Advertisement

ಗೌರವಯುತ ಮೊತ್ತದ ಹಕ್ಕು, ಅಂಗನವಾಡಿ ಕಾರ್ಯಕರ್ತೆಯರ ವೇತನ

05:44 PM Mar 23, 2017 | Harsha Rao |

ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೆ ಕರೆಯುವುದರಲ್ಲಿಯೇ ತಾರತಮ್ಯ ಧೋರಣೆಯಿದೆ. ಒಳ್ಳೆಯ ವೇತನ, ಸೌಲಭ್ಯ ಪಡೆಯುವುದು ಮಹಿಳೆಯರು ಮತ್ತು ಮಕ್ಕಳ ಪಾಲನೆ, ಆರೋಗ್ಯ, ಶಿಕ್ಷಣದಂಥ ಬಹುಮುಖ್ಯ ಕರ್ತವ್ಯದಲ್ಲಿ ತೊಡಗಿಕೊಂಡಿರುವ ಈ ವನಿತೆಯರ ಹಕ್ಕು.

Advertisement

1975ರಲ್ಲಿ ಕೇಂದ್ರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪ್ರಾರಂಭವಾಗಿರುವ ಅಂಗನವಾಡಿಗೆ ಅತಿ ದೀರ್ಘ‌ ಕಾಲದಿಂದ ನಡೆಯುತ್ತಿರುವ ಯೋಜನೆ ಎಂಬ ಹಿರಿಮೆಯಿದೆ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಪಾಲನೆ ಪೋಷಣೆಯಂಥ ಪವಿತ್ರ ಮತ್ತು ಬಹುಮುಖ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಂಗನವಾಡಿಗಳು ಮತ್ತು ಅವುಗಳಲ್ಲಿ ದುಡಿಯುವ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಸರಕಾರಗಳು ಯೋಜನೆಗಳನ್ನು ಪ್ರಕಟಿಸಿ ಶಾಭಾಸ್‌ ಪಡೆದುಕೊಳ್ಳಬಹುದು, ಆದರೆ ಅವುಗಳನ್ನು ಬೇರುಮಟ್ಟಕ್ಕೆ ಮುಟ್ಟಿಸುವ ಅಂಗನವಾಡಿ ಕಾರ್ಯಕರ್ತೆಯರಂತಹ ಉದ್ಯೋಗಿಗಳ ಬಗ್ಗೆ ಅವು ವಹಿಸುತ್ತಿರುವ ದಿವ್ಯ ನಿರ್ಲಕ್ಷ್ಯ ಖಂಡನೀಯ.

ದೇಶದಲ್ಲಿ ಸುಮಾರು 27 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಕರ್ನಾಟಕದಲ್ಲೇ 1.26 ಲಕ್ಷ ಮಂದಿಯಿದ್ದಾರೆ. ಆದರೆ ಈ ಮಹಿಳೆಯರ ಮತ್ತು ಅಂಗನವಾಡಿ ಸಹಾಯಕಿಯರ ಬದುಕು ಮಾತ್ರ ಈಗಲೂ ಅತಂತ್ರವಾಗಿ ಇರುವುದು ವಿಪರ್ಯಾಸ. ಇವರು ಇಡೀ ದಿನ ಅಂಗನವಾಡಿಗಳಲ್ಲಿ ದುಡಿದರೂ ಅವರನ್ನು ಸರಕಾರಿ ನೌಕರರೆಂದು ಪರಿಗಣಿಸಲಾಗುತ್ತಿಲ್ಲ. ಅವರಿಗೆ ಪಿಂಚಣಿ, ಗ್ರಾಚ್ಯುಟಿ, ಭವಿಷ್ಯ ನಿಧಿ ಸೇರಿದಂತೆ ಯಾವುದೇ ಭದ್ರತೆಯಿಲ್ಲ. ಸರಕಾರದ ಮಟ್ಟಿಗೆ ಅವರು ದಿನಗೂಲಿ ಕಾರ್ಮಿಕರಿದ್ದಂತೆ. ಕೋಟಿಗಟ್ಟಲೆ ಮಕ್ಕಳ ಮತ್ತು ಸ್ತ್ರೀಯರ ಆರೋಗ್ಯದ ಕಾಳಜಿ ವಹಿಸುವ ಕಾರ್ಯಕರ್ತೆಯರ ಭವಿಷ್ಯದ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಕಟು ವಾಸ್ತವ. 

ಕಾರ್ಯಕರ್ತೆಯರ ವೇತನ ಹೆಚ್ಚಳ ಆಗ್ರಹಿಸಿ ಹೋರಾಟ ಇದೇ ಈಗ ಆರಂಭವಾಗಿರುವುದಲ್ಲ. ಕಾರ್ಯಕರ್ತೆಯರ ಗೌರವ ಧನ 10,000ಕ್ಕೇರಿಸಲು ಮತ್ತು ಸಹಾಯಕಿಯರ ವೇತನವನ್ನು 7,500ರೂ.ಗೇರಿಸಲು ಆಗ್ರಹಿಸಿ ಕಳೆದ ಕೆಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಕರ್ನಾಟಕ ಎಂದಲ್ಲ, ಪ್ರತೀ ರಾಜ್ಯದಲ್ಲೂ ಈ ವನಿತೆಯರ ಗೋಳು ಹೆಚ್ಚುಕಮ್ಮಿ ಒಂದೇ ಆಗಿದೆ. 

