆಯಿಂದ ಹಿತಮಿತವಾಗಿ ಬಳಕೆ ಮಾಡುವ ಪ್ರಜ್ಞಾವಂತಿಕೆ ಪ್ರತಿಯೊಬ್ಬರಲ್ಲೂ ಜಾಗೃತಿಗೊಳ್ಳಬೇಕು ಎಂಬುದಾಗಿ
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ‘ನಮ್ಮೂರು ನಮ್ಮಕೆರೆ’ ಕಾರ್ಯಕ್ರಮದನ್ವಯ ಸಾರ್ವಜನಿಕ ಸಹಭಾಗಿತ್ವದಲ್ಲಿ ರೂ. 22 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬೈಲಹೊಂಗಲ ತಾಲೂಕಿನ ಅನಿಗೋಳ ಕೆರೆಯನ್ನು ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಿ ಅವರು ಮಾತನಾಡಿದರು. ಕೆರೆ ಗ್ರಾಮಗಳ ಜೀವಾಳ. ಹಿಂದಿನ ಕಾಲದಲ್ಲಿ ಕೆರೆಗಳನ್ನು ಶ್ರಮದಾನದ ಮೂಲಕ ರಕ್ಷಣೆ ಮಾಡುತ್ತಿದ್ದರು.
ಕಾಲಕ್ರಮೇಣ ಕೆರೆಗಳ ಜವಾಬ್ದಾರಿ ಸರಕಾರದ್ದು ಎಂಬ ಭಾವನೆ ಜನರಲ್ಲಿ ಮೂಡಿತು. ತತ್ಪರಿಣಾಮವಾಗಿ ಗ್ರಾಮಗಳ ಜೀವಾಳವಾಗಿದ್ದ ಕೆರೆಗಳು ನಿರ್ಲಕ್ಷಿಸಲ್ಪಟ್ಟು ಅತಿಕ್ರಮಣಕ್ಕೊಳಗಾದವು. ನಾಗರಿಕತೆ ಬೆಳೆದಂತೆಲ್ಲ ನೀರಿನ ಅತಿ ಬಳಕೆಯಿಂದಾಗಿ ಜಲಾಭಾವ ಸೃಷ್ಟಿಯಾಯಿತು ಎಂದರು.
ಬೈಲಹೊಂಗಲ ಮೂರುಸಾವಿರ ಮಠದ ಮ.ನಿ.ಪ್ರ.ಸ್ವ. ನೀಲಕಂಠ ಮಹಾಸ್ವಾಮಿಗಳು, ಸ್ಥಳೀಯ ಸಂಪನ್ಮೂಲ ಸಂರಕ್ಷಿಸಿ ಸದ್ಬಳಕೆ ಮಾಡುವ ಹೊಣೆಗಾರಿಕೆ ಗ್ರಾಮಸ್ಥರದ್ದು ಎಂಬ ತಿಳಿವಳಿಕೆ ಎಲ್ಲರಲ್ಲೂ ಮೂಡಬೇಕಿದೆ ಎಂದರು.