ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪರವಾಗಿ ಆಡಿದ್ದರು. ಮೊದಲ ಸೀಸನ್ ನಲ್ಲಿ (2008) ಬೆಂಗಳೂರು ತಂಡದ ಭಾಗವಾಗಿದ್ದ ಅನಿಲ್, ಮುಂದಿನ ಸೀಸನ್ ನಲ್ಲಿ ತಂಡದ ಮುಂದಾಳತ್ವ ವಹಿಸಿದ್ದರು.
2008 ರ ಹರಾಜಿನಲ್ಲಿ ಮಾಜಿ ಮಾಲೀಕ ವಿಜಯ್ ಮಲ್ಯ ಅವರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗಾಗಿ ಸಹಿ ಹಾಕಿದ ಸಮಯದ ನೆನಪುಗಳನ್ನು ಅನಿಲ್ ಕುಂಬ್ಳೆ ಅವರು ಹಂಚಿಕೊಂಡಿದ್ದಾರೆ.
ಮೊದಲ ಸೀಸನ್ ನಲ್ಲಿ ಆರ್ ಸಿಬಿ ಫ್ರಾಂಚೈಸಿ ತಂಡದ ಐಕಾನ್ ಪ್ಲೇಯರ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಿತ್ತು. ಹೀಗಾಗಿ ಕುಂಬ್ಳೆ ಹರಾಜಿನ ಭಾಗವಾಗಿದ್ದರು. ಮೂಲ ಬೆಲೆಗೆ ಕುಂಬ್ಳೆ ಆರ್ ಸಿಬಿ ತಂಡದ ಪಾಲಾಗಿದ್ದರು. ಹರಾಜಿನಲ್ಲಿ ಬೇರೆ ಯಾರೂ ಖರೀದಿ ಮಾಡಬಾರದು ಎಂದು ವಿಜಯ್ ಮಲ್ಯ ಸೂಚಿಸಿದ್ದರು ಎಂದು ಕುಂಬ್ಳೆ ಇದೀಗ ಬಹಿರಂಗಪಡಿಸಿದ್ದಾರೆ.
“ಕೆಲವು ಕಾರಣಗಳಿಂದಾಗಿ ನಾನು ಐಕಾನ್ ಪಟ್ಟಿಯ ಭಾಗವಾಗಿರಲಿಲ್ಲ ಆದ್ದರಿಂದ ನಾನು ಹರಾಜಿನ ಭಾಗವಾಗಿದ್ದೆ. ನನ್ನ ಹೆಸರು ಹರಾಜು ಪಟ್ಟಿಯಲ್ಲಿತ್ತು. ನನ್ನ ಹೆಸರು ಬಂದ ತಕ್ಷಣ ವಿಜಯ್ ಮಲ್ಯ ‘ಅವರು ನನ್ನ ಬೆಂಗಳೂರು ಹುಡುಗ’ ಎಂದು ಹೇಳಿದರು. ಯಾರೂ ಅವನನ್ನು ಮುಟ್ಟುವಂತಿಲ್ಲ ಎಂದರು. ಹೀಗಾಗಿ ಬೇರೆ ಯಾವುದೇ ತಂಡ ನನಗೆ ಬಿಡ್ ಮಾಡಲಿಲ್ಲ. ಮೂಲ ಬೆಲೆಗೆ ನಾನು ಆರ್ ಸಿಬಿ ತಂಡದ ಪಾಲಾದೆ” ಎಂದು ಕುಂಬ್ಳೆ ಅವರು ರವಿಚಂದ್ರನ್ ಅಶ್ವಿನ್ ಜತೆಗಿನ ಸಂದರ್ಶನದಲ್ಲಿ ಹೇಳಿದರು.
ಆರ್ ಸಿಬಿ ಯೊಂದಿಗಿನ ಅವರ ಮೂರು ವರ್ಷಗಳ ಅವಧಿಯಲ್ಲಿ, ಕುಂಬ್ಳೆ ಅವರು 42 ಪಂದ್ಯಗಳನ್ನು ಆಡಿದರು. 23.51 ರ ಸರಾಸರಿಯಲ್ಲಿ 6.58 ರ ಎಕಾನಮಿಯಲ್ಲಿ 45 ವಿಕೆಟ್ ಗಳನ್ನು ಕಿತ್ತಿದ್ದರು.