ಬಳ್ಳಾರಿ: ದಶಕದ ಹಿಂದೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರಾರಾಜಿಸುತ್ತಿದ್ದ ಕಮಲದ ಬಾವುಟಗಳ ಮಧ್ಯೆ ಕಾಂಗ್ರೆಸ್ ಬಾವುಟ ಹಾರಿಸಿದ್ದ ಮಾಜಿ ಶಾಸಕ ಅನಿಲ್ ಎಚ್.ಲಾಡ್, ಈಗ “ಕೈ’ ಬಿಟ್ಟು ಪುನಃ ಕಮಲ ಹಿಡಿಯಲು ಸಿದ್ಧರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿ ಬಿಜೆಪಿ ಸೇರ್ಪಡೆ ಬಗ್ಗೆ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿರುವ ಲಾಡ್ ಕೊನೆಗೂ ಕಾಂಗ್ರೆಸ್‌ಗೆ ಬೈ, ಬೈ ಹೇಳಲು ತೀರ್ಮಾನಿಸಿದ್ದು, ಪಕ್ಷದಲ್ಲಿ ಕೈಗೊಳ್ಳುತ್ತಿರುವ ಕೆಲ ನಿರ್ಣಯಗಳೇ ಈ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ.
ಬ್ರೂಸ್‌ಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಾಟ್ಸಪ್ ಗ್ರೂಪ್‌ನಲ್ಲಿ ಸ್ವತಃ ಲಾಡ್ ಅವರೇ ಬಿಜೆಪಿ ಸೇರ್ಪಡೆಯಾಗುವ ಕುರಿತು ಮೆಸೇಜ್ ಪೋಸ್ಟ್ ಮಾಡಿ, ಬೆಂಬಲಿಗರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳಿದ್ದಾರೆ. ಇದಕ್ಕೆ ಗ್ರೂಪ್‌ನಲ್ಲಿ ಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಲ್ಲದೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ಬಾರಿ ಶಾಸಕರಾಗಿದ್ದ ಲಾಡ್ ಪಕ್ಷದಲ್ಲಿನ ನಿರ್ಲಕ್ಷéಕ್ಕೆ ಬೇಸತ್ತು ಬಿಜೆಪಿ ಸೇರುವ ನಿರ್ಣಯ ಕೈಗೊಂಡಿರುವುದು ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಅಚ್ಚರಿ ಮೂಡಿಸಿದೆ.
1022 ಮತಗಳಿಂದ ಪರಾಭವ: ಮೂಲತಃ ಜೆಡಿ ಎಸ್‌ನಲ್ಲಿದ್ದ ಲಾಡ್ ಅವರು, 2004ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಪ ರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ದ್ದರು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪ ರ್ಧಿಸಿ ಅಂದಿನ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಜಿ. ಸೋಮಶೇಖರರೆಡ್ಡಿ ವಿರುದ್ಧ ಕೇವಲ 1022 ಮತಗಳ ಅಂತರದಿಂದ ಪರಾಭವಗೊಂಡರು. 2008ರಲ್ಲಿ ಸೋತಿದ್ದ ಲಾಡ್, 2013ರ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದ ಇದೀಗ ಪುನಃ ಮರಳಿ ಬಿಜೆಪಿ ಪಾಳಯ ಸೇರಲು ಮುಂದಾಗಿದ್ದಾರೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು, ಅನರ್ಹ ಶಾಸಕ ಆನಂದ್‌ಸಿಂಗ್ ಸಮ್ಮುಖದಲ್ಲಿ ಶೀಘ್ರವೇ ಬಿಜೆಪಿ ಸೇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದಲ್ಲಿನ ನಿರ್ಣಯಗಳಿಗೆ ಬೇಸರ: ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುತ್ತಿಲ್ಲ. ಯಾವುದೇ ಜವಾಬ್ದಾರಿ ನೀಡುತ್ತಿಲ್ಲ. ಇತ್ತೀಚೆಗಷ್ಟೇ ರಚಿಸಲಾದ ಯಾವ ಸಮಿತಿಗಳಿಗೂ ನನ್ನನ್ನು ನೇಮಿಸಿಲ್ಲ. ಪಕ್ಷದ ಬ್ಯಾನರ್‌ಗಳನ್ನು ಹಾಕಿಸಿಕೊಂಡರೆ ಅದರಲ್ಲಿ ನನ್ನ ಪೋಟೋ ಹಾಕಿಸಲ್ಲ. ಪಕ್ಷದಲ್ಲೂ ನನಗೆ ಯಾವುದೇ ಮಾನ್ಯತೆಯಿಲ್ಲ ಎಂದ ಮೇಲೆ ನಾನೇಕೆ ಕಾಂಗ್ರೆಸ್‌ದಲ್ಲಿ ಮುಂದುವರಿಯಬೇಕು ಎಂದು ಪ್ರಶ್ನಿಸಿರುವ ಲಾಡ್, ಇದೇ ಕಾರಣಕ್ಕೆ ಬಿಜೆಪಿ ಸೇರಲು ಮುಂದಾಗಿರುವುದಾಗಿ ಬರೆದುಕೊಂಡಿ ದ್ದಾರೆ. ಎಲ್ಲದಕ್ಕೂ ಮುಖ್ಯವಾಗಿ ಬಳ್ಳಾರಿಯ ಕಾಂಗ್ರೆಸ್‌ನ ಹಿರಿಯ ಮುಖಂಡರು ಪಕ್ಷದ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಎಂಬುದಕ್ಕಿಂತ ಹೇಗೆ ಸೋಲಿಸಬೇಕು ಎಂಬುದನ್ನೇ ಗುರಿಯಾಗಿ ಸಿಕೊಂಡಿರುತ್ತಾರೆ. ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್‌ಗಾಗಿ ಪ್ರಯತ್ನಿಸಿ ನನ್ನನ್ನು ಸೋಲಿಸಿದವರಿಗೆ ಇದೀಗ ಕ್ಷೇತ್ರವನ್ನೇ ಬಿಟ್ಟು ಕೊಡುತ್ತಿದ್ದು ಗೆದ್ದು ಬರಲಿ ಎಂದು ಸವಾಲೆಸೆದಿದ್ದಾರೆ.
ಲಾಡ್ ಕಾರುಗಳಿಗೆ ಬೆಂಕಿ: ಕಾಂಗ್ರೆಸ್ ಸೇರಿ 2008ರಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದ ವೇಳೆ ಇಡೀ ಜಿಲ್ಲೆಯಲ್ಲಿ ಬಿಜೆಪಿ ಹವಾ ಇತ್ತು. ರೆಡ್ಡಿ ಸಹೋದರರ ರಾಜಕೀಯ ಉತ್ತುಂಗ ಸ್ಥಿತಿಯಲ್ಲಿದ್ದ ವೇಳೆ ಲಾಡ್ ನಿವಾಸದ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಿಗೆ ಬೆಂಕಿಯನ್ನೂ ಹಚ್ಚಲಾಗಿತ್ತು. ಇಷ್ಟೆಲ್ಲ ವಿರೋಧಗಳ ನಡುವೆಯೂ ರೆಡ್ಡಿಗಳಿಗೆ ಸೆಡ್ಡು ಹೊಡೆದಿದ್ದವರು ಇದೀಗ ಪುನಃ ಬಿಜೆಪಿ ಸೇರಲು ಮುಂದಾಗುತ್ತಿರುವುದು ಕೈ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್‌ನಲ್ಲಿ ನನ್ನನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಯಾರೂ ಮಿತ್ರರೂ ಅಲ್ಲ. ಪಕ್ಷದ ಹಿರಿಯ ಮುಖಂಡರು ಸೇರಿ ಎಲ್ಲರೂ ಪ್ರತಿಪಕ್ಷದವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಾನೊಬ್ಬನೇ ಏಕೆ ವಿರೋಧ ಕಟ್ಟಿಕೊಳ್ಳಬೇಕು. ಪಕ್ಷದಲ್ಲಿ ನನಗೆ ನೀಡಿದ ಜವಾಬ್ದಾರಿಯಲ್ಲೂ ಕೆಲವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಅದಕ್ಕೆ ಬೇಸತ್ತು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ.
-ಅನಿಲ್‌ಲಾಡ್, ಮಾಜಿ ಶಾಸಕ