ಕಾಪು : ಬಿಹಾರದಿಂದ ರಾಜ್ಯಸಭೆಗೆ ಚುನಾಯಿತರಾಗಿರುವ ಕಾಪು ಉಳಿಯಾರಗೋಳಿಯ ದಿ| ಗಿರಿಜಾ ಮುದ್ದಣ್ಣ ಶೆಟ್ಟಿ ಅವರ ಮೊಮ್ಮಗ ಅನಿಲ್ ಪ್ರಸಾದ್ ಹೆಗ್ಡೆ ಅವರು ಮಂಗಳವಾರ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿ, ದೇಗುಲದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದರು.
ಮಾರಿಯಮ್ಮ ದೇವಿಯ ಭಕ್ತ : ಈ ಸಂದರ್ಭ ಮಾತನಾಡಿದ ಅವರು, ತಾನು ಶ್ರೀ ಮಾರಿಯಮ್ಮ ದೇವಿಯ ಭಕ್ತನಾಗಿದ್ದು ಚಿಕ್ಕಂದಿನಿಂದಲೂ ಮಾರಿಯಮ್ಮ ದೇವಿಯ ದರ್ಶನಕ್ಕಾಗಿ ಬರುತ್ತಿದ್ದೆವು. ಪ್ರಸ್ತುತ ವಾಸುದೇವ ಶೆಟ್ಟಿ ಅವರ ನೇತೃತ್ವದಲ್ಲಿ ಹೊಸ ಮಾರಿಗುಡಿಯು ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದ್ದು ಇಲ್ಲಿನ ಜೀರ್ಣೋದ್ದಾರ ಕಾರ್ಯಗಳಿಗೆ ತಾವು ಕೂಡಾ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ಮಾರಿಯಮ್ಮ ದೇವಿಯ ಭಕ್ತರು ಜಗದಗಲಕ್ಕೂ ಹರಡಿದ್ದು ಎಲ್ಲರ ಸಹಕಾರದೊಂದಿಗೆ ಅಮ್ಮನ ದೇಗುಲ ಮಾದರಿಯಾಗಿ ನಿರ್ಮಾಣಗೊಳ್ಳಲಿ ಎಂದು ಹಾರೈಸಿದರು.
ಸ್ಥಾನಮಾನದ ನಿರೀಕ್ಷೆಯೊಂದಿಗೆ ರಾಜಕೀಯ ಪ್ರವೇಶಿಸಿಲ್ಲ : ಯಾವುದೇ ರೀತಿಯ ಸ್ಥಾನಮಾನವನ್ನು ಹುಡುಕಿಕೊಂಡು ಅಥವಾ ಸ್ಥಾನಮಾನದ ನಿರೀಕ್ಷೆಯೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿಲ್ಲ. ಕೇವಲ ಸಮಾಜ ಸೇವೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ಅಕಸ್ಮಾತ್ ಆಗಿ ರಾಜ್ಯಸಭಾ ಸದಸ್ಯನಾಗುವ ಅವಕಾಶ ದೊರಕಿದೆ. ಇದೊಂದು ನನ್ನ ಸುಯೋಗವಾಗಿದ್ದು, ಈ ಮೂಲಕ ನನಗೊಂದು ಶಕ್ತಿ ಸಿಕ್ಕಿದೆ. ಸಿಕ್ಕಿದ ಅವಕಾಶವನ್ನು ಹೊಸ ಹರುಪಿನೊಂದಿಗೆ ಸಮರ್ಥವಾಗಿ ನಿಭಾಯಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ನೀಡಿರುವ ಅವಕಾಶಕ್ಕೆ ಚ್ಯುತಿ ಬಾರದಂತೆ ಸಮಾಜ ಸೇವೆಯೊಂದಿಗೆ ಜನ ಸೇವೆ ಮಾಡುತ್ತೇನೆ ಎಂದರು.
