ಬೆಂಗಳೂರು: ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ವಿಧಾನಸೌಧದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಪರಮೇಶ್ವರ್ ಅವರು, ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ, ಯೋಜನೆಗಳ ಅನುಷ್ಠಾನ ಕುರಿತು ಸಿಡಿಮಿಡಿಗೊಂಡರು.
ಒಂದು ಹಂತದಲ್ಲಿ ಇಲಾಖೆಯ ಯೋಜನೆಗಳ ಬಗ್ಗೆ ಅಧಿಕಾರಿಗಳು ವಿವರಣೆ ನೀಡುವ ಮೊದಲೇ ಸಚಿವ ರೇವಣ್ಣ ಅವರು ಮಧ್ಯಪ್ರವೇಶ ಮಾಡಿದರು. ಆಗ “ಅಧಿಕಾರಿಗಳು ಹೇಳಲಿ ರೇವಣ್ಣ ಅವರೇ, ಯೋಜನೆಗಳ ಸ್ಥಿತಿ ಏನಾಗಿದೆ ಎಂಬುದು ಕಣ್ಣಿಗೆ ಕಾಣುತ್ತಿದೆಯಲ್ಲವೇ? ಎಲ್ಲದಕ್ಕೂ ಮುಖ್ಯಮಂತ್ರಿ ಹೇಳಿದ ಮೇಲೆಯೇ ಮಾಡುವುದು ಎಂಬಂತಾಗಿದೆ’ ಎಂದು ರೇವಣ್ಣ ಮಾತಿಗೆ ಬ್ರೇಕ್ ಹಾಕಿದರು.
ಆಗ ರೇವಣ್ಣ, ವಿಷಯ ಹೆಚ್ಚು ಬೆಳೆಸಲು ಹೋಗದೆ, “ನೀವು ಸೀನಿಯರ್ ಬಿಡಿ ಸರ್’ ಎಂದು ಸುಮ್ಮನಾದರೆಂದು ಹೇಳಲಾಗಿದೆ. ನಗರದ ಎಲಿವೇಟೆಡ್ ಕಾರಿಡಾರ್ ಸೇರಿ ಬೇರೆ ಇಲಾಖೆ ವಾಪ್ತಿಯ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಪರಮೇಶ್ವರ್ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಅಧಿಕಾರಿಗಳ ತರಾಟೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಮೇಶ್ವರ್, ಯಾವುದೇ ಕಾಮಗಾರಿಗಳು ನಿಗದಿತ ಸಮಯದಲ್ಲೇ ಪೂರ್ಣವಾಗಬೇಕು. ನೀವು ಗುತ್ತಿಗೆದಾರನಿಗೆ ಮತ್ತಷ್ಟು ಕಾಲಾವಕಾಶ ಕೊಟ್ಟರೆ ಕಾಮಗಾರಿ ವೆಚ್ಚ ಕೂಡ ಕೋಟಿಗಟ್ಟಲೆ ಹೆಚ್ಚಾಗುತ್ತದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣ ಮಾಡಿ ಇಲ್ಲವೇ ಸರ್ಕಾರದ ಹಣ ವ್ಯರ್ಥವಾಗುತ್ತದೆ. ಶಾಲಾ ಸೇತುವೆ ನಿರ್ಮಾಣ ಅಗತ್ಯ ಇದ್ದರೆ ಅದನ್ನು ಮೊದಲೇ ಮಾಡೋಕೆ ಏನು? ಮುಖ್ಯಮಂತ್ರಿಯವರು ಹೇಳಿದ ಮೇಲೆಯೇ ಅದನ್ನು ಮಾಡ್ತೀರಲ್ಲ. ನಿಮಗೆ ಪರಿಜ್ಞಾನ ಇಲ್ಲವಾ” ಎಂದು ಗರಂ ಆದರು. ತೀರ್ಥಹಳ್ಳಿಯಲ್ಲಿ ಶಾಲಾ ಸೇತುವೆ ಮಾಡಿದ್ದಾರೆ. ಆದರೆ, ಆ ಶಾಲೆಗೆ ಸೂಕ್ತ ರಸ್ತೇನೇ ಇಲ್ಲ. ಅದು ಆ ಎಂಜಿನಿಯರ್‌ಗೆ ಯಾಕೆ ಕಾಣಿಸಿಲ್ಲ? ಇಷ್ಟು ಕಾಮನ್‌ಸೆನ್ಸ್ ಇಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
ಸಿಎಂ ತಾಕೀತು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಅವೈಜ್ಞಾನಿಕವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಇವೆ. ಡಿಪಿಆರ್‌ಗಳನ್ನು ಖಾಸಗಿಯವರಿಗೆ ಕೊಡುವುದು ಅಭ್ಯಾಸ ಆಗಿಬಿಟ್ಟಿದೆ.
ಕಾಮಗಾರಿಗಳು ವೇಗಗತಿಯಲ್ಲಿ ಆಗಬೇಕು ಎಂದು ಮುಖ್ಯಮತಾಕೀತು ಮಾಡಿದರು. ಬೆಂಗಳೂರು-ಮೈಸೂರು ಹೆದ್ದಾರಿ ಶೇ.80 ರಷ್ಟು ಮುಗಿದಿದೆ. ಈಗಾಗಲೇ 21 ಸಾವಿರ ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆ. ಕೆ. ಶಿಪ್ ಸೇರಿದಂತೆ ಜಿಲ್ಲಾ ರಸ್ತೆಗಳು ಬೇಗ ಬೇಗ ಆಗಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.