ನೆಲಮಂಗಲ : ತಾಲೂಕಿನ ಓಬಳಾಪುರ ಗ್ರಾಮದ ಅಂಗನವಾಡಿಗೆ ಖಾಸಗಿ ವ್ಯಕ್ತಿಗಳು ಬೀಗ ಹಾಕಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಮಾಡಿದ್ದರು ಸಹ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಗ್ರಾಮದಲ್ಲಿ 30 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದು, ಅಂಗನವಾಡಿಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆಯನ್ನು ಸಹ ಮಾಡಲಾಗಿದೆ.ಅನೇಕ ದಿನಗಳಿಂದ ಆ ಕೊಠಡಿಯಲ್ಲಿಯೇ ಶಿಕ್ಷಣ ಕಲಿಯುತ್ತಿದ್ದಾರೆ. ಆದರೆ ಏಕಾಏಕಿ ಮಕ್ಕಳನ್ನು ಹೊರಗೆ ಹಾಕಿ ಅಂಗನವಾಡಿ ಕಟ್ಟಡಕ್ಕೆ ಖಾಸಗಿ ವ್ಯಕ್ತಿ ಗಳು ಬೀಗ ಹಾಕಿದ್ದು ಇದರ ಬಗ್ಗೆ ನೆಲಮಂಗಲ ತಾಲೂಕಿನ ಸಿಡಿಪಿಒಗೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಸುಮ್ಮನಾಗಿದ್ದಾರೆ ಎಂದು ಪ್ರತಿಭಟನಗಾರರು ಆರೋಪಿಸಿದರು.
ಹೈಡ್ರಾಮ: ನೆಲಮಂಗಲ ನಗರದ ಇಲಾಖೆ ಕಚೇರಿಯ ಆವರಣಕ್ಕೆ ಆಗಮಿಸಿದ ಓಬಳಾಪುರ ಗ್ರಾಮಸ್ಥರು ಅಂಗನವಾಡಿಗೆ ಬೀಗ ಹಾಕಿದವರನ್ನು ಬಂಧನ ಮಾಡಲಿಲ್ಲದಿದ್ದರೆ ನಿಮ್ಮ ಕಚೇರಿಗೂ ಬೀಗ ಹಾಕಿ ಹೋರಾಟ ಮಾಡುತ್ತೇವೆ ಎಂದು ಪಟ್ಟು ಹಿಡಿದರು. ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಬಾರಿ ಹೈಡ್ರಾಮವೇ ನಡೆಯಿತು. ನಂತರ ಮಕ್ಕಳನ್ನು ಕರೆತಂದು ಇಲಾಖೆ ಕಚೇರಿಯ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆ ಹಾಕಿದರು.
ಇದನ್ನೂ ಓದಿ : ಏಕದಿನ ಪಂದ್ಯ : ದಕ್ಷಿಣ ಆಫ್ರಿಕಾವನ್ನು ಸೋಲಿಸಿ ದಾಖಲೆ ಬರೆದ ಬಾಂಗ್ಲಾ
ಹೋರಾಟದ ಎಚ್ಚರಿಕೆ: ಗ್ರಾಮಸ್ಥ ಹನುಮಂತೇಗೌಡ ಮಾತನಾಡಿ ನಮ್ಮ ಗ್ರಾಮದಲ್ಲಿ ಏಕಾಏಕಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿಯವರ ಹಿಂಬಾಲಕನೊಬ್ಬ ಅಂಗನವಾಡಿಗೆ ಬೀಗ ಹಾಕಿದ್ದಾನೆ, ಇದರ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು ಸಹ ಕ್ರಮಕೈಗೊಂಡಿಲ್ಲ. ಅಂಗನವಾಡಿ ಮಕ್ಕಳು ಏನು ದ್ರೋಹ ಮಾಡಿದ್ದಾರೆ. ನಾನು ಜೈಲಿಗೂ ಹೋಗಲು ಸಿದ್ಧ. ನಮಗೆ ನ್ಯಾಯಬೇಕು. ಅಂಗನವಾಡಿ ಬೀಗ ತೆಗೆಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮಕ್ಕಳ ಜತೆ ಹೋರಾಟ ಮಾಡಲಾಗುತ್ತದೆ ಎಂದರು.
ಪ್ರತಿಕ್ರಿಯೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು ಪ್ರತಿಕ್ರಿಯಿಸಿ, ಓಬಳಾಪುರ ಅಂಗನವಾಡಿಗೆ ಬೀಗ ಹಾಕಿರುವ ವಿಚಾರ ತಿಳಿದುಬಂದಿದ್ದು, ಸ್ಥಳ ಪರಿಶೀಲನೆ ಮಾಡಿ ಬೀಗ ತೆಗೆಸುವಂತೆ ಸಿಡಿಪಿಒಗೆ ಸೂಚನೆ ನೀಡಲಾಗಿದೆ. ನಾಳೆಯೇ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು. ಓಬಳಾಪುರ ಗ್ರಾಮಪಂಚಾಯಿತಿ ಸದಸ್ಯ ಸೋಮಶೇಖರ್, ವಕೀಲ ರಾಮಕೃಷ್ಣ, ಗ್ರಾಮಸ್ಥ ರಂಗನಾಥ್, ಆನಂದ್, ಧನಂಜಯ್,ಸತೀಶ್, ಚಂದ್ರಶೇಖರ್ ಮತ್ತಿತರರಿದ್ದರು.