Advertisement

ಅಂಗನವಾಡಿ ನೌಕರರಿಗೆ 3 ತಿಂಗಳಿಂದ ಸಂಬಳವೇ ಆಗಿಲ್ಲ

06:00 AM Jul 29, 2018 | |

ಕುಂದಾಪುರ: ಮಕ್ಕಳನ್ನು ಪಾಲನೆಯಿಂದ ತೊಡಗಿ ಮಾತೃಪೂರ್ಣ, ಮಾತೃವಂದನಾ ಯೋಜನೆಯ ಆಹಾರ ತಯಾರಿ, ಭಾಗ್ಯಲಕ್ಷ್ಮೀ ಯೋಜನೆಯ ಪಟ್ಟಿ ಸಿದ್ಧಪಡಿಸುವಿಕೆ ಹೀಗೆ ಸಾಲುಸಾಲು ಕೆಲಸಗಳನ್ನು ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸರಕಾರ ಸಂಬಳವೇ ನೀಡಿಲ್ಲ. 

Advertisement

ಸಂಬಳ ಸಿಗದೆ ಜಿಲ್ಲೆಯ 2,340 ಮಂದಿ ಅಂಗನವಾಡಿ ನೌಕರರು ಸಂಕಷ್ಟದಲ್ಲಿದ್ದಾರೆ. ಎಲ್ಲ ಕೆಲಸಗಳನ್ನು ತಮ್ಮಿಂದ ಮಾಡಿಸಿಕೊಂಡರೂ ಸರಿಯಾಗಿ ವೇತನ ನೀಡದೇ ಸತಾಯಿಸುತ್ತಿದ್ದಾರೆ ಎನ್ನುವುದು ಅಂಗನವಾಡಿ ನೌಕರರ ಆರೋಪ. 

ದ.ಕ. ಹೊರತುಪಡಿಸಿ ರಾಜ್ಯಾದ್ಯಂತ ಸಮಸ್ಯೆ
ದಕ್ಷಿಣ ಕನ್ನಡ ಜಿಲ್ಲೆಯ 7 ಬ್ಲಾಕ್‌ಗಳ ಸುಮಾರು 2,000 ಅಂಗನವಾಡಿ ಕೇಂದ್ರಗಳ ಪೈಕಿ ಬಂಟ್ವಾಳ ಬ್ಲಾಕ್‌ನ 241 ಅಂಗನವಾಡಿ ಕೇಂದ್ರಗಳ 483 ಮಂದಿ ನೌಕರರನ್ನು ಹೊರತುಪಡಿಸಿ, ಬಾಕಿ ನೌಕರರಿಗೆ ಮೇ ವರೆಗೆ ವೇತನವಾಗಿದೆ. ಆದರೆ ಉಡುಪಿ, ಉತ್ತರ ಕನ್ನಡ ಸಹಿತ ಹೆಚ್ಚಿನ ಜಿಲ್ಲೆಗಳಲ್ಲಿ ಕಳೆದ 3 ತಿಂಗಳಿನಿಂದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವೇತನವೇ ಆಗಿಲ್ಲ. ಕೆಲವು ಜಿಲ್ಲೆಗಳಲ್ಲಿ 5 ತಿಂಗಳಿನಿಂದ ಸಂಬಳವೇ ಆಗಿಲ್ಲ. 

ಹೋರಾಟಕ್ಕೂ ಕಿಮ್ಮತ್ತಿಲ್ಲ
ಸೇವಾವಧಿ ಆಧಾರದಲ್ಲಿ ಗೌರವಧನ/ ವೇತನ ಹೆಚ್ಚಳ, ಕನಿಷ್ಠ ವೇತನ ಜಾರಿ, ಮಾಸಿಕ ಪಿಂಚಣಿ, ಸಿ ಮತ್ತು ಡಿ ಗ್ರೂಪ್‌ ನೌಕರರನ್ನಾಗಿ ಘೋಷಿಸಬೇಕು ಸಹಿತ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಎರಡೆರಡು ಬಾರಿ ಬೀದಿಗಿಳಿದು ಹೋರಾಟ ನಡೆಸಿದರೂ, ಆಳುವ ವರ್ಗ ಮನ್ನಣೆಯೇ ನೀಡಿಲ್ಲ. 

42 ಹುದ್ದೆ ಖಾಲಿ
ಉಡುಪಿ ಜಿಲ್ಲೆಯಲ್ಲಿರುವ 1,191 ಅಂಗನವಾಡಿಗಳ ಪೈಕಿ ಕುಂದಾಪುರದಲ್ಲಿ 3 ಕಾರ್ಯಕರ್ತೆಯರು, 9 ಸಹಾಯಕಿಯರು, ಕಾರ್ಕಳದಲ್ಲಿ ತಲಾ 3 ಹುದ್ದೆ, ಉಡುಪಿಯಲ್ಲಿ 3 ಕಾರ್ಯಕರ್ತೆಯರು, 11 ಸಹಾಯಕಿಯರು ಹಾಗೂ ಬ್ರಹ್ಮಾವರದಲ್ಲಿ ತಲಾ 5 ಹುದ್ದೆಗಳು ಸೇರಿ 14 ಕಾರ್ಯಕರ್ತೆಯರು ಹಾಗೂ 28 ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ಒಟ್ಟು 42 ಅಂಗನವಾಡಿ ನೌಕರರ 
ಅಗತ್ಯ ಇದೆ.