ಇದನ್ನೂ ಓದಿ : ಬಂಡಾಯ; ಠಾಕ್ರೆ ಸರ್ಕಾರ ಪತನವಾಗಲಿದೆಯೇ? ಎಂವಿಎಸ್ V/s ಬಿಜೆಪಿ ನಂಬರ್ ಗೇಮ್ ಲೆಕ್ಕಾಚಾರವೇನು
ಅಗ್ನಿಪಥ್ ಯೋಜನೆಯ ಬಗ್ಗೆ ಅಧ್ಯಯನ ನಡೆಸಿಲ್ಲ : ಕೇಂದ್ರ ಸರಕಾರದ ಅಗ್ನಿ ಪಥ್ ಯೋಜನೆಯ ಬಗ್ಗೆ ಬಿಹಾರದಲ್ಲಿ ನಡೆಯುತ್ತಿರುವ ಗಲಾಟೆ ಬಗ್ಗೆ ಪ್ರಶ್ನಿಸಿದಾಗ, ಕಳೆದ ಮೂರ್‍ನಾಲ್ಕು ದಿನಗಳಿಂದ ನಾನು ಬಿಹಾರದಿಂದ ಹೊರಗಿದ್ದು ಅಲ್ಲಿ ಗಲಾಟೆ ನಡೆಯುತ್ತಿರುವ ವಿಚಾರವನ್ನು ಮಾಧ್ಯಮದ ಮೂಲಕ ಗಮನಿಸುತ್ತಿದ್ದೇನೆ. ಈ ಬಗ್ಗೆ ನಾನು ಅಧ್ಯಯನ ನಡೆಸಿಲ್ಲ. ಸಂಪೂರ್ಣ ಮಾಹಿತಿಯಿಲ್ಲದೇ, ಅಧ್ಯಯನ ನಡೆಸದೇ ಅಪೂರ್ಣ ಮಾಹಿತಿಯನ್ನು ನೀಡುವುದು ಸರಿಯಲ್ಲ. ಈ ಬಗ್ಗೆ ಅಧ್ಯಯನ ನಡೆಸಿ, ಮಾಹಿತಿ ನೀಡುತ್ತೇನೆ ಎಂದರು.
ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಕಾಪು ಮಾತನಾಡಿ, ಕಾಪು ಹೊಸ ಮಾರಿಗುಡಿ ದೇವಸ್ಥಾನವನ್ನು ಪ್ರಥಮ ಹಂತದಲ್ಲಿ ಸುಮಾರು ೩೦ ಕೋ. ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ದಾರಗೊಳಿಸಲಾಗುತ್ತಿದ್ದು ಮಾರಿಯಮ್ಮನ ಅನುಜ್ಞಯಂತೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಕರಾವಳಿಗರು ಸ್ವತಃ ಕ್ಷೇತ್ರಕ್ಕೆ ಭೇಟಿ ನೀಡಿ ಶಿಲಾ ಸೇವೆ ನೀಡುತ್ತಿದ್ದಾರೆ. ಮಾರಿಯಮ್ಮನ ಭಕ್ತರಾಗಿರುವ ಅನಿಲ್ ಪ್ರಸಾದ್ ಹೆಗ್ಡೆ ಅವರು ಕೂಡಾ ಮಾರಿಗುಡಿಗೆ ಭೇಟಿ ನೀಡಿದ್ದು, ಜೀರ್ಣೋದ್ದಾರ ಕಾರ್ಯಗಳಲ್ಲಿ ತನನ್ನು ತೊಡಗಿಸಿಕೊಳ್ಳುವ ಭರವಸೆ ನೀಡಿದ್ದು, ಜೀರ್ಣೋದ್ದಾರ ಸಮಿತಿಗೆ ಹೊಸ ಚೈತನ್ಯವನ್ನು ತುಂಬಿದೆ ಎಂದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಕಾಪು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ಅವರು ದೇವರ ಪ್ರಸಾದದೊಂದಿಗೆ ಅನಿಲ್ ಪ್ರಸಾದ್ ಹೆಗ್ಡೆ ಅವರನ್ನು ಗೌರವಿಸಿದರು.
ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಹೆಗ್ಡೆ, ಉಪಾಧ್ಯಕ್ಷರಾದ ಮನೋಹರ್ ಎಸ್. ಶೆಟ್ಟಿ, ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಕಟ್ಟಡ ಸಮಿತಿಯ ಪಧಾನ ಸಂಚಾಲಕ ಭಗವಾನ್‌ದಾಸ್, ಆರ್ಥಿಕ ಸಮಿತಿಯ ರಮೇಶ್ ಶೆಟ್ಟಿ, ಸಮಿತಿಯ ಸದಸ್ಯರಾದ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಶಿವಣ್ಣ ಅಂಚನ್, ಅನಿಲ್ ಪ್ರಸಾದ್ ಹೆಗ್ಡೆ ಅವರ ಸಹೋದರ ಅತುಲ್ ರಾಜ್ ಹೆಗ್ಡೆ, ಬೀನಾ ಅತುಲ್ ರಾಜ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.