ಕೇರಳ, ಆಂಧ್ರ, ತಮಿಳುನಾಡು, ಗೋವಾ, ಪುದುಚೇರಿ ರಾಜ್ಯಗಳಲ್ಲಿ ಮಾತ್ರ ಇವರು 10,000 ರೂ.ಗಿಂತ ಮೇಲ್ಪಟ್ಟು ವೇತನ ಪಡೆಯುತ್ತಿದ್ದಾರೆ. ಹಾಗೆಂದು ಸರಕಾರ ಕಾರ್ಯಕರ್ತೆಯರ ವೇತನವನ್ನು ಏರಿಸಿಯೇ ಇಲ್ಲ ಎಂದಲ್ಲ. ಪ್ರತೀ ಸಲ ಬಜೆಟ್‌ನಲ್ಲಿ ಚಿಲ್ಲರೆ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಆದರೆ ಅದು ಇಂದಿಗೂ ಒಂದು ಗೌರವಯುತವಾದ ಮೊತ್ತವಾಗಿಲ್ಲ. ಮಹಾರಾಷ್ಟ್ರದಲ್ಲಿ ಮಾತ್ರ ನಿವೃತ್ತಿಯಾಗುವಾಗ ಕಾರ್ಯಕರ್ತೆಯರಿಗೆ 1 ಲಕ್ಷ ಮತ್ತು ಸಹಾಯಕಿಯರಿಗೆ 75 ಸಾವಿರ ರೂ. ಕೊಡುವ ನಿಯಮ ಜಾರಿಯಲ್ಲಿದೆ. 

Advertisement

ಶಾಲಾ ಪೂರ್ವ ಹಂತದ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಶಿಕ್ಷಣ, ಗರ್ಭಿಣಿಯರ ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆ ಅಂಗನವಾಡಿ ಕಾರ್ಯಕರ್ತೆಯರ ಕೆಲಸ. ಆದರೆ ಈಗ ಸರಕಾರ ಅವರಿಂದ ಅನೇಕ ಪುಕ್ಕಟೆ ಚಾಕರಿ ಮಾಡಿಸಿಕೊಳ್ಳುತ್ತದೆ. ಭಾಗ್ಯಲಕ್ಷ್ಮಿ ಬಾಂಡ್‌, ಪೋಲಿಯೊ ಲಸಿಕೆಯಂತಹ ಕಾರ್ಯಕ್ರಮಗಳಿಗೆ ಇವರು ಬೇಕು.

ಸಮೀಕ್ಷೆಗಳಿಗೆ ಚುನಾವಣೆಗಳಿಗೆ ಅವರನ್ನು ದುಡಿಸಿಕೊಳ್ಳುತ್ತದೆ. ಇವರನ್ನು ಅನ್ಯ ಕೆಲಸಗಳಿಗೆ ಬಳಸಿಕೊಳ್ಳಬಾರದೆಂದು ಸುಪ್ರೀಂ ಕೋರ್ಟ್‌ ಆದೇಶಿಸಿದ್ದರೂ ಯಾವ ರಾಜ್ಯದಲ್ಲೂ ಅದು ಪಾಲನೆಯಾಗುತ್ತಿಲ್ಲ. ಇದರ ಜತೆಗೆ ಅಂಗನವಾಡಿಗಳ ಮೇಲೆ ಖಾಸಗೀಕರಣ ಅಪಾಯದ ತೂಗುಗತ್ತಿಯೂ ನೇತಾಡುತ್ತಿದೆ. ಖಾಸಗಿ ಕ್ಷೇತ್ರದ ಸಹಭಾಗಿತ್ವದಲ್ಲಿ ಅಂಗನವಾಡಿ ಸ್ಕೀಂನ್ನು ಪರಿಷ್ಕರಿಸುವ ಪ್ರಸ್ತಾವ ಎರಡು ವರ್ಷಗಳ ಹಿಂದೆ ಮಂಡಿಸಲ್ಪಟ್ಟಿದ್ದರೂ ವಿರೋಧದಿಂದಾಗಿ ತಣ್ಣಗಾಗಿದೆ. 

ಎಲ್ಲವೂ ದುಬಾರಿಯಾಗಿರುವ ಈಗಿನ ಕಾಲದಲ್ಲಿ ಮಾಸಿಕ 10,000 ರೂ. ದೊಡ್ಡ ಮೊತ್ತವೇನಲ್ಲ. ಇಷ್ಟು ವೇತನ ಪಡೆದುಕೊಳ್ಳುವ ಎಲ್ಲ ಹಕ್ಕು ಮತ್ತು ಅರ್ಹತೆ ಅಂಗನವಾಡಿ ಕಾರ್ಯಕರ್ತೆಯರಿಗಿದೆ. ಆದರೆ ಕೊಡುವ ಇಚ್ಛೆ ಮಾತ್ರ ಸರಕಾರಕ್ಕಿಲ್ಲ. ಓಟು ಬ್ಯಾಂಕ್‌ ರಕ್ಷಿಸಿಕೊಳ್ಳುವ ಸಲುವಾಗಿ ಭಾಗ್ಯಗಳನ್ನು, ಸಬ್ಸಿಡಿಗಳನ್ನು ಪ್ರಕಟಿಸುವ ಸರಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವುದು ಹೊರೆಯಾಗಬಾರದು. ಇದಕ್ಕಾಗಿ ಕೇಂದ್ರ ಕೊಡುತ್ತಿಲ್ಲ ಎಂಬ ಕುಂಟು ನೆಪ ಸರಿಯಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯ ಸಿಗಲೇ ಬೇಕು.

Advertisement

Udayavani is now on Telegram. Click here to join our channel and stay updated with the latest news.

Next