Advertisement

ಈ ವರ್ಷ ಒಂದೇ ಬಾರಿ  
ಕಳೆದ ಜನವರಿಯಿಂದ ಜೂನ್‌ವರೆಗೆ ಕೇವಲ ಒಂದು ಬಾರಿ ಮಾತ್ರ ಅಂದರೆ, ಮೇ ತಿಂಗಳಲ್ಲಿ ವೇತನ ಆಗಿದೆ. ಬಳಿಕ ಆಗಿಲ್ಲ. ಕಳೆದ ವರ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ 8 ಸಾವಿರ ಹಾಗೂ ಸಹಾಯಕಿ ಯರಿಗೆ 4 ಸಾವಿರ ರೂ. ಗೆ ವೇತನ ಏರಿಕೆ ಆಗಿತ್ತು. 

ತ್ವರಿತವಾಗಿ ವೇತನ ನೀಡಲಿ
ಜಿಲ್ಲೆಯ ಬೇರೆ ಎಲ್ಲ ಕಡೆಗಳಲ್ಲಿ ಸಂಬಳ ತಡವಾಗುತ್ತಿತ್ತು. ಆದರೆ ಕುಂದಾಪುರದಲ್ಲಿ ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ವೇತನ ಸಿಗುತ್ತಿತ್ತು. ಆದರೆ ಈಗ ಕಳೆದ 3 ತಿಂಗಳಿನಿಂದ ಸಂಬಳವೇ ಆಗಿಲ್ಲ. ಇದೇ ಸಂಬಳವನ್ನು ಆಶ್ರಯಿಸಿಕೊಂಡಿರುವ ನಮಗೆ ತುಂಬಾ ಕಷ್ಟವಾಗುತ್ತಿದೆ.  
– ಆಶಾ ಶೆಟ್ಟಿ, ಕುಂದಾಪುರ ತಾ| ಅಂಗನವಾಡಿ 
ನೌಕರರ ಸಂಘ

ನಮ್ಮ ಬವಣೆ ಕೇಳುವುದಿಲ್ಲ 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಲ ವೇತನದ ಸಮಸ್ಯೆ ಇಲ್ಲ. ಆದರೆ ಕಳೆದ ಬಾರಿ ಗೌರವ ಧನವನ್ನು ಏರಿಕೆ ಮಾಡಿದ ಅನಂತರ ನಮಗೆ ಸರಿಯಾದ ಸಮಯದಲ್ಲಿ ಸಂಬಳ ಸಿಗುತ್ತಿಲ್ಲ. ತಡವಾಗಿ ಆಗುತ್ತಿದೆ. ಅಧಕಾರಿಗಳ ಬಳಿ ಕೇಳಿದರೆ ಏನೇನೋ ಸಬೂಬು ಕೊಡುತ್ತಾರೆ. ನಮ್ಮನ್ನು ಚೆನ್ನಾಗಿ ದುಡಿಸಿಕೊಳ್ಳುತ್ತಾರೆ. ಆದರೆ ನಮ್ಮ ಬವಣೆಯನ್ನು ಮಾತ್ರ ಯಾರೂ ಕೇಳುವುದಿಲ್ಲ. 
– ರವಿಕಲಾ, ಅಧ್ಯಕ್ಷರು ದ.ಕ. ಅಂಗನವಾಡಿ 
ನೌಕರರ ಸಂಘ

ಶೀಘ್ರ ಆಗಲಿದೆ
ಸರಕಾರದಿಂದ ಬಜೆಟ್‌ ಬಂದಿಲ್ಲದ ಕಾರಣ ಈ ಸಲ ಅಂಗನವಾಡಿ ನೌಕರರ ವೇತನ ತಡವಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವರ ಸಭೆಯಲ್ಲಿಯೂ ಪ್ರಸ್ತಾಪಿಸಲಾಗಿದೆ. ಕೂಡಲೇ ವೇತನ ಆಗಲಿದೆ. ಇನ್ನೂ ಜಿಲ್ಲೆಯಲ್ಲಿ ಖಾಲಿಯಿರುವ 42 ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
– ಗ್ರೇಸಿ ಗೋನ್ಸಾಲ್ವಿಸ್‌, ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 

ವಲಯಗಳು    ಅಂಗನವಾಡಿಗಳು ನೌಕರರು
ಕುಂದಾಪುರ           412    812
ಕಾರ್ಕಳ               230    454
ಉಡುಪಿ               274    534
ಬ್ರಹ್ಮಾವರ            275    540
ಒಟ್ಟು                 1,191   2,340

